Friday, July 31, 2009

ಬರೇ ಬೇಳೆ ಸಾರಲ್ಲ, ಬೇಳೆ ಕಾಳುಗಳ ಪೌಷ್ಟಿಕ ಸಾರು

ಒಂದೇ ರೀತಿ ಸಾರು, ಹುಳಿ ತಿಂದು ಬೋರಾಗಿದ್ದರೆ ಇಲ್ಲಿ ತಿಳಿಸಿದ ಮಿಶ್ರ ಬೇಳೆ ಕಾಳಿನ ಸಾರು ಮಾಡಿ ನೋಡಿ. ಬಾಯಿಗೂ ರುಚಿ. ಆರೋಗ್ಯಕ್ಕೂ ಹಿತ. ಬಗೆಬಗೆಯ ಕಾಳುಗಳನ್ನು ಸೇರಿಸಿರುವುದರಿಂದ ಹೆಚ್ಚಿನ ಪ್ರೊಟೀನ್ ಇದೆ ಈ ಸಾರಲ್ಲಿ. ಮಕ್ಕಳಿಗಂತೂ ಪೌಷ್ಟಿಕವಾದ ಸಾರು.
* ವೈಶಾಲಿ ಹೆಗಡೆ, ಬೋಸ್ಟನ್
ಪದಾರ್ಥಗಳು:

1/4 ಕಪ್ ಉದ್ದಿನಬೇಳೆ
1/4 ಕಪ್ ಹೆಸರುಬೇಳೆ
1/2 ಕಪ್ ತೊಗರಿಬೇಳೆ
1/4 ಕಪ್ ಹುರುಳಿಕಾಳು
1/4 ಕಪ್ ರಾಜ್ಮ ಅಥವಾ ಕಿಡ್ನಿ ಬೀನ್ಸ್
1/4 ಕಪ್ ಅಲಸಂದೆ ಕಾಳು
1-2 ಟೊಮೇಟೊ
1 ಈರುಳ್ಳಿ
1 ಚಮಚ ಸಾರಿನಪುಡಿ
1/2 ಚಮಚ ಗರಂ ಮಸಾಲ ಪುಡಿ
ಕೊತ್ತಂಬರಿ ಸೊಪ್ಪು, ಸ್ವಲ್ಪ
3-4 ಕೆಂಪು ಅಥವಾ ಹಸಿಮೆಣಸಿನಕಾಯಿ, ಖಾರಕ್ಕೆ ತಕ್ಕಂತೆ
ಒಗ್ಗರಣೆಗೆ ಎಣ್ಣೆ, ಅರಿಶಿನ, ಸಾಸಿವೆ, ಜೀರಿಗೆ ಚಿಟಿಕೆ ಉಪ್ಪು,ಸಕ್ಕರೆ ರುಚಿಗೆ ತಕ್ಕಂತೆ
ಮಾಡುವ ವಿಧಾನ:
ಎಲ್ಲ ಕಾಳುಗಳನ್ನು 3-4 ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಎಲ್ಲ ಬೇಳೆ ಕಾಳುಗಳನ್ನು ಒಟ್ಟಿಗೆ ಕುಕ್ಕರ್ನಲ್ಲಿ ಚೆನ್ನಾಗಿ ಬೇಯಿಸಿ. ಬೇಯಿಸುವಾಗ, ಸ್ವಲ್ಪ ಅರಿಶಿನ, 1/4 ಚಮಚ ಎಣ್ಣೆ ಸೇರಿಸಿದರೆ ಚೆನ್ನಾಗಿ ಅರಳಿ ಬೇಯುತ್ತವೆ.
ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆ ಹಾಕಿಕೊಂಡು, ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಸ್ವಲ್ಪ ಬಾಡಿಸಿ. ಈಗ ಸಾರಿನಪುಡಿ, ಗರಂ ಮಸಾಲ ಪುಡಿ ಸೇರಿಸಿ ಹುರಿಯಿರಿ. ಈಗ ಟೊಮೇಟೊ ಸೇರಿಸಿ, ಉಪ್ಪು, ಚಿಟಿಕೆ ಸಕ್ಕರೆ ಸೇರಿಸಿ ಮುಚ್ಚಿ ಬೇಯಿಸಿ. ಈ ಮಿಶ್ರಣ ಮೆತ್ತಗೆ ಪೇಸ್ಟ್ನಂತೆ ಬೆಂದಾಗ ಬೆಂದ ಬೇಳೆ ಕಾಲಿನ ಮಿಶ್ರಣ ಸೇರಿಸಿ. ನಿಮ್ಮ ಹದಕ್ಕೆ ತಕ್ಕಂತೆ ನೀರು ಸೇರಿಸಿ (ತುಂಬಾ ತೆಳ್ಳಗಿರದಂತೆ ನೋಡಿಕೊಳ್ಳಿ) ಕುದಿಸಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
ಬಿಸಿ ಅನ್ನ ಅಥವ ಘೀ ರೈಸ್, ಜೀರಾ ರೈಸ್ನೊಂದಿಗೆ ಬಡಿಸಿದರೆ ಚೆನ್ನಾಗಿರುತ್ತದೆ

No comments: