Friday, July 31, 2009

ಬಾಸುಮತಿ ಅಕ್ಕಿ ತರಕಾರಿ ಬಿರಿಯಾನಿ

* ಮೇದಿನಿ ಗುಪ್ತ, ಸೋಮವಾರಪೇಟೆ
ಕರ್ನಾಟಕದಲ್ಲಿ ಅಕ್ಕಿ ಬೆಲೆಗಳು ಗಗನಕ್ಕೆ ಜಿಗಿದಿವೆ. ಸಾಧಾರಣ ಸೋನಾ ಮಸೂರಿ ಅಕ್ಕಿ ಕೆಜಿಗೆ 40 ರೂಪಾಯಿ! ಆದರೆ ಬಾಸುಮತಿ ಅಕ್ಕಿ 45-50 ರೂಪಾಯಿಗೆ ದೊರಕತ್ತೆ. ಅದರ ಬಿರಿಯಾನಿ ಮಾಡುವುದೇ ಜಾಣ ಜಾಣೆಯರ ಇವತ್ತಿನ ಜಾಣತನ.
ಬೇಕಾದ ಪದಾರ್ಥಗಳು
ಬಾಸುಮತಿ ಅಕ್ಕಿ - 2 ಲೋಟದ ತುಂಬ (ಅಥವಾ ಪಲಾವ್ ಅಕ್ಕಿ)
ಸಣ್ಣಗೆ ಕತ್ತರಿಸಿದ ವಿಧವಿಧವಾದ ತರಕಾರಿಗಳು - 4 ಲೋಟ ( ಬಟಾಣಿ, ಕ್ಯಾರೆಟ್, ಆಲೂಗೆಡ್ಡೆ, ಹೂಕೋಸು, ಬೀನ್ಸ್)
ದೊಡ್ಡ ಈರುಳ್ಳಿ - 3
ಬೆಳ್ಳುಳ್ಳಿ - 8 ತೊಳೆ
ಎಲಕ್ಕಿ - 4
ಲವಂಗ - 6
ದಾಲ್ಚಿನಿ - 2
ಇಂಚಿನ ಒಂದು ತುಂಡು
ಪಲಾವ್ ಎಲೆ - 4
ಮರಾಠ ಮೊಗ್ಗು - 4
ಎಣ್ಣೆ - 6 ಚಮಚ
ರುಚಿಗೆ ತಕ್ಕಷ್ಟು ಉಪ್ಪು.

ಮಿಕ್ಸಿಯ ಕೆಲಸ :
ತೆಂಗಿನಕಾಯಿ ತುರಿ - 1 ಲೋಟ nಕೊತ್ತಂಬರಿ ಸೊಪ್ಪು - 1 ದೊಡ್ಡ ಕಟ್ಟು
ಬೆಳ್ಳುಳ್ಳಿ 6 ತೊಳೆ, ಹಸಿರುಮೆಣಸಿನಕಾಯಿ 8 ಕಡ್ಡಿ, ಎರಡನ್ನೂ ಚೂರು ಎಣ್ಣೆಯಲ್ಲಿ ಹುರಿದು ಆನಂತರ ಮಿಕ್ಸಿಗೆ ಹಾಕಿ. ನುಣ್ಣಗೆ ರುಬ್ಬಿ.
ತಯಾರಿಸುವ ವಿಧಾನ
ಮೊದಲು ಅಕ್ಕಿಯನ್ನು ತೊಳೆದು, 10 ನಿಮಿಷ ನೀರಿನಲ್ಲಿ ನೆನೆಸಿರಿ. ಎಣ್ಣೆ ಯನ್ನು ಪ್ರೆಜರ್ ಕುಕ್ಕರ್ ನಲ್ಲಿ ಬಿಸಿಮಾಡಿ, ಮಸಾಲೆ ಪದಾರ್ಥಗಳು ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿರಿ. ಈರುಳ್ಳಿ ಬೆಂದ ಮೇಲೆ, ಅಕ್ಕಿ ಬೆರೆಸಿ ಎರಡು ನಿಮಿಷ ಹುರಿಯಿರಿ. ಅದಕ್ಕೆ ಮಸಾಲೆ ಮತ್ತು ಅರ್ಧಬೆಂದ ತರಕಾರಿ ಸೇರಿಸಿ. ಒಳ್ಳೆ ವಾಸನೆ ಬರುವವರೆಗೆ ಹುರಿಯಿರಿ. 4 ಲೋಟ ಬಿಸಿ ನೀರು ಮತ್ತು ಉಪ್ಪನ್ನು ಸೇರಿಸಿರಿ. 12 ನಿಮಿಷ ಪ್ರೆಜರ್ ಕುಕ್ಕರ್ ನಲ್ಲಿ ಬೇಯಿಸಿ. ಅನ್ನ ಆರುವ ಮುಂಚೆ ಬಿರಿಯಾನಿಯನ್ನು ಹುರಿದ ಗೋಡ೦ಬಿಯಿ೦ದ ಸಿಂಗಾರಗೊಳಿಸಿ.
ಹೀಗೂ ಮಾಡಬಹುದು :
ದೊಡ್ಡ ಈರುಳ್ಳಿ ಬದಲಾಗಿ ಸಣ್ಣ (ಸಾಂಬಾರ್) ಈರುಳ್ಳಿಯನ್ನು ಬಳಸಿ. ಕೊತ್ತಂಬರಿಸೊಪ್ಪು ಕಡಿಮೆ ಹಾಕಿ, ರುಬ್ಬುವಾಗ ಶುಂಠಿ ಸೇರಿಸಬಹುದು. ತೆಂಗಿನಕಾಯಿ ನೀರನ್ನು ಅನ್ನ ಬೇಯಿಸಲು ಉಪಯೋಗಿಸಬಹುದು.ಕತ್ತರಿಸಿದ ಟೊಮೇಟೊ ಸೇರಿಸಬಹುದು. ಬೇಯಿಸಿದ ಮಷ್ ರೂಂ ಮತ್ತು ಸೋಯಾ ತುಣುಕುಗಳನ್ನು ಸೇರಿಸಬಹುದು.

No comments: