Friday, July 31, 2009

ದಸರೆಗಾಗಿ ಹೋಳಿಗೆ ಸಾರು

ಹೋಳಿಗೆ ಸಾರಿಲ್ಲದೆ ಹಬ್ಬದ ಅಡುಗೆ ಪರಿಪೂರ್ಣವಾಗುವುದಿಲ್ಲ. ಹಬ್ಬ ಹರಿದಿನಗಳಲ್ಲಿ ಬಹಳಷ್ಟು ಕನ್ನಡಿಗರ ಮನೆಯಲ್ಲಿ ಹೋಳಿಗೆ ಸಾರು ಘಂ ಎನ್ನುತ್ತಿರುತ್ತದೆ. ಮನೆಯಲ್ಲಿ ಹೋಳಿಗೆ ಮಾಡ ಬೇಕಾದರೆ ಹೋಳಿಗೆ ಸಾರು ಮಾಡುವುದು ಅಷ್ಟೇನು ತ್ರಾಸವಲ್ಲ. ಹೋಳಿಗೆಗೂ ಹೋಳಿಗೆ ಸಾರಿಗೂ ಅವಿನಾಭಾವ ಸಂಬಂಧ.
ಹೂರಣಕ್ಕೆ ಇವಿಷ್ಟನ್ನು ಹೊಂದಿಸಿಕೊಳ್ಳಿ
ಬೆಲ್ಲ: 2 ಕಪ್ಪು
ತೆಂಗಿನ ಕಾಯಿ: 2 ಟೇಬಲ್ ಚಮಚ
ಏಲಕ್ಕಿ: ' ಟೀ ಚಮಚ
ನೀರು: 4 ಕಪ್ಪು
ಅರಿಶಿನ ಪುಡಿ: 1 ಚಿಟಿಕೆ
ಹೋಳಿಗೆ ಸಾರಿಗೆ
ಹೂರಣ: ಕಿತ್ತಲೆ ಗಾತ್ರದ್ದು
ಸಾಂಬಾರು ಪುಡಿ: 2 ಟೇಬಲ್ ಚಮಚ
ಬೇಳೆಯಿಂದ ಬಸಿದ ನೀರು
ಕಿವುಚಿದ ಹುಣಸೆಹಣ್ಣಿನ ರಸ: 2 ಟೇಬಲ್ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಒಗ್ಗರಣೆಗೆಎಣ್ಣೆ, ಸಾಸಿವೆ, ಒಣಮೆಣಸಿನ ಕಾಯಿ, ಕರಿಬೇವು ಮತ್ತು ಇಂಗು. 1 ಟೇಬಲ್ ಚಮಚ ಎಣ್ಣೆಗೆ ಒಂದೊಂದಾಗಿ ಈ ಸಾಮಗ್ರಿಗಳನ್ನು ಹಾಕಿ ಒಗ್ಗ್ಗರಣೆ ತಯಾರಿಸಿಕೊಳ್ಳಿ.
ಹೂರಣ ಮಾಡಲು
4 ಕಪ್ಪು ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ನೀರು ಕುದಿಯುತ್ತ್ತಿದ್ದಂತೆ ಒಂದು ಚಿಟಿಕೆ ಅರಿಶಿನ ಪುಡಿ ಹಾಗೂ ತೊಗರಿ ಬೇಳೆಯನ್ನು ಹಾಕಿ. ಸಣ್ಣ ಉರಿಯಲ್ಲಿ ಬೇಳೆಯನ್ನು ಬೇಯಿಸಿಕೊಳ್ಳಿ. ನೀರು ಇಂಗದಂತೆ ನೋಡಿಕೊಳ್ಳಿ. ಬೇಕಿದ್ದರೆ ಸ್ವಲ್ಪ ನೀರನ್ನು ಆಗಾಗ ಸೇರಿಸುತ್ತಿರಿ. ಬೇಳೆ ಬೆಂದ ನಂತರ ನೀರನ್ನ್ನು ಬಸಿದುಕೊಳ್ಳಿ. ಸಾರು ಮಾಡಲು ಈ ಬಸಿದ ನೀರು ಬೇಕು.ಈಗ ಬೇಳೆಗೆ ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೂ ಕಲಕುತ್ತಾ ಬೇಯಿಸಿ. ಒಲೆಯ ಮೇಲಿಂದ ಕೆಳಗಿಳಿಸಿ ಏಲಕ್ಕಿ ಪುಡಿಯನ್ನು ಸೇರಿಸಿ. ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಈಗ ತೆಂಗಿನಕಾಯಿಯನ್ನು ಹಾಕಿ ಮಿಕ್ಸಿ ಅಥವಾ ಗ್ರೈಂಡರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಳ್ಳಲು ನೀರನ್ನು ಬಳಸ ಬೇಡಿ. ಅದರಲ್ಲಿನ ನೀರೆ ಸಾಕಾಗುತ್ತದೆ. ಬೇಳೆಯನ್ನು ಒಂದೇ ಸಲ ರುಬ್ಬದೆ 2 ಅಥವಾ 3 ಭಾಗಗಳಾಗಿ ಮಾಡಿಕೊಂಡು ರುಬ್ಬಿಕೊಳ್ಳಿ, ಆಗ ರುಬ್ಬುವ ಕೆಲಸ ಸುಲಭವಾಗುತ್ತದೆ. ಈಗ ಹೂರಣ ಸಿದ್ಧವಾಗುತ್ತದೆ. ಹೂರಣದಿಂದ ಸಣ್ಣಸಣ್ಣ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಹೂರಣ ಹೋಳಿಗೆಗಳನ್ನು ತಯಾರಿಸಬಹುದು.
ಹೋಳಿಗೆ ಸಾರು ಮಾಡಲು
ಕಿತ್ತಳೆ ಹಣ್ಣಿನ ಗಾತ್ರದ ಹೂರಣವನ್ನು ಬಸಿದ ನೀರಿನೊಂದಿಗೆ ಬೆರಸಿ, ಹುಣಸೆ ಹಣ್ಣಿನ ರಸವನ್ನು ಹಾಕಿ, ಸಾಂಬಾರು ಪುಡಿ, ರುಚಿಗೆ ತಕ್ಕಷ್ಟು ಉಪ್ಪುನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಮಿಶ್ರಣವನ್ನು ಒಲೆಯ ಮೇಲೆ ಕುದಿಯಲು ಬಿಡಿ.ರುಚಿಗಾಗಿ ಸಿದ್ಧವಾಗಿಟ್ಟುಕೊಂಡ ಒಗ್ಗರಣೆಯನ್ನು ಹಾಕಿ. ಸಾರು ತಣ್ಣಗಾಗಲು ಬಿಟ್ಟು ಸ್ವಲ್ಪ ಸಮಯದ ನಂತರ ಬಿಸಿ ಅನ್ನದೊಂದಿಗೆ ಬಡಿಸಿ.
ವಿಶೇಷ ಸೂಚನೆ: ತಾಜಾ ಸಾರಿಗಿಂತಲೂ ಒಂದು ದಿನ ಹಳತಾದ ಸಾರಿನ ರುಚಿ ಹೆಚ್ಚು!

No comments: