Friday, July 31, 2009

ಹೂಕೋಸು ಮತ್ತು ಹಸಿ ಬಟಾಣಿ ಬಾತ್

ಸುಲೋಚನಾ, ಬೆಂಗಳೂರು
ಅದೇ ಉಪ್ಪಿಟ್ಟು, ಚಿತ್ರಾನ್ನ, ರೈಸ್‌ಬಾತ್ ತಪ್ಪಿದರೆ ಇಡ್ಲಿ, ವಡೆ ಸಾಂಬಾರ್, ದೋಸೆ. ಸಾಕಪ್ಪ ಸಾಕು ಎನ್ನುವ ಮಂದಿಗೆ ಇಲ್ಲಿದೆ ಹೊಸ ಬಾತ್ ಐಟಂ. ನಿಮ್ಮ ನಾಲಗೆ ರುಚಿ ತಣಿಸಲು ಹಾಗೂ ನಿಮ್ಮ ವಾರದ ಉಪಹಾರ ಪಟ್ಟಿಗೆ ಇದನ್ನು ಹೊಸದಾಗಿ ಸೇರ್ಪಡಿಸಿಕೊಳ್ಳಬಹುದು. ಪಾಕಶಾಸ್ತ್ರದಲ್ಲಿ ಆಆಇಈ ಕಲಿಯುತ್ತಿರುವವರು ಸುಲಭವಾಗಿ ಮಾಡಬಹುದಾದ ಅಡುಗೆ. ಒಮ್ಮೆ ಪ್ರಯತ್ನಿಸಿ.

ಬೇಕಾಗುವ ಪದಾರ್ಥಗಳು:
ಅಕ್ಕಿ : 1ಲೋಟ
ದೊಡ್ಡ ಗಾತ್ರದ ಈರುಳ್ಳಿ :2
ದೊಡ್ಡ ಗಾತ್ರದಟೊಮಾಟೋ: 3
ಹೂಕೋಸು:1
ಕೆಂಪು ಮೆಣಸಿನಕಾಯಿ ಪುಡಿ: ಅರ್ಧ ಚಮಚ
ಗರಂ ಮಸಾಲ ಪುಡಿ: ಅರ್ಧ ಚಮಚ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು: ಸ್ವಲ್ಪ
ಎಣ್ಣೆ : 2 ಚಮಚ
ನಿಂಬೆಹಣ್ಣು: 1
ಉಪ್ಪು:ರುಚಿಗೆ ತಕ್ಕಷ್ಟು
ಮಸಾಲೆ ತಯಾರಿಕೆ: ಸಣ್ಣ ಈರುಳ್ಳಿ- 7 ;ಹಸಿರು ಮೆಣಸಿನ ಕಾಯಿ- 4; ಹಸಿ ಶುಂಠಿಯ ಸಣ್ಣ ತುಂಡು. ಮೊದಲು ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಅರ್ಧ ಚಮಚ ಎಣ್ಣೆಯಲ್ಲಿ ಹುರಿಯಿರಿ. ನಂತರ ಹಸಿ ಶುಂಠಿಯೊಂದಿಗೆ ಅದನ್ನು ರುಬ್ಬಿಕೊಳ್ಳಿರಿ.
ಮಾಡುವ ವಿಧಾನ:
ಈರುಳ್ಳಿಯನ್ನು ಮೊದಲು ಸಣ್ಣಗೆ ಹೆಚ್ಚಿಕೊಳ್ಳಿ. ಟೊಮಾಟೊವನ್ನು 10 ನಿಮಿಷ ಬಿಸಿನೀರಿನಲ್ಲಿ ನೆನೆಸಿ. ಅದರ ಸಿಪ್ಪೆ ತೆಗೆದು ರುಬ್ಬಿಟ್ಟುಕೊಳ್ಳಿ. ಈಗ ಶೋಧಿಸಿ, ತಿರುಳನ್ನು ಬೇರ್ಪಡಿಸಿರಿ. ಹೂಕೋಸನ್ನು ಸಣ್ಣ ತುಂಡುಗಳಾಗಿ ಹೆಚ್ಚಿ. ಅದನ್ನು ಉಪ್ಪು ಮತ್ತು ಅರಿಶಿನಪುಡಿ ಸೇರಿಸಿದ ನೀರಿನಲ್ಲಿ ನೆನೆಸಿ. ಕೆಲ ನಿಮಿಷಗಳ ನಂತರ ಹೂಕೋಸನ್ನು ಹೊರತೆಗೆದು ಗರಿಗರಿಯಾಗಿ ಎಣ್ಣೆಯಲ್ಲಿ ಹುರಿದಿಟ್ಟುಕೊಳ್ಳಿ.
ಹಸಿ ಬಟಾಣಿಯನ್ನು ಪ್ರತ್ಯೇಕವಾಗಿ ಬೇಯಿಸಿಕೊಳ್ಳಿ. ಎರಡು ಲೋಟ ನೀರಿನಲ್ಲಿ ಅಕ್ಕಿಯನ್ನು ನೆನೆಸಿ. ಕುಕ್ಕರಿನಲ್ಲಿ ಬೇಯಿಸಿರಿ. ಅದು ತಣ್ಣಗಾಗಲು ಮತ್ತು ಹುಡಿ ಹುಡಿಯಾಗಲು ಸ್ವಲ್ಪ ಕಾಲ ಅಗಲವಾದ ಪಾತ್ರೆಯಲ್ಲಿ ಹರಡಿ.
ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ. ಈರುಳ್ಳಿಯನ್ನು ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಇದಕ್ಕೆ ರುಬ್ಬಿಟ್ಟುಕೊಂಡ ಟೊಮಾಟೊ ಹಾಗೂ ಈರುಳ್ಳಿ , ಹಸಿ ಶುಂಠಿಯ ಮಸಾಲೆ ಸೇರಿಸಿ. ನೀರಿನ ಅಂಶ ಇಂಗುವವರೆಗೆ ಹುರಿಯಿರಿ. ಈಗ ಉಪ್ಪು, ಕೆಂಪು ಮೆಣಸಿನಪುಡಿ, ಗರಂ ಮಸಾಲೆ ಮತ್ತು ಬೇಯಿಸಿದ ಬಟಾಣಿ ಸೇರಿಸಿ ಚೆನ್ನಾಗಿ ಕಲಸಿರಿ. ನಂತರ ಈ ಪಾತ್ರೆಗೆ ಮೊದಲೇ ತಯಾರಿಸಿಕೊಂಡ ಅನ್ನ ಮತ್ತು ಅರ್ಧದಷ್ಟು ಹುರಿದಿಟ್ಟ ಹೂಕೋಸನ್ನು ಸೇರಿಸಿ. ಕೆಲ ನಿಮಿಷಗಳಕಾಲ, ಅನ್ನ ಬಿಸಿಯಾಗುವವರೆಗೆ ಹುರಿಯಿರಿ. ನಂತರ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ. ಅದಕ್ಕೆ ಹುರಿದ ಗೋಡಂಬಿ, ನಿಂಬೆ ಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಕಲಸಿ.
ಉಳಿದ ಹುರಿದ ಹೂಕೋಸು, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ತಾಜಾ ತೆಂಗಿನಕಾಯಿ ತುರಿಯಿಂದ ಬಾತ್ ಅನ್ನು ಅಲಂಕರಿಸಿ ಸವಿಯಬಹುದು.

No comments: