Friday, July 31, 2009

ಬಲ್ಲವನೇ ಬಲ್ಲ ಕಿತ್ತಳೆ ಪಲಾವ್ ರುಚಿಯ

*ಪುಷ್ಪಮಾಲಾ, ಮೈಸೂರು
ಈಗಾಗಲೇ ಬಗೆಬಗೆಯ ಪಲಾವ್‌ಗಳನ್ನು ಸವಿದಿರಬಹುದು. ಆದರೆ ಪಂಚೇಂದ್ರಿಯಗಳನ್ನು ಪ್ರೇರಿಪಿಸುವ ಕಿತ್ತಳೆ ಪಲಾವನ್ನುಸವಿದಿರುವವರು ಬಹಳ ಅಪರೂಪ. ಎಲ್ಲ ಪಲಾವ್‌ಗಳಂತೆ ಇದನ್ನು ತಯಾರಿಸುವುದು ತುಂಬಾ ಸುಲಭ.ಈ ಪಲಾವ್‌ಗೆ ಬಳಸುವ ಪದಾರ್ಥಗಳಲ್ಲಿ ಕಿತ್ತಳೆ ಹಣ್ಣು ಬಹಳ ಪ್ರಮುಖ. ಸ್ವಲ್ಪ ಸಿಹಿ, ಒಂಚೂರು ಹುಳಿ,ಖಾರ ಎಲ್ಲವೂ ಬೆರೆತ ಪಲಾವ್‌ನಾಲಿಗೆ ಮೇಲೆ ಹೊರಳುತ್ತಿದ್ದರೆ...ಬಲ್ಲವನೇ ಬಲ್ಲ ಪಲಾವ್‌ರುಚಿಯ!
ಬೇಕಾಗುವ ಪದಾರ್ಥಗಳು
ಬಾಸ್ಮತಿ ಅಕ್ಕಿ: 1 ಲೋಟ
ಹಣ್ಣಾದ ಕಿತ್ತಳೆ: 3
ಬೀಜ ರಹಿತ ದ್ರಾಕ್ಷಿ: ¼ ಕಪ್
ಗೋಡಂಬಿ: 1 ಚಮಚ
ತಾಜಾ ತೆಂಗಿನಕಾಯಿ ತುರಿ: ¼ ಕಪ್
ಏಲಕ್ಕಿ:2
ದಾಲ್ಚಿನ್ನಿ: 1 ಇಂಚಿನ ತುಂಡು
ಪಲಾವ್ ಎಲೆ: 1
ಕಿತ್ತಳೆ ಕೆಂಪು ಬಣ್ಣ: 1 ಚುಟುಕೆ
ಈರುಳ್ಳಿ: 2
ಹಸಿರು ಮೆಣಸಿನಕಾಯಿ: 4 ಅಥವಾ 5
ಬೆಳ್ಳ್ಳುಳ್ಳಿ: 5 ತೊಳೆ
ತುಪ್ಪ; 3 ಚಮಚ
ಶುಂಠಿ: ¼ ಇಂಚಿನ ಒಂದು ತುಂಡು
ಕೊತ್ತಂಬರಿ ಸೊಪ್ಪು: ' ಕಟ್ಟು
ಉಪ್ಪು: ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ
ಮೊದಲು ಬಾಸ್ಮತಿ ಅಕ್ಕಿಯನ್ನು ಶುದ್ಧವಾದ ನೀರಿನಲ್ಲಿ ತೊಳೆದುಕೊಂಡು 10 ನಿಮಿಷ ನೀರಿನಲ್ಲಿ ನೆನೆಸಿ. ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ತೆಳ್ಳಗೆ ಉದ್ದುದ್ದವಾಗಿ ಸೀಳಿರಿ. ತೆಂಗಿನಕಾಯಿ ತುರಿಯಿಂದ, ತೆಂಗಿನ ಹಾಲನ್ನು ಹಿಂಡಿ ತೆಗೆಯಿರಿ. 1 ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದು ಪಕ್ಕಕ್ಕಿಡಿ. ಇನ್ನೆರಡು ಕಿತ್ತಳೆ ಹಣ್ಣಿನಿಂದ ಬೀಜಗಳನ್ನು ಬೇರ್ಪಡಿಸಿ, ರಸ ಕಿವುಚಿಕೊಳ್ಳಿ. ಶುಂಠಿ ಮತ್ತು ಬೆಳ್ಳುಳ್ಳಿಯನ್ನು ನುಣ್ಣಗೆ ರುಬ್ಬಿಟ್ಟುಕೊಳ್ಳಿ.
ನಂತರ ಪ್ರೆಜರ್ ಪ್ಯಾನಿನಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದರಲ್ಲಿ ಮಸಾಲೆ ಪದಾರ್ಥಗಳು,ಹೆಚ್ಚಿಕೊಂಡ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ರುಬ್ಬಿಟ್ಟುಕೊಂಡ ಶುಂಠಿ ಮತ್ತು ಬೆಳ್ಳುಳ್ಳಿ ಹಾಗೂ ಅಕ್ಕಿಯನ್ನು ಸೇರಿಸಿ. 2 ನಿಮಿಷ ಹುರಿಯಿರಿ. ನಂತರ ಕಿತ್ತಳೆ ರಸ, ತೆಂಗಿನಕಾಯಿ ಹಾಲನ್ನು ನೀರಿನೊಂದಿಗೆ ಬೆರೆಸಿ 2 ಲೋಟ ಆಗುವಂತೆ ಮಾಡಿ ಇದನ್ನ್ನು ಪ್ರತ್ಯೇಕವಾಗಿ ಬಿಸಿ ಮಾಡಿ, ಅನ್ನದ ಮೇಲೆ ಸಾಕಷ್ಟು ಉಪ್ಪು ಮತ್ತು ಬಣ್ಣದೊಂದಿಗೆ ಸುರಿಯಿರಿ. ಸಣ್ಣ ಉರಿಯಲ್ಲಿ ಕಲಕಿ 10 ನಿಮಿಷ ಪ್ರೆಜರ್ ಪ್ಯಾನಿನಲ್ಲಿ ಬೇಯಿಸಿರಿ. ಒಲೆಯಿಂದ ಇಳಿಸಿದ ನಂತರ ಹುರಿದ ಗೋಡಂಬಿ, ಕಿತ್ತಳೆ ತೊಳೆಗಳು,ದ್ರಾಕ್ಷಿ ಮತ್ತು ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಬೆರೆಸಿ.
ಹೀಗೆ ತಯಾರಾದ ಪಲಾವನ್ನು ಮಸಾಲೆ ಮೊಸರು ಬಜ್ಜಿ ಅಥವಾ ತರಕಾರಿ ಮೊಸರು ಬಜ್ಜಿಯೊಂದಿಗೆ ಬಡಿಸಿಕೊಂಡು ಸವಿಯಬಹುದು.

No comments: