Friday, July 31, 2009

ಪಡವಲಕಾಯಿ ಗಸಿ ಅಥವಾ ಪಟ್ಲಕಾಯಿ ಹಶಿ

ನೋಡಲು ಹಾವಿನಂತೆ ಜೋತುಬೀಳುವ ಪಡವಲಕಾಯಿ ಹಶಿ ಅಥವಾ ಪಟ್ಲಕಾಯಿ ಗಸಿ ಬಲೇ ಆರೋಗ್ಯಕರ. ವಿಟಮಿನ್ ಮತ್ತು ನೀರಿನಿಂಶ ಜಾಸ್ತಿ ಇರುವ ಈ ತರಕಾರಿ ತಿಂದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಹಾಗೆಯೇ ಇದರ ಹಸಿರು ಎಲೆಗಳು ಕೂಡ ಕಾಮಾಲೆ ರೋಗ ಮತ್ತು ಹೃದ್ರೋಗಗಳಿಗೆ ಉತ್ತಮ ಔಷಧಿ. ಇದರಿಂದ ತಯಾರಿಸುವ ಬೋಂಡಾ ಕೂಡ ಬಲು ರುಚಿಕರ.

ಪಡವಲಕಾಯಿ ಒಂದು ಉತ್ತಮ ಕಾಯಿಪಲ್ಲೆ ಆಗಿದೆ. ಮಲಬದ್ಧತೆಗೆ ಇದು ತುಂಬಾ ಉಪಯುಕ್ತ. ಕೆಲವೆಡೆ ಇದನ್ನು ಪಟ್ಲಕಾಯಿ ಎಂದೂ ಹೇಳುತ್ತಾರೆ. ಇಂಗ್ಲೀಷಿನಲ್ಲಿ "Snake gourd" ಎಂದು ಹೇಳುವುದಲ್ಲದೇ, "Serpent gourd" ಎಂದೂ ಹೇಳುತ್ತಾರೆ. ಪಡವಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್‌ಗಳು ಹಾಗೂ ನೀರು ತುಂಬಿರುವುದು ಸಂಶೋಧನೆಯಲ್ಲಿ ಕಂಡುಬಂದಿದೆ. ಕೊಬ್ಬಿನಂಶಗಳು ಹೆಚ್ಚಿನ ಪ್ರಮಾಣದಲ್ಲಿಲ್ಲ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಹುದು. ಅಪಾಯಕಾರಿಯಲ್ಲ. ಇದರಲ್ಲಿ ಮೆಗ್ನೇಶಿಯಮ್, ಕ್ಯಾಲ್ಶಿಯಮ್ ಹಾಗೂ ರಂಜಕಗಳ ಖನಿಜಾಂಶಗಳು ಹೇರಳವಾಗಿವೆ. ಇದರ ಹಸಿರೆಲೆಗಳು ಕಾಮಾಲೆ ರೋಗಕ್ಕೆ, ಹೃದಯ ರೋಗ, ಜ್ವರ, ಅತಿಯಾದ ಕೂದಲುದುರುವಿಕೆ ಮುಂತಾದ ಸಮಸ್ಯೆಗಳಿಗೆ ಉತ್ತಮ ಔಷಧವೆಂದು ಸಾಬೀತಾಗಿದೆ. ಆಯುರ್ವೇದದಲ್ಲಿ ವಿಷ ಸೇವಿಸಿದ ವ್ಯಕ್ತಿಯಿಂದ ವಿಷವನ್ನು ಕಾರಿಸಿ ಹೊರ ತೆಗೆಯಲೂ ಈ ಪಡವಲ ಕಾಯಿಯನ್ನು ಬಳಸುತ್ತಾರೆ.
ಈ ಕಾಯಿಪಲ್ಲೆಯ ಹಶಿಯನ್ನು ಉತ್ತರಕನ್ನಡದ ಕಡೆ ಹೆಚ್ಚಾಗಿ ಮಾಡುತ್ತಾರೆ. ಬಿಸಿ ಅನ್ನದೊಂದಿಗೆ ಇದನ್ನು ತೆಗೆದುಕೊಂಡರೆ ಬಲು ರುಚಿಕರ.
ಬೇಕಾಗುವ ಸಾಮಗ್ರಿಗಳು :

ಪಡವಲಕಾಯಿ - ಒಂದು (ಸಾಮಾನ್ಯ ಗಾತ್ರದ್ದು).
ತೆಂಗಿನಕಾಯಿಯ ತುರಿ - ಅರ್ಧ ಭಾಗದಲ್ಲಿ ಅರ್ಧದಷ್ಟು.
ಇಂಗು - ಚಿಟಿಕೆಯಷ್ಟು.
ಸಾಸಿವೆ - 1/2 ಚಮಚ
ಕಡ್ಡಿ ಮೆಣಸು (ಕೆಂಪು ಮೆಣಸು)- ಒಂದು
ಬೆಲ್ಲ - ರುಚಿಗೆ ತಕ್ಕಷ್ಟು. ಸಾಮಾನ್ಯವಾಗಿ ೧-೨ ಚಮಚ ಬೆಲ್ಲವನ್ನು ಹಾಕುತ್ತೇವೆ.
ಉಪ್ಪು - ರುಚಿಕೆ ತಕ್ಕಷ್ಟು
ಮೊಸರು - 2 ಸೌಟು
ಒಗ್ಗರಣೆಗೆ ತೆಂಗಿನೆಣ್ಣೆ - 1/2 ಅಥವಾ 1 ಚಮಚ

ಮಾಡುವ ವಿಧಾನ :
* ಮೊದಲಿಗೆ ಪಡವಲ ಕಾಯಿಯನ್ನು ಚೆನ್ನಾಗಿ ತೊಳೆದು, ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಬೇಕು.
* ನಂತರ ಇದಕ್ಕೆ ಸ್ವಲ್ಪ ಬೆಲ್ಲ ಹಾಗೂ ಉಪ್ಪನ್ನು ಹಾಕಿ ಬೇಯಿಸಬೇಕು. ತುಂಬಾ ಕರಟುವಂತೆ ಬೇಯಬಾರದು. ಹದವಾಗಿ ಬೇಯಿಸಿಕೊಂಡರೆ ಸಾಕು. ಬೆಂದ ಮೇಲೆ ತಣಿಯಲು ಬಿಡಬೇಕು.
* ತೆಂಗಿನತುರಿಯನ್ನು ನುಣ್ಣಗೆ ಬೀಸಿಕೊಳ್ಳಬೇಕು. ಇದಕ್ಕೆ ಬೇಯಿಸಿ ಚೆನ್ನಾಗಿ ತಣಿಸಿದ ಪಡವಲಕಾಯಿಯನ್ನು ಹಾಕಬೇಕು. (ಸ್ವಲ್ಪ ಬಿಸಿ ಇದ್ದರೂ ಕಾಯಿಗೆ ಹಾಕಿದ ತುಸು ಹೊತ್ತಿಗೇ ಕಸರಾಗುವ ಸಾಧ್ಯತೆ ಇದೆ. ಹಾಗಾಗಿ ಸಂಪೂರ್ಣ ತಣಿದ ನಂತರವೇ ಸೇರಿಸಬೇಕು.)
* ಈ ಮಿಶ್ರಣಕ್ಕೆ ಮೊಸರನ್ನು ಹಾಕಿ, ಬೇಕಿದ್ದರೆ ಉಪ್ಪು ಹಾಗೂ ನೀರನ್ನು ಸ್ವಲ್ಪ ಸೇರಿಸಿ, ಇದಕ್ಕೆ ಸಾಸಿವೆ, ಇಂಗು ಹಾಗೂ ಕಡ್ಡಿಮೆಣಸು ಚೂರುಗಳ ಒಗ್ಗರಣೆ ಹಾಕಿದರೆ ಘಮ್ಮೆನ್ನುವ ಪಟ್ಲಕಾಯಿ ಹಶಿ ಬಿಸಿ ಅನ್ನಕ್ಕೆ ಕಲಸಿಕೊಂಡು ತಿನ್ನಲು ರೆಡಿ.

No comments: