Friday, July 31, 2009

ಬಾಯಲ್ಲಿ ನೀರೂರಿಸುವ ನಿಂಬೆಹಣ್ಣಿನ ಉಪ್ಪಿನಕಾಯಿ *

ಪಂಚಭಕ್ಷ ಪರಮಾನ್ನದ ಭೂರಿ ಭೋಜನವೇ ಇರಬಹುದು, ಪಾಲಿಗೆ ಬಂದದ್ದು ಪಂಚಾಮೃತವೆಂದುಕೊಂಡು ತಿಂದುಂಡು ನಲಿಯುವ ಮುದ್ದೆ ಸಾರಿನ ಊಟವೇ ಆಗಿರಬಹುದು. ಊಟಕ್ಕೆ ಕುಳಿತೆವೆಂದರೆ ನಾನಿಲ್ಲಿದ್ದೇನೆ ಎಂದು ನೆನಪಿಸುವ ಉಪ್ಪಿನಕಾಯಿ ನಮ್ಮ ನಿತ್ಯ ಆಹಾರದ ಅನನ್ಯ ಮಿತ್ರ.
ಉಪ್ಪಿನಕಾಯಿ ಇಲ್ಲದ ಊಟ ಅದ್ಯಾತರ ಊಟವಯ್ಯ ಎಂದು ದಾಸರು ಹಾಡಿರದಿದ್ದರೆ ನಾವೂ ನೀವೂ ಕಲೆತು ಹಾಡೋಣ. ಛಪ್ಪನ್ನಾರು ಬಗೆಯ ಉಪ್ಪಿನಕಾಯಿಗಳನ್ನು ನಾವಿವತ್ತು ಅಂಗಡಿಯಿಂದ ತಂದು ತಿನ್ನಬಹುದು. ಆದರೆ, ಮನೆಯಲ್ಲೇ ಮಾಡಿದ , ವರ್ಷದ ಯಾವ ಸಮಯದಲ್ಲೂ ಮಾಡಬಹುದಾದ ನಿಂಬೆಕಾಯಿ ಉಪ್ಪಿನಕಾಯಿಯ ಗಮ್ಮತ್ತು ತಿಂದವರಿಗೇ ಗೊತ್ತು. ಬನ್ನಿ, ನಿಂಬೆಕಾಯಿ ಉಪ್ಪಿನಕಾಯಿ ಮಾಡುವ ವಿಧಾನವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡೋಣ...ಲೊಟ್ಟೆ ಹೊಡೆಯುತ್ತಾ ಸವಿಯೋಣ.
ಬೇಕಾಗುವ ಪದಾರ್ಥ

ಒಳ್ಳೆಯ ಹೊಂಬಣ್ಣದ ಕಳಿತ ನಿಂಬೆ -50
ಉಪ್ಪು ಅರ್ಧ ಕೆಜಿ
ಕೆಂಪು ಬ್ಯಾಡಗಿ ಮೆಣಸು ಅಥವ
ಶುದ್ಧ ಮೆಣಸಿನ ಪುಡಿ ಕಾಲು ಕೆಜಿ
ಅರಿಶಿಣ 2 ಚಮಚ
ಮೆಂತ್ಯ 4 ಚಮಚ
ಎಳ್ಳೆಣ್ಣೆ ಕಾಲು ಕೆಜಿ
ಇಂಗು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ
ಮೊದಲು ನಿಂಬೆ ಹಣ್ಣುಗಳನ್ನು ಚೆನ್ನಾಗಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿಟ್ಟುಕೊಂಡು ನಂತರ ಪ್ರತಿಯಾಂದನ್ನು ಎಂಟು ಹೋಳುಗಳನ್ನಾಗಿ ಹೆಚ್ಚಿಟ್ಟು ಕೊಳ್ಳಬೇಕು.
ಮಂತ್ಯವನ್ನು ಕೆಂಪಗೆ ಘಮಘಮ ಪರಿಮಳ ಬರುವಂತೆ ಹುರಿದಿಟ್ಟುಕೊಂಡು ಇದರೊಂದಿಗೆ ಸಾಸಿವೆ, ಅರಿಶಿಣ ಮತ್ತು ಬ್ಯಾಡಗಿ ಮೆಣಸು ಅಥವ ಮೆಣಸಿನ ಪುಡಿ - ಎಲ್ಲವನ್ನು ಬೆರೆಸಿ ತರಿತರಿಯಾಗಿ ಪುಡಿ ಮಾಡಿ. ಹೆಚ್ಚಿಟ್ಟ ನಿಂಬೆ , ಉಪ್ಪು ಮತ್ತು ಸಿದ್ಧ ಪಡಿಸಿದ ಉಪ್ಪಿನಕಾಯಿ ಪುಡಿಯನ್ನು ಚೆನ್ನಾಗಿ ಬೆರೆಸಿ.

ಎಳ್ಳೆಣ್ಣೆ ಕಾಯಿಸಿಕೊಂಡು ಅದಕ್ಕೆ ಇಂಗನ್ನು ಹಾಕಿ. ಆಮೇಲೆ ಹೋಳುಗಳೊಂದಿಗೆ ಬೆರೆಸಿ ಜಾಡಿಗಳಲ್ಲಿ ಅದುಮಿಟ್ಟು ತುಂಬಿಸಿ. ಎಲ್ಲಾ ಜಾಡಿಗಳಿಗೂ ಒಂದು ವಾರದವರೆಗೆ ಶುದ್ಧವಾದ ಬಿಳಿ ಬಟ್ಟೆ ಕಟ್ಟಿಡಿ. ಒಂದು ವಾರದ ನಂತರ ಉಪ್ಪಿನಕಾಯಿಯನ್ನು ಚೆನ್ನಾಗಿ ಕಲೆಸಿ, ಜಾಡಿಯಲ್ಲಿ ತುಂಬಿ ಮುಚ್ಚಳ ಹಾಕಿಡಿ. ಒಂದು ವರ್ಷದವರೆಗೂ ಡೈನಿಂಗ್‌ ಟೇಬಲ್‌ ಮೇಲೆ ಉಪ್ಪಿನಕಾಯಿ ತಪ್ಪುವುದಿಲ್ಲ.
ಉಪ್ಪಿನಕಾಯಿಯಲ್ಲಿ ಹುಳವಾಗುವುದು, ಕಪ್ಪಾಗುವಂತಹ ಸಮಸ್ಯೆಗಳು ಬೇಗನೇ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನೀವು ಕೆಲವು ಮುನ್ಸೂಚನೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ತಾಮ್ರ, ಹಿತ್ತಾಳೆ, ಅಥವಾ ಕಬ್ಬಿಣದ ಪಾತ್ರೆಯನ್ನು , ಉಪ್ಪಿನಕಾಯಿ ಮಾಡುವ ಯಾವ ಹಂತದಲ್ಲಿಯೂ ಉಪಯೋಗಿಸಬೇಡಿ. ಗಾಜು, ಪಿಂಗಾಣಿ, ಅಥವ ಕಲ್ಲಿನ ಜಾಡಿಯನ್ನು ಉಪಯೋಗಿಸಿದಲ್ಲಿ ಉಪ್ಪಿನಕಾಯಿಗೆ ಯಾವುದೇ ಹಾನಿಯಾಗುವುದಿಲ್ಲ. ಮಗುಚುವುದಕ್ಕೆ, ಉಪ್ಪಿನಕಾಯಿ ತೆಗೆದುಕೊಳ್ಳುವುದಕ್ಕೆ ಒಣಗಿದ ಸೌಟನ್ನೇ ಬಳಸೇಕು.
ನಿಂಬೆಹಣ್ಣು ಉಪ್ಪಿನಕಾಯಿ ಕಳಿತ ಮೇಲೆ ಬಲು ರುಚಿ ಮತ್ತು ತಿನ್ನಲೂ ಸುಲಭ. ಬಾಣಂತಿಯರಿಗೆ, ಮಕ್ಕಳಿಗೆ, ಇಷ್ಟವಿರುವವರಿಗೆ ನಿಂಬೆಹಣ್ಣು ಉಪ್ಪಿನಕಾಯಿ ಇಲ್ಲದ ದಿನಗಳೇಇರುವುದಿಲ್ಲ. ಸಿಹಿ ಇಷ್ಟಪಡುವವರು ಈ ಉಪ್ಪಿನಕಾಯಿಗೆ ಸಕ್ಕರೆ ಬೆರೆಸಿ ಕೂಡ ತಿನ್ನುತ್ತಾರೆ.

No comments: