Friday, July 31, 2009

ನಾಲಿಗೆ ಚಾಪಲ್ಯಕ್ಕೆ ಮಾವಿನಕಾಯಿ ಚಿತ್ರಾನ್ನ

ಬೇಸಿಗೆ ಕಾಲಿಡುತ್ತಿದ್ದಂತೆ ಮಾವಿನಮರದ ಹಸಿರೆಲೆ ನಡುವೆ ಹಾಡುವ ಕೋಗಿಲೆಯ ಇಂಪಾದ ಗಾನವನ್ನು ಕೇಳುವುದೇ ಒಂದು ಆನಂದ. ಜೊತೆಗೇ ಗೊಂಚಲು ಗೊಂಚಲಾಗಿ ತೂಗುಬಿದ್ದಿರುವ ಎಳೆ ಮಾವಿನಕಾಯಿ ಹೊಟ್ಟೆ ಚುರುಗುಟ್ಟುವಂತೆ ಮಾಡುತ್ತದೆ. ಕಲ್ಲು ಹೊಡೆದು (ಅವಕಾಶವಿದ್ದರೆ) ಕಲ್ಲಿನಿಂದಲೇ ಕುಟ್ಟಿ ಮನೆಲಿಂದ ಕದ್ದು ತಂದ ಉಪ್ಪು, ಖಾರ ಹಾಕಿ ಮಾವಿನಕಾಯಿ ಮೆಲ್ಲುವುದು ಯಾರಿಗೆ ಇಷ್ಟವಾಗಲಿಕ್ಕಿಲ್ಲ. ನಾಲಿಗೆ ಚಾಪಲ್ಯವನ್ನು ಹಿಡಿದಿಡುವುದು ಶಕ್ಯವಲ್ಲ, ಸಾಧುವೂಅಲ್ಲ.
ಅದೇ ಮಾವಿನಕಾಯಿಯಿಂದ ತಯಾರಿಸಿದ ಚಿತ್ರಾನ್ನ ಅಡುಗೆಯಲ್ಲಿ ವೆರೈಟಿಯನ್ನು ತಂದುಕೊಡುತ್ತದೆ. ಬೆಳಗಿನ ತಿಂಡಿಗೇ ಆಗಲಿ, ಮಧ್ಯಾಹ್ನದ ಊಟಕ್ಕೇ ಆಗಲಿ, ರಾತ್ರಿ ಡಿನ್ನರ್ ಗೇ ಆಗಲಿ ಮಾವಿನಕಾಯಿ ಚಿತ್ರಾನ್ನ ಹೊಂದಿಕೆಯಾಗಬಲ್ಲದು. ಬಾಯಲ್ಲಿ ನೀರೂರಲು ಪ್ರಾರಂಭಿಸಿದ್ದರೆ ಇನ್ನೇಕೆ ತಡ ಮಾವಿನಕಾಯಿ ಚಿತ್ರಾನ್ನ ಮಾಡಲು ಪ್ರಾರಂಭಿಸಿ.
ಬೇಕಾಗುವ ಸಾಮಗ್ರಿ :

1/2 ಕೆ.ಜಿ ಅಕ್ಕಿ
2-3 ಮಾವಿನ ಕಾಯಿ
ಶೇಂಗಾ ಬೀಜ
7-8 ಗೋಡಂಬಿ
2-3 ಟೀ ಚಮಚ ಕಡಲೆಬೆಳೆ
4-5 ಹಸಿ ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
8-10 ಕರಿಬೇವು ಎಲೆ
ಒಂದು ಚಿಟುಕಿಯಷ್ಟು ಅರಿಶಿಣ ಪುಡಿ
ಟೀ ಚಮಚದಷ್ಟು ಸಾಸಿವೆ

ತುರಿದ ಹಸಿ ಕೊಬ್ಬರಿ
ಮಾಡುವ ವಿಧಾನ :
ಮೊದಲು ಒಂದು ಪಾತ್ರೆಯಲ್ಲಿ ಅನ್ನವನ್ನು ಮಾಡಿಟ್ಟುಕೊಂಡಿರಿ. ಅನ್ನ ಸ್ವಲ್ಪ ಉದುರಾಗಿದ್ದರೆ ಚಿತ್ರಾನ್ನ ಕಲಿಸಲು ಸುಲಭವಾಗುತ್ತದೆ. ಅನಂತರ ಎಲ್ಲಾ ಮಾವಿನಕಾಯಿಗಳ ಸಿಪ್ಪೆಯನ್ನು ತೆಗೆದು ಸಣ್ಣಗೆ ತುರಿದುಕೊಳ್ಳಿ. ತುರಿದುಕೊಂಡ ಮಾವಿನಕಾಯಿಯಲ್ಲಿ 3-4 ಹಸಿಮೆಣಸಿನಕಾಯಿ ಹಾಕಿ ನೀರನ್ನು ಬಳಸದೆ ಮಿಕ್ಸಿ ಮಾಡಿ ಇಡಿ.

ಅಗತ್ಯವಿದ್ದಷ್ಟು ಎಳ್ಳೆಣ್ಣೆಯನ್ನು ಬಾಣಲೆಗೆ ಹಾಕಿಕೊಂಡು ತುಸುಬಿಸಿಯಾಗುತ್ತಿದ್ದಂತೆ ಸಾಸಿವೆ ಹಾಕಿರಿ. ಚಟಪಟ ಅನ್ನುತ್ತಿದ್ದಂತೆ ಅರಿಶಿಣ ಪುಡಿ ಹಾಕಿ ನಂತರ ಕರಿಬೇವು ಸೊಪ್ಪನ್ನು ಹಾಕಿರಿ. ಸ್ಟೌ ಉರಿ ಸಣ್ಣದಾಗಿರಲಿ, ಒಗ್ಗರಣೆ ಹೊತ್ತದಿರಲೆಂದು. ಅದಕ್ಕೆ ಕಡಲೆಬೇಳೆ, ಶೇಂಗಾ, ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೆ ತಾಳಿಸಿರಿ. ಇದಕ್ಕೆ ಹಸಿ ಕೊಬ್ಬರಿಯನ್ನೂ ಹಾಕಿ ತಾಳಿಸಿದರೆ ಮಾವಿನಕಾಯಿ ಚಿತ್ರಾನ್ನ ಹೆಚ್ಚು ಸಮಯದವರೆಗೆ ಇಡಬಹುದು.
ಇದಕ್ಕೆ ಮೊದಲೇ ಮಿಕ್ಸಿಯಲ್ಲಿ ಮಿಶ್ರ ಮಾಡಿಕೊಂಡ ಮಾವಿನಕಾಯಿ, ಹಸಿಮೆಣಸಿನಕಾಯಿ ಮಿಶ್ರಣವನ್ನು ಸೇರಿಸಿ ಮತ್ತೆ ಸ್ವಲ್ಪ ತಾಳಿಸಿರಿ. ಬಾಣಲೆಯನ್ನು ಕೆಳಗಿಳಿಸಿ ಉದುರುದುರಾದ ಅನ್ನದೊಡನೆ ಉಪ್ಪು ಹಾಕಿ ಕಲಿಸಿರಿ. ಅದಕ್ಕೆ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಉದುರಿಸಿದರೆ ಮಾವಿನಕಾಯಿ ಚಿತ್ರಾನ್ನ ತಯಾರ್.

No comments: