Friday, July 31, 2009

ಬಹುಪಯೋಗಿ ಖಾರದ ಪುಡಿ ಮಾಡಿ ನೋಡಿ

ಉಪ್ಪು, ಹುಳಿ, ಖಾರ ಇಲ್ಲದ ಅಡಿಗೆ ಅಡಿಗೆಯೇ? ನಿತ್ಯ ನಮ್ಮ ನಿಮ್ಮ ಮನೆಗಳಲ್ಲಿ ಮಾಡುವ ಅಡಿಗೆಗೆ ಬೇಕೇ ಬೇಕು ಸಾರಿನ ಪುಡಿ. ಈ ಸಾರಿನ ಪುಡಿಗೆ ಕೆಲವರು ಮೆಣಸಿನ ಪುಡಿ ಎನ್ನುವುದೂ ಉಂಟು. ಇಬ್ಬರು ಹಿರಿಯರು, ಇಬ್ಬರು ಕಿರಿಯರ ಚಿಕ್ಕ ಚೊಕ್ಕ ಸುಖೀ ಸಂಸಾರಕ್ಕೆ ಬೇಕಾಗುವಷ್ಟು ಮೆಣಸಿನ ಪುಡಿ ತಯಾರಿಕೆಗೆ ಇಲ್ಲಿದೆ ನಿಮಗೆ ಭಟ್ಟರ ಕೈಪಿಡಿ.

ಅಡುಗೆಗೆ ಸಿದ್ಧವಾಗುವ ಮುನ್ನ, ಅಡುಗೆಮನೆಯಲ್ಲಿ ಏನಿದೆ, ಏನಿಲ್ಲ ಎಂಬುದನ್ನು ನೋಡಿಕೊಳ್ಳಬೇಕು. ಎಲ್ಲರ ಅಡುಗೆಮನೆಗಳಲ್ಲಿ ಇರಲೇಬೇಕಾದ ವಸ್ತುಗಳ ಪಟ್ಟಿ ದೊಡ್ಡದಿದೆ. ಆ ಪಟ್ಟಿಯ ಮೊದಲ ಪುಟದಲ್ಲಿ ಕಾಣಿಸಿಕೊಳ್ಳುವ ಮೊದಲಿಗನೆಂದರೆ ಖಾರದಪುಡಿ. ಖಾರದ ಪುಡಿಗಳಲ್ಲಿ ನಾನಾಥರ. ಮೊಟ್ಟಮೊದಲಿಗೆ ನಾವು ನಿಮಗೆ ಸಾರಿನ ಪುಡಿ ಮಾಡುವ ವಿಧಿವಿಧಾನಗಳನ್ನು ಸರಳವಾಗಿ ವಿವರಿಸುತ್ತೇವೆ. ನೀವೂ ಮಾಡಿ, ಪಕ್ಕದ ಮನೆಯವರಿಗೂ ಹೇಳಿ. ಅವರ ಮನೆ ದೂರವಿದ್ದರೆ ಈ ಪುಟವನ್ನು ಅವರಿಗೆ ಈಮೇಲ್‌ನಲ್ಲಿ ಕಳಿಸಿಕೊಡಿ.
ಬೇಕಾಗುವ ಸಾಮಾನು, ಅಗತ್ಯವಾದ ಸಾಧನ:
1. ಮೆಣಸಿನ ಕಾಯಿ - ಕೆಂಪು ಉದ್ದನೆಯ ಬ್ಯಾಡಗಿ ಮೆಣಸಿನ ಕಾಯಿ - ಸಾರಿನ ರುಚಿ, ಕಂಪು ಹಾಗೂ ಕಣ್ಮನ ತಣಿಸುವ ಕೆಂಪು ಬಣ್ಣಕ್ಕೆ ಬಹುಯೋಗ್ಯ. ಖಾರ ಎಂದರೇ ಬೆಚ್ಚಿ ಬೀಳುವ, ಬಣ್ಣಕ್ಕೆ ಮಾರು ಹೋಗುವವರಿಗೆ - ಬ್ಯಾಡಗಿ. ಎರಡು ಹಿಡಿ - ಹೆಚ್ಚೂ ಕಡಿಮೆ - 50 ಮೆಣಸಿನ ಕಾಯಿ. ಅಥವಾ ಚೋಟುದ್ದದ ಉರಿಗಾರದ ಆದರೆ - ಬಣ್ಣಕ್ಕೆ ಹೆಚ್ಚು ಪ್ರಾಶಸ್ತ್ಯವಿಲ್ಲದ ರುಚಿಗೆ ಹೆಸರಾದ ಗುಂಟೂರು ಅಥವಾ ದೊಡ್ಡಬಳ್ಳಾಪುರ ಅಥವಾ ಮಣ್ಣುಕಟ್ಟಿದ 30 ಮೆಣಸಿನಕಾಯಿ.
2. ಧನಿಯಾ ಅಥವಾ ಕೊತ್ತುಂಬರಿ ಬೀಜ. ಹಸಿರಸಿರಾಗಿ ಸಣ್ಣಗಾತ್ರದ ಗೂನ ಧನಿಯಕ್ಕೆ ಘಮ ಹೆಚ್ಚು. ಇದು ಒಂದೂವರೆ ಬಟ್ಟಲು.
3. ಜೀರಿಗೆ - ಆರು ಚಮಚ
4. ಮೆಣಸು - ಕರಿಯ ಕಾಳು ಮೆಣಸು. 3 ಚಮಚ
5. ಮೆಂತ್ಯ - ಘಮಘಮಿಸುವ ಸಾರಿಗೆ ಮೆಂತ್ಯವೇ ಪ್ರಾಮುಖ್ಯ - 2 ಚಮಚ.
6. ಸಾಸಿವೆ 1 ಚಮಚ.
7. ಕರಿಬೇವಿನ ಎಸಳು - 5 ಅಥವಾ 6
8. ಇನ್ನು ಇಂಗು. ಇಂಗಿಲ್ಲದೆ ಪರಿಮಳ ಉಂಟೆ. ಇಂಗಿನ ರುಚಿ ಬಲ್ಲವರೇ ಬಲ್ಲರು
ವಿಧಿವಿಧಾನ:
ಮೊದಲಿಗೆ ಒಲೆಯ ಮೇಲೆ ಅಗಲವಾದ ದಪ್ಪ ತಳದ ಬಾಣಲೆಯನ್ನಿಟ್ಟು ಎರಡು ಹನಿ ಎಣ್ಣೆ ಹಾಕಿ ಕಾದಮೇಲೆ ಜೀರಿಗೆ, ಮೆಂತ್ಯ, ಮೆಣಸು, ಸಾಸಿವೆಯನ್ನು ಬೇರೆಬೇರೆಯಾಗಿ ಕಂಪು ಬರುವವರೆಗೆ ಹುರಿಯಬೇಕು. ಸ್ವಲ್ಪ ಹೆಚ್ಚು ಅಂದರೆ ಅರ್ಧ ಚಮಚ ಎಣ್ಣೆಯಲ್ಲಿ ಮೆಣಸಿನ ಕಾಯಿ, ಧನಿಯ ಬೇರೆಬೇರೆ ಹುರಿಯಬೇಕು. ಇಂಗು ಮತ್ತು ಕರಿಬೇವನ್ನು ಸ್ಪಲ್ಪ ಎಣ್ಣೆಯಲ್ಲಿ ಒಟ್ಟಿಗೆ ಹುರಿಯಬಹುದು. ಹುರಿದ ಎಲ್ಲಾ ಸಾಮಾನುಗಳನ್ನೂ 10 ನಿಮಿಷದ ನಂತರ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. 10 ನಿಮಿಷದ ನಂತರ ಹಬೆ ಕಡಿಮೆಯಾದ ತರುವಾಯ ಬಿಗಿ ಮುಚ್ಚಳವಿರುವ ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳುವುದು.
ಸಲಹೆ: ಮೆಣಸಿನಕಾಯಿಯನ್ನು ಕೊನೆಯಲ್ಲಿ ಹುರಿಯುವುದರಿಂದ - ಮೂಗಿಗೆ ತಟ್ಟುವ ಹಾಗೂ ನೆತ್ತಿಗೇರಿ ಸೀನು ಬರಿಸುವ ಮೆಣಸಿನ ಘಾಟನ್ನು ತಡೆಗಟ್ಟಬಹುದು.
ಉಪಯೋಗಗಳು :
1) ಅನ್ನದೊಂದಿಗೆ ಕಲಸಿ ಮೇಯಲು ತೊಗರಿಬೇಳೆಯಲ್ಲಿ ಮಾಡುವ ತಿಳಿಸಾರ್‌.
2) ಅವಲಕ್ಕಿ , ಮಂಡಕ್ಕಿ ಜತೆ ಹಸಿಹಸಿಯಾಗಿ ಈರುಳ್ಳಿ ಬೆರಸಿ ಮಾಡುವ, ಉತ್ತರ ಕರ್ನಾಟಕದ ಕಡೆ ಸೂಸಲ ಎಂದು ಕರೆಯಲಾಗುವ ಸಾಯಂಕಾಲದ ತಿಂಡಿಗೆ ಬೆರೆಸುವ ಕೆಂಪುಖಾರ.
3) ಸ್ಲೈಸ್‌ ಮಾಡಿದ ಹಸಿ ಸೌತೆಕಾಯಿ, ಟೊಮಾಟೋಗೆ ಉಪ್ಪು , ನಿಂಬೆರಸದ ಜತೆ ಸವರಿಕೊಳ್ಳುವ ಖಾರ.
4) ಹದನೋಡಿಕೊಂಡು ಖಾರ ಮೂಲದ ತಿಂಡಿ ತಿನಿಸಿಗಳಿಗೆ ಒಣ ಖಾರ ಬೆರೆಸಿಕೊಳ್ಳುವ ಜಾಣ ಜಾಣೆಯರಿಗೆ.
ಕೊನೆಯದಾಗಿ
5) ಕಳ್ಳಕಾಕರು ಮನೆಗೆ ನುಗ್ಗಿದರೆ ಅಂಜದೆ ತಿರುಗಿ ಬೀಳುವ ಹೆಣ್ಣು ಮಕ್ಕಳ ಆಯುಧ.

No comments: