Friday, July 31, 2009

ಪಲ್ಯ

ಮೆಂತ್ಯೆ ಸೊಪ್ಪು-ಹೆಸರು ಬೇಳೆ ಪಲ್ಯ "ವಿಜಯ ಸತೀಶ್‌"
ಚಪಾತಿ ಅಥವಾ ರೊಟ್ಟಿ ಮಾಡಿದಾಗ ತಪ್ಪದೇ ಈ ಪಲ್ಯ ಮಾಡೋದು ಮರೀಬೇಡಿ... ಜೊತೆಗೆ ಸ್ವಲ್ಪ ನಿಂಬೆಹಣ್ಣು ಹಿಂಡಿದ ಹಸಿ ಈರುಳ್ಳಿ...ಗೋಸಿಬೇಕಾಗುವ ಪದಾರ್ಥಗಳು :
ಮೆಂತ್ಯೆ ಸೊಪ್ಪು - 1 ಕಟ್ಟು (ಎಲೆ ಬಿಡಿಸಿ ತೊಳೆದು ಹೆಚ್ಚಿದ್ದು)
ಹೆಸರು ಬೆಳೆ - 1/2 ಬಟ್ಟಲು(ಹುರಿದಿದ್ದು)
ಈರುಳ್ಳಿ - 1
ಕೆಂಪು ಮೆಣಸಿನ ಪುಡಿ - 1/2 ಚಹಾ ಚಮಚ
ಅರಿಶಿಣ ಪುಡಿ - 1 ಚಿಟಿಕೆ
ಗರಂ ಮಸಾಲ - 1/2 ಚಹಾ ಚಮಚ
ಎಣ್ಣೆ - 3 ಚಹಾ ಚಮಚ
ಸಾಸಿವೆ, ಜೀರಿಗೆ(ಒಗ್ಗರಣೆಗೆ)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಪಾತ್ರೆಗೆ ಎಣ್ಣೆ ಹಾಕಿಕೊಂಡು ಓಲೆಯ ಮೇಲಿಡಿ. ಎಣ್ಣೆ ಕಾದ ಬಳಿಕ ಸಾಸಿವೆ ಮತ್ತು ಜೀರಿಗೆ ಹಾಕಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ.

ಈರುಳ್ಳಿ ಬೆಂದ ನಂತರ ಕೆಂಪು ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ, ಉಪ್ಪು ಹಾಕಿ, ಕೈಯಾಡಿಸಿ. ಈಗ ಹೆಚ್ಚಿದ ಮೆಂತ್ಯ ಸೊಪ್ಪು ಹಾಗೂ ಹುರಿದ ಹೆಸರು ಬೇಳೆ, 1/2 ಲೋಟ ನೀರನ್ನು ಹಾಕಿ, ಪಾತ್ರೆಯ ಮುಚ್ಚಳ ಮುಚ್ಚಿ. ಹೆಸರು ಬೇಳೆ ಬೇಯುವವರೆಗೆ ಕುದಿಸಿ.
ಈ ಪಲ್ಯವನ್ನು ಚಪಾತಿ, ಜೋಳದ ರೊಟ್ಟಿಯ ಜತೆ ತಿಂದರೆ ಚೆನ್ನಾಗಿರುತ್ತೆ.
ಕೋಸಿನ ಪಲ್ಯಸುನಂದಾ ಅರುಣ್‌ಕುಮಾರ್‌, ಯುಎಸ್‌ಎ
ಚಪಾತಿಗೆ ಪಲ್ಯ ಹಾಕಿ ರೋಲ್‌ ಮಾಡಿ ಕೊಟ್ಟರೆ ಮಕ್ಕಳು ಇಷ್ಟಪಡುತ್ತಾರೆ. ಬ್ರೆಡ್‌ಗೆ ಪಲ್ಯ ಹಾಕಿ ಟೋಸ್ಟ್‌ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ. ಬೇಕಾಗುವ ಪದಾರ್ಥಗಳು :

ಕೋಸು(ಮಧ್ಯಮ ಪ್ರಮಾಣದಲ್ಲಿ ಹೆಚ್ಚಿರುವುದು)
5 ಹಸಿಮೆಣಸಿನಕಾಯಿ(ಹೆಚ್ಚಿದ್ದು)
ಅಡುಗೆ ಎಣ್ಣೆ
ಸಾಸಿವೆ
ಕಡಲೇಬೇಳೆ
ಕರಿಬೇವು
ಅರಿಶಿನ
ಉಪ್ಪು
ಕೋತಂಬರಿ

ಮಾಡುವ ವಿಧಾನ :
ಬಾಣಲೆಗೆ ಪ್ರಮಾಣ ಬದ್ಧವಾಗಿ ಅಡುಗೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದರಲ್ಲಿ ಕಡಲೇಬೇಳೆ, ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಹಾಗೂ ಕೋಸನ್ನು ಹಾಕಿ. ನೀರು ಹಾಕದೆ ಹಾಗೇ ಹುರಿಯುತ್ತಿರಿ. ಅದು ಬೆಂದ ಮೇಲೆ ಅರಿಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್‌ ಮಾಡಿ. ಕೊನೆಗೆ ಕೋತಂಬರಿ ಸೊಪ್ಪು ಹಾಕಿ. ಬೇಕಾದರೆ ಕಾಯಿತುರಿ ಹಾಕಿಕೊಳ್ಳಬಹುದು. ಈಗ ಕೋಸು ಪಲ್ಯ ರೆಡಿ.ಹೀಗೇ ಕ್ಯಾರೆಟ್‌, ಗೆಡ್ಡೆಕೋಸು, ಬೀಟ್‌ರೂಟ್‌, ಸೀಮೆ ಬದನೇಕಾಯಿ ತುರಿದು ಮಾಡಬಹುದು. ಬೀನ್ಸ್‌, ಹೀರೇಕಾಯಿ, ಇವುಗಳನ್ನು ಸಣ್ಣಗೆ ಹೆಚ್ಚಿ ಮಾಡಬೇಕು(ಇದಕ್ಕೆ ಸ್ವಲ್ಪ ನೀರು ಹಾಕಬೇಕು). ಈರುಳ್ಳಿ ಹಾಗೂ ಕಾಯಿತುರಿ ಹಾಕಿದರೆ ತುಂಬಾ ಚೆನ್ನಾಗಿರುತ್ತದೆ. ಚಪಾತಿಗೆ ಪಲ್ಯ ಹಾಕಿ ರೋಲ್‌ ಮಾಡಿ ಕೊಟ್ಟರೆ ಮಕ್ಕಳು ಇಷ್ಟಪಡುತ್ತಾರೆ. ಬ್ರೆಡ್‌ಗೆ ಪಲ್ಯ ಹಾಕಿ ಟೋಸ್ಟ್‌ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ.
ಆಹಾ, ಹಾಗಲ! ಎರಡು ಪಲ್ಯ, ಒಂದು ಚಟ್ನಿ!ಜಯಂತಿ ಎಚ್‌ ವಿ; ಬೆಂಗಳೂರು
ಹೊಸ ವರ್ಷವನ್ನು ಹಾಗಲಕಾಯಿಯ ಕಹಿರುಚಿಯಿಂದ ಆರಂಭಿಸೋಣ. ಯಾಕೆಂದರೆ ಇದರಲ್ಲಿ ಆರೋಗ್ಯ ಭಾಗ್ಯದ ಹಲವು ಸೂತ್ರಗಳು ಚಟ್ನಿ-ಪಲ್ಯದ ರೂಪದಲ್ಲಿ ಸಾಕಾರಗೊಳ್ಳುತ್ತವೆ.
ಹಾಗಲಕಾಯಿ ಒಂದು ಒಳ್ಳೆಯ ತರಕಾರಿ. ಕಹಿಯಿರುವುದರಿಂದ ಔಷಧೀಯ ಗುಣವೂ ಅದರಲ್ಲಿದೆ. ಹಾಗಲ ರುಚಿಯಲ್ಲಿ ಕಹಿಯಾದರೂ, ದೇಹಾರೋಗ್ಯಕ್ಕೆ ಸಿಹಿ. ಹಾಗಲದಂಥ ತರಕಾರಿಯಿಲ್ಲ ಎನ್ನುತ್ತಾರೆ ಅನುಭವಸ್ಥರು.
ತುಳುನಾಡಿನಲ್ಲಂತೂ ‘ಕಂಚಾಲ್‌ ಇತ್ತ್‌ಂಡಾ ಎಂಚಾಲಾ ಉಣೋಳಿ...’ (ಹಾಗಲಕಾಯಿ ಇದ್ದರೆ ಹೇಗೂ ಉಣ್ಣಬಹುದು) ಎಂಬ ನಾಣ್ಣುಡಿಯೇ ಇದೆ. ಹಾಗಲ ತಿನ್ನುವುದರಿಂದ ಹೊಟ್ಟೆಯಲ್ಲಿನ ಹುಳುಗಳು ಸಾಯುತ್ತವೆ ಎನ್ನುತ್ತಾಳೆ ಅಜ್ಜಿ . ಹಾಗಲ ಮಧುಮೇಹಕ್ಕೆ, ಅರ್ಥಾತ್‌ ಸಕ್ಕರೆ ಕಾಯಿಲೆಗೆ ರಾಮಬಾಣ ಎನ್ನುತ್ತಾರೆ ಅಳಲೇಕಾಯಿ ಪಂಡಿತಧಿರು. ಒಟ್ಟಾರೆ ಸಾರಾಂಶ ಇಷ್ಟೇ, ಹಾಗಲ ಎನ್ನುವುದು ತರಕಾರಿಯಷ್ಟೇ ಅಲ್ಲ , ಔಷಧಿಯೂ ಹೌದು. ಹಾಗಾಗಿ ರುಚಿಯಷ್ಟೇ ಅಲ್ಲ , ಆರೋಗ್ಯಭಾಗ್ಯವೂ ಹಾಗಲದಿಂದ ಲಭ್ಯ ಎಂದಾಯಿತು.
ಇಂತಿಪ್ಪ ಹಾಗಲಕಾಯಿಯಿಂದ ರುಚಿಯಾದ ಖಾದ್ಯಗಳ ಮಾಡುವುದು ಹೇಗೆ ? ಬನ್ನಿ, ಹಾಗಲಕಾಯಿಯ ಎರಡು ನಮೂನೆ ಪಲ್ಯಗಳನ್ನು ಹಾಗೂ ಚಟ್ನಿಯನ್ನು ಮಾಡೋಣ. ಮಾಡಿ ಸವಿಯೋಣ. ಸವಿದು ಆರೋಗ್ಯವಂತರಾಗೋಣ.
ಹಾಗಲಕಾಯಿ ಪಲ್ಯ (ವಿಧಾನ 1)
ಬೇಕಾಗುವ ಪದಾರ್ಥ:
ಹಾಗಲಕಾಯಿ - 1/4 ಕೆಜಿ
ಕೊತ್ತಂಬರಿ - 3 ಟೇಬಲ್‌ಸ್ಪೂನ್‌
ಕೆಂಪು ಮೆಣಸು - 8 ಅಥವಾ 10
ತುರಿದ ತೆಂಗಿನಕಾಯಿ - 3/4 ಕಪ್‌
ಹುಣಿಸೆಹಣ್ಣು - 1/2 ನಿಂಬೆಗಾತ್ರದ್ದು
ಬೆಲ್ಲ - 100 ಗ್ರಾಮ್‌ನಷ್ಟು
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಹಾಗಲಕಾಯಿಯನ್ನು ಸಣ್ಣಕ್ಕೆ ಹೆಚ್ಚಿಕೊಂಡು, ಬಾಣಲೆಯಲ್ಲಿ ಎಣ್ಣೆ ಇಟ್ಟು, ಸಾಸಿವೆ ಕಡಲೆಬೇಳೆ, ಉದ್ದಿನ ಬೇಳೆ ಒಗ್ಗರಣೆ ಹಾಕಿ, ಸಾಸಿವೆ ಸಿಡಿದ ನಂತರ ಹಾಗಲಕಾಯಿಯನ್ನು ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು. ಕೊತ್ತಂಬರಿ, ಮೆಣಸು, ಕಾಯಿತುರಿ, ಬೆಲ್ಲ , ಹುಣಿಸೆ - ಇಷ್ಟನ್ನು ಮಿಕ್ಸಿಯಲ್ಲಿ ಅರೆದು, ಬೆಂದ ಹಾಗಲಕಾಯಿಗೆ ಹಾಕಿ ಇನ್ನೂ ಸ್ವಲ್ಪಹೊತ್ತು ಚೆನ್ನಾಗಿ ಕುದಿಸಬೇಕು.
ಘಂ ಎನ್ನುವ ಹಾಗೂ ಆರೋಗ್ಯಕರ ಹಾಗಲ ಪಲ್ಯ ಸಿದ್ಧ .

ಹಾಗಲಕಾಯಿ ಪಲ್ಯ : ವಿಧಾನ -2
ಬೇಕಾಗುವ ಪದಾರ್ಥ:
ಹಾಗಲಕಾಯಿ - 1/4 ಕೆಜಿ
ಹಸಿರು ಮೆಣಸು (ಕಾಯಿ) - 4 ಅಥವಾ 5
ಈರುಳ್ಳಿ 1 (ಮಧ್ಯಮ ಗಾತ್ರ)
ನಿಂಬೆ - 1 ಹೋಳು
ಕಾಯಿತುರಿ - 3-4 ಚಮಚ

ಉಪ್ಪು - ರುಚಿಗೆ ತಕ್ಕಷ್ಟು .
ಮಾಡುವ ವಿಧಾನ : ಮೊದಲು ಕಡಲೆಬೇಲೆ-ಉದ್ದಿನಬೇಳೆ-ಸಾಸಿವೆ ಒಗ್ಗರಣೆ ಹಾಕಿ. ಸಾಸಿವೆ ಸಿಡಿದ ನಂತರ ಹಸಿಮೆಣಸಿನ ಹೋಳುಗಳನ್ನು ಸೇರಿಸಿ ಆಮೆಲೆ ಈರುಳ್ಳಿ (ಸಣ್ಣಗೆ ಹೆಚ್ಚಿಟ್ಟದ್ದು) ಹಾಕಿ. ಈರುಳ್ಳಿ ಸ್ವಲ್ಪ ಬಾಡಿದ ನಂತರ ಹಾಗಲಕಾಯಿ ಹಾಕಿ. ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಬೇಕು. ಬೆಂದ ನಂತರ ತೆಂಗಿನಕಾಯಿ ಉದುರಿಸಿ ನಿಂಬೆರಸ ಸೇರಿಸಿ ಕಲಸಿ. ಇದನ್ನು ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನಲಿಕ್ಕೆ ಸಕತ್ತಾಗಿರುತ್ತದೆ! ಹಾಗಲಕಾಯಿ ಚಟ್ನಿಬೇಕಾಗುವ ಪದಾರ್ಥ:

ಹಾಗಲಕಾಯಿ - 1/4 ಕೆಜಿ
ಕಡಲೆ ಬೇಳೆ - 2 ಟೇಬಲ್‌ಸ್ಪೂನ್‌
ಉದ್ದಿನಬೇಳೆ - 2 ಟೇಬಲ್‌ಸ್ಪೂನ್‌
ಕೆಂಪು ಮೆಣಸು - 8 ಅಥವಾ 10
ಮಾಡುವ ವಿಧಾನ : ಕಡಲೆ ಬೇಳೆ, ಉದ್ದಿನಬೇಳೆ, ಕೆಂಪುಮೆಣಸನ್ನು ಜತೆಯಾಗಿ ಹುರಿದುಕೊಂಡು, ಹುಣಸೆಹಣ್ಣು , ಬೆಲ್ಲ , ಉಪ್ಪು, ಮತ್ತು ಹಾಗಲಕಾಯಿ (ಪ್ರತ್ಯೇಕವಾಗಿ ಹುರಿದದ್ದು) ಹಾಕಿ ಮಿಕ್ಸಿಯಲ್ಲಿ ಅರೆದರೆ ಚಟ್ನಿ ರೆಡಿ! ಅನ್ನಕ್ಕಾದರೂ ಸೈ, ಚಪಾತಿ-ರೊಟ್ಟಿಗಾದರೂ ಸರಿ.
ಹಾಗಲದ ಪದಾರ್ಥಗಳನ್ನು ತಿನ್ನಿ ; ಆರೋಗ್ಯವಂತರಾಗಿರಿ.
ಕೋಸಿನ ಪಲ್ಯ’ ಹೀಗೆ ಮಾಡಿದ್ರೆ ಹೇಗೆ?ಸಾಮಾನ್ಯವಾಗಿ ಎಲ್ಲರೂ ಕೋಸು ಪಲ್ಯ ಮಾಡ್ತಾರೆ. ಆದರೆ ಪ್ರಿಯಂವದಾ ಥರ ಮಾಡಕ್ಕೆ ನಿಮಗೆ ಬರತ್ತಾ? ಕಲಿತುಕೊಳ್ಳಿ.ಪ್ರಿಯಂವದಾ ಅಗತ್ಯ ಪದಾರ್ಥಗಳು :

2 ಕಪ್‌ ಸಣ್ಣಗೆ ಹಚ್ಚಿದ ಕೋಸು
1 ಟೊಮಾಟೊ
1/2 ಕಪ್‌ ಬಟಾಣಿ
2 ದೊಡ್ಡ ಮೆಣಸಿನಕಾಯಿ
1/2 ಚಮಚ ಜೀರಿಗೆ ಪುಡಿ
1/2 ಚಮಚ ಕಾರದ ಪುಡಿ
1/4 ಚಮಚ ಧನಿಯ ಪುಡಿ
1/2 ಚಮಚ ಗರಂ ಮಸಾಲ
1/4 ಚಮಚ ಅರಿಶಿನದ ಪುಡಿ
1/2 ಚಮಚ ಸಕ್ಕರೆ (ಬೇಕಿದ್ದರೆ)
ಕಾಯಿತುರಿ (ಬೇಕಿದ್ದರೆ)
ಸ್ವಲ್ಪ ಕರಿಬೇವು,
ಕೊತ್ತಂಬರಿ ಸೊಪ್ಪು ,
ಚಿಟಿಕೆ ಹಿಂಗು,
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ಕ್ರಮ : ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ. ಅದು ಕಾದನಂತರ ಸಾಸಿವೆ, ಜೀರಿಗೆಯ ಒಗ್ಗರಣೆ ಹಾಕಿ. ಅದಕ್ಕೆ ಹಿಂಗು, ಕರಿಬೇವು, ಅರಿಶಿನ ಬೆರೆಸಿ. ನಂತರ ದೊಡ್ಡ ಮೆಣಸಿನಕಾಯಿ, ಬಟಾಣಿ ಹಾಕಿ ಸ್ವಲ್ಪ ಕಲಕಿ. ಆಮೇಲೆ ಹಚ್ಚಿದ ಕೋಸನ್ನು ಹಾಕಿ ನೀರು ಚಿಮುಕಿಸಿ ಚೆನ್ನಾಗಿ ಬಾಡಿಸಿ. ಎರಡು ನಿಮಿಷ ಮುಚ್ಚಳ ಮುಚ್ಚಿಡಿ.ಕೋಸು ಅರ್ಧ ಬೆಂದ ಮೇಲೆ ಮಸಾಲೆ, ಉಪ್ಪು, ಟೊಮಾಟೋ ಬೆರೆಸಬೇಕು. ನಂತರ ಕಡಿಮೆ ಉರಿಯಲ್ಲಿ ಬೇಯಿಸಿ. ಬಡಿಸುವ ಮೊದಲು ಕೊತ್ತಂಬರಿ ಸೊಪ್ಪು, ಒಂದು ಚಮಚ ತೆಂಗಿನತುರಿ, ಸಕ್ಕರೆ (ಬೇಕಿದ್ದಲ್ಲಿ) ಬೆರೆಸಿ. ಸಿದ್ಧವಾದ ಕೋಸಿನ ಬಲ್ಯವನ್ನು ತಟ್ಟೆಗೆ ಬಡಿಸಿಕೊಂಡು ರುಚಿ ನೋಡಿ.
ನಮ್ಮ ಟಿಪ್ಸ್‌ : ತೊಗರಿಬೇಳೆಯ ಡಬ್ಬಿಯಲ್ಲಿ 15 ಇಪ್ಪತ್ತು ಲವಂಗಗಳನ್ನು ಒಂದು ಸಣ್ಣ ಬಟ್ಟೆಯಲ್ಲಿ ಕಟ್ಟಿಡಿ. ಹೀಗೆ ಮಾಡಿದರೆ ಲವಂಗದ ವಾಸನೆಗೆ ಹುಳಗಳು ಪರಾರಿಯಾಗುತ್ತವೆ.

No comments: