Friday, July 31, 2009

ಖಾರ ಪೊಂಗಲ್ ಅಥವಾ ಹುಗ್ಗಿ

ಬೆಂಗಳೂರಿನ ಭಾರತಿ ಚಂದ್ರಶೇಖರ್.
ಖಾರ ಪೊಂಗಲ್ ಅಥವಾ ಹುಗ್ಗಿಯನ್ನು ಸಂಕ್ರಾಂತಿ ಸುಗ್ಗಿಯ ವೇಳೆಯಲ್ಲಿಯೇ ಮಾಡಬೇಕೆಂದೇನಿಲ್ಲ. ಅಕ್ಕಿ, ಬೇಳೆ ಮಿಶ್ರಣದ ಸತ್ವಯುತ ಆಹಾರವನ್ನು ಯಾವಾಗ ಬೇಕಾದರೂ ತಯಾರಿಸಿ ಮೆಲ್ಲಬಹುದು. ಬೆಂಗಳೂರಿನ ಭಾರತಿ ಚಂದ್ರಶೇಖರ್ ಅವರು ಸರಳ ವಿಧಾನವನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ. ಇಂದೇ ತಯಾರಿಸಿ, ತಿಂದು ತೇಗಿ, ಮಸ್ತ್ ಮಜಾ ಮಾಡಿ.
ಬೇಕಾಗುವ ಸಾಮಗ್ರಿಗಳು
ಅಕ್ಕಿ 1 ಕಪ್
ಹೆಸರು ಬೇಳೆ 3/4 ಕಪ್
ಎಣ್ಣೆ 6 ಚಮಚ
ಜೀರಿಗೆ 1 ಚಮಚ
ಮೆಣಸು 1 ಚಮಚ
ಕರಿಬೇವು ಸ್ವಲ್ಪ
ಹಸಿ ಮೆಣಸಿನಕಾಯಿ 1
ಅರಿಶಿನ ಪುಡಿ ಸ್ವಲ್ಪ
ನಿಂಬೆ ರಸ 2 ಚಮಚ
ತುಪ್ಪ 4 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಕುಕ್ಕರ್ ಗೆ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಜೀರಿಗೆ, ಮೆಣಸು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಹೆಸರುಬೇಳೆ, ತೊಳೆದುಕೊಂಡ ಅಕ್ಕಿ ಹಾಕಿ ಹುರಿಯಿರಿ. 4 ಲೋಟ ನೀರನ್ನು ಹಾಕಿ. ರುಚಿಗೆ ಉಪ್ಪು, ಅರಿಶಿನ, ನಿಂಬೆ ರಸ ಹಾಕಿ ಮುಚ್ಚಿ. ಒಂದು ವಿಷಲ್ ಬಂದ ಮೇಲೆ ಉರಿ ಸಣ್ಣ ಮಾಡಿ 5 ನಿಮಿಷದ ನಂತರ ಆಫ್ ಮಾಡಿ.
ಕುಕ್ಕರ್ ತಣ್ಣಗಾದ ಮೇಲೆ ತುಪ್ಪ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಸರಳವಾದ ಮತ್ತು ಬೇಗ ಆಗುವ ಅಡುಗೆ. ಇದರ ಜೊತೆ ಕಾಯಿ ಚಟ್ನಿ ಅಥವಾ ಮೊಸರು ಬಜ್ಜಿಯಿದ್ದರೆ ತುಂಬಾ ಚೆನ್ನಾಗಿರುತ್ತದೆ.

ದಸರೆಗಾಗಿ ಹೋಳಿಗೆ ಸಾರು

ಹೋಳಿಗೆ ಸಾರಿಲ್ಲದೆ ಹಬ್ಬದ ಅಡುಗೆ ಪರಿಪೂರ್ಣವಾಗುವುದಿಲ್ಲ. ಹಬ್ಬ ಹರಿದಿನಗಳಲ್ಲಿ ಬಹಳಷ್ಟು ಕನ್ನಡಿಗರ ಮನೆಯಲ್ಲಿ ಹೋಳಿಗೆ ಸಾರು ಘಂ ಎನ್ನುತ್ತಿರುತ್ತದೆ. ಮನೆಯಲ್ಲಿ ಹೋಳಿಗೆ ಮಾಡ ಬೇಕಾದರೆ ಹೋಳಿಗೆ ಸಾರು ಮಾಡುವುದು ಅಷ್ಟೇನು ತ್ರಾಸವಲ್ಲ. ಹೋಳಿಗೆಗೂ ಹೋಳಿಗೆ ಸಾರಿಗೂ ಅವಿನಾಭಾವ ಸಂಬಂಧ.
ಹೂರಣಕ್ಕೆ ಇವಿಷ್ಟನ್ನು ಹೊಂದಿಸಿಕೊಳ್ಳಿ
ಬೆಲ್ಲ: 2 ಕಪ್ಪು
ತೆಂಗಿನ ಕಾಯಿ: 2 ಟೇಬಲ್ ಚಮಚ
ಏಲಕ್ಕಿ: ' ಟೀ ಚಮಚ
ನೀರು: 4 ಕಪ್ಪು
ಅರಿಶಿನ ಪುಡಿ: 1 ಚಿಟಿಕೆ
ಹೋಳಿಗೆ ಸಾರಿಗೆ
ಹೂರಣ: ಕಿತ್ತಲೆ ಗಾತ್ರದ್ದು
ಸಾಂಬಾರು ಪುಡಿ: 2 ಟೇಬಲ್ ಚಮಚ
ಬೇಳೆಯಿಂದ ಬಸಿದ ನೀರು
ಕಿವುಚಿದ ಹುಣಸೆಹಣ್ಣಿನ ರಸ: 2 ಟೇಬಲ್ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಒಗ್ಗರಣೆಗೆಎಣ್ಣೆ, ಸಾಸಿವೆ, ಒಣಮೆಣಸಿನ ಕಾಯಿ, ಕರಿಬೇವು ಮತ್ತು ಇಂಗು. 1 ಟೇಬಲ್ ಚಮಚ ಎಣ್ಣೆಗೆ ಒಂದೊಂದಾಗಿ ಈ ಸಾಮಗ್ರಿಗಳನ್ನು ಹಾಕಿ ಒಗ್ಗ್ಗರಣೆ ತಯಾರಿಸಿಕೊಳ್ಳಿ.
ಹೂರಣ ಮಾಡಲು
4 ಕಪ್ಪು ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ನೀರು ಕುದಿಯುತ್ತ್ತಿದ್ದಂತೆ ಒಂದು ಚಿಟಿಕೆ ಅರಿಶಿನ ಪುಡಿ ಹಾಗೂ ತೊಗರಿ ಬೇಳೆಯನ್ನು ಹಾಕಿ. ಸಣ್ಣ ಉರಿಯಲ್ಲಿ ಬೇಳೆಯನ್ನು ಬೇಯಿಸಿಕೊಳ್ಳಿ. ನೀರು ಇಂಗದಂತೆ ನೋಡಿಕೊಳ್ಳಿ. ಬೇಕಿದ್ದರೆ ಸ್ವಲ್ಪ ನೀರನ್ನು ಆಗಾಗ ಸೇರಿಸುತ್ತಿರಿ. ಬೇಳೆ ಬೆಂದ ನಂತರ ನೀರನ್ನ್ನು ಬಸಿದುಕೊಳ್ಳಿ. ಸಾರು ಮಾಡಲು ಈ ಬಸಿದ ನೀರು ಬೇಕು.ಈಗ ಬೇಳೆಗೆ ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೂ ಕಲಕುತ್ತಾ ಬೇಯಿಸಿ. ಒಲೆಯ ಮೇಲಿಂದ ಕೆಳಗಿಳಿಸಿ ಏಲಕ್ಕಿ ಪುಡಿಯನ್ನು ಸೇರಿಸಿ. ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಈಗ ತೆಂಗಿನಕಾಯಿಯನ್ನು ಹಾಕಿ ಮಿಕ್ಸಿ ಅಥವಾ ಗ್ರೈಂಡರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಳ್ಳಲು ನೀರನ್ನು ಬಳಸ ಬೇಡಿ. ಅದರಲ್ಲಿನ ನೀರೆ ಸಾಕಾಗುತ್ತದೆ. ಬೇಳೆಯನ್ನು ಒಂದೇ ಸಲ ರುಬ್ಬದೆ 2 ಅಥವಾ 3 ಭಾಗಗಳಾಗಿ ಮಾಡಿಕೊಂಡು ರುಬ್ಬಿಕೊಳ್ಳಿ, ಆಗ ರುಬ್ಬುವ ಕೆಲಸ ಸುಲಭವಾಗುತ್ತದೆ. ಈಗ ಹೂರಣ ಸಿದ್ಧವಾಗುತ್ತದೆ. ಹೂರಣದಿಂದ ಸಣ್ಣಸಣ್ಣ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಹೂರಣ ಹೋಳಿಗೆಗಳನ್ನು ತಯಾರಿಸಬಹುದು.
ಹೋಳಿಗೆ ಸಾರು ಮಾಡಲು
ಕಿತ್ತಳೆ ಹಣ್ಣಿನ ಗಾತ್ರದ ಹೂರಣವನ್ನು ಬಸಿದ ನೀರಿನೊಂದಿಗೆ ಬೆರಸಿ, ಹುಣಸೆ ಹಣ್ಣಿನ ರಸವನ್ನು ಹಾಕಿ, ಸಾಂಬಾರು ಪುಡಿ, ರುಚಿಗೆ ತಕ್ಕಷ್ಟು ಉಪ್ಪುನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಮಿಶ್ರಣವನ್ನು ಒಲೆಯ ಮೇಲೆ ಕುದಿಯಲು ಬಿಡಿ.ರುಚಿಗಾಗಿ ಸಿದ್ಧವಾಗಿಟ್ಟುಕೊಂಡ ಒಗ್ಗರಣೆಯನ್ನು ಹಾಕಿ. ಸಾರು ತಣ್ಣಗಾಗಲು ಬಿಟ್ಟು ಸ್ವಲ್ಪ ಸಮಯದ ನಂತರ ಬಿಸಿ ಅನ್ನದೊಂದಿಗೆ ಬಡಿಸಿ.
ವಿಶೇಷ ಸೂಚನೆ: ತಾಜಾ ಸಾರಿಗಿಂತಲೂ ಒಂದು ದಿನ ಹಳತಾದ ಸಾರಿನ ರುಚಿ ಹೆಚ್ಚು!

ಪಲ್ಯ

ಮೆಂತ್ಯೆ ಸೊಪ್ಪು-ಹೆಸರು ಬೇಳೆ ಪಲ್ಯ "ವಿಜಯ ಸತೀಶ್‌"
ಚಪಾತಿ ಅಥವಾ ರೊಟ್ಟಿ ಮಾಡಿದಾಗ ತಪ್ಪದೇ ಈ ಪಲ್ಯ ಮಾಡೋದು ಮರೀಬೇಡಿ... ಜೊತೆಗೆ ಸ್ವಲ್ಪ ನಿಂಬೆಹಣ್ಣು ಹಿಂಡಿದ ಹಸಿ ಈರುಳ್ಳಿ...ಗೋಸಿಬೇಕಾಗುವ ಪದಾರ್ಥಗಳು :
ಮೆಂತ್ಯೆ ಸೊಪ್ಪು - 1 ಕಟ್ಟು (ಎಲೆ ಬಿಡಿಸಿ ತೊಳೆದು ಹೆಚ್ಚಿದ್ದು)
ಹೆಸರು ಬೆಳೆ - 1/2 ಬಟ್ಟಲು(ಹುರಿದಿದ್ದು)
ಈರುಳ್ಳಿ - 1
ಕೆಂಪು ಮೆಣಸಿನ ಪುಡಿ - 1/2 ಚಹಾ ಚಮಚ
ಅರಿಶಿಣ ಪುಡಿ - 1 ಚಿಟಿಕೆ
ಗರಂ ಮಸಾಲ - 1/2 ಚಹಾ ಚಮಚ
ಎಣ್ಣೆ - 3 ಚಹಾ ಚಮಚ
ಸಾಸಿವೆ, ಜೀರಿಗೆ(ಒಗ್ಗರಣೆಗೆ)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಪಾತ್ರೆಗೆ ಎಣ್ಣೆ ಹಾಕಿಕೊಂಡು ಓಲೆಯ ಮೇಲಿಡಿ. ಎಣ್ಣೆ ಕಾದ ಬಳಿಕ ಸಾಸಿವೆ ಮತ್ತು ಜೀರಿಗೆ ಹಾಕಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ.

ಈರುಳ್ಳಿ ಬೆಂದ ನಂತರ ಕೆಂಪು ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ, ಉಪ್ಪು ಹಾಕಿ, ಕೈಯಾಡಿಸಿ. ಈಗ ಹೆಚ್ಚಿದ ಮೆಂತ್ಯ ಸೊಪ್ಪು ಹಾಗೂ ಹುರಿದ ಹೆಸರು ಬೇಳೆ, 1/2 ಲೋಟ ನೀರನ್ನು ಹಾಕಿ, ಪಾತ್ರೆಯ ಮುಚ್ಚಳ ಮುಚ್ಚಿ. ಹೆಸರು ಬೇಳೆ ಬೇಯುವವರೆಗೆ ಕುದಿಸಿ.
ಈ ಪಲ್ಯವನ್ನು ಚಪಾತಿ, ಜೋಳದ ರೊಟ್ಟಿಯ ಜತೆ ತಿಂದರೆ ಚೆನ್ನಾಗಿರುತ್ತೆ.
ಕೋಸಿನ ಪಲ್ಯಸುನಂದಾ ಅರುಣ್‌ಕುಮಾರ್‌, ಯುಎಸ್‌ಎ
ಚಪಾತಿಗೆ ಪಲ್ಯ ಹಾಕಿ ರೋಲ್‌ ಮಾಡಿ ಕೊಟ್ಟರೆ ಮಕ್ಕಳು ಇಷ್ಟಪಡುತ್ತಾರೆ. ಬ್ರೆಡ್‌ಗೆ ಪಲ್ಯ ಹಾಕಿ ಟೋಸ್ಟ್‌ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ. ಬೇಕಾಗುವ ಪದಾರ್ಥಗಳು :

ಕೋಸು(ಮಧ್ಯಮ ಪ್ರಮಾಣದಲ್ಲಿ ಹೆಚ್ಚಿರುವುದು)
5 ಹಸಿಮೆಣಸಿನಕಾಯಿ(ಹೆಚ್ಚಿದ್ದು)
ಅಡುಗೆ ಎಣ್ಣೆ
ಸಾಸಿವೆ
ಕಡಲೇಬೇಳೆ
ಕರಿಬೇವು
ಅರಿಶಿನ
ಉಪ್ಪು
ಕೋತಂಬರಿ

ಮಾಡುವ ವಿಧಾನ :
ಬಾಣಲೆಗೆ ಪ್ರಮಾಣ ಬದ್ಧವಾಗಿ ಅಡುಗೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದರಲ್ಲಿ ಕಡಲೇಬೇಳೆ, ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಹಾಗೂ ಕೋಸನ್ನು ಹಾಕಿ. ನೀರು ಹಾಕದೆ ಹಾಗೇ ಹುರಿಯುತ್ತಿರಿ. ಅದು ಬೆಂದ ಮೇಲೆ ಅರಿಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್‌ ಮಾಡಿ. ಕೊನೆಗೆ ಕೋತಂಬರಿ ಸೊಪ್ಪು ಹಾಕಿ. ಬೇಕಾದರೆ ಕಾಯಿತುರಿ ಹಾಕಿಕೊಳ್ಳಬಹುದು. ಈಗ ಕೋಸು ಪಲ್ಯ ರೆಡಿ.ಹೀಗೇ ಕ್ಯಾರೆಟ್‌, ಗೆಡ್ಡೆಕೋಸು, ಬೀಟ್‌ರೂಟ್‌, ಸೀಮೆ ಬದನೇಕಾಯಿ ತುರಿದು ಮಾಡಬಹುದು. ಬೀನ್ಸ್‌, ಹೀರೇಕಾಯಿ, ಇವುಗಳನ್ನು ಸಣ್ಣಗೆ ಹೆಚ್ಚಿ ಮಾಡಬೇಕು(ಇದಕ್ಕೆ ಸ್ವಲ್ಪ ನೀರು ಹಾಕಬೇಕು). ಈರುಳ್ಳಿ ಹಾಗೂ ಕಾಯಿತುರಿ ಹಾಕಿದರೆ ತುಂಬಾ ಚೆನ್ನಾಗಿರುತ್ತದೆ. ಚಪಾತಿಗೆ ಪಲ್ಯ ಹಾಕಿ ರೋಲ್‌ ಮಾಡಿ ಕೊಟ್ಟರೆ ಮಕ್ಕಳು ಇಷ್ಟಪಡುತ್ತಾರೆ. ಬ್ರೆಡ್‌ಗೆ ಪಲ್ಯ ಹಾಕಿ ಟೋಸ್ಟ್‌ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ.
ಆಹಾ, ಹಾಗಲ! ಎರಡು ಪಲ್ಯ, ಒಂದು ಚಟ್ನಿ!ಜಯಂತಿ ಎಚ್‌ ವಿ; ಬೆಂಗಳೂರು
ಹೊಸ ವರ್ಷವನ್ನು ಹಾಗಲಕಾಯಿಯ ಕಹಿರುಚಿಯಿಂದ ಆರಂಭಿಸೋಣ. ಯಾಕೆಂದರೆ ಇದರಲ್ಲಿ ಆರೋಗ್ಯ ಭಾಗ್ಯದ ಹಲವು ಸೂತ್ರಗಳು ಚಟ್ನಿ-ಪಲ್ಯದ ರೂಪದಲ್ಲಿ ಸಾಕಾರಗೊಳ್ಳುತ್ತವೆ.
ಹಾಗಲಕಾಯಿ ಒಂದು ಒಳ್ಳೆಯ ತರಕಾರಿ. ಕಹಿಯಿರುವುದರಿಂದ ಔಷಧೀಯ ಗುಣವೂ ಅದರಲ್ಲಿದೆ. ಹಾಗಲ ರುಚಿಯಲ್ಲಿ ಕಹಿಯಾದರೂ, ದೇಹಾರೋಗ್ಯಕ್ಕೆ ಸಿಹಿ. ಹಾಗಲದಂಥ ತರಕಾರಿಯಿಲ್ಲ ಎನ್ನುತ್ತಾರೆ ಅನುಭವಸ್ಥರು.
ತುಳುನಾಡಿನಲ್ಲಂತೂ ‘ಕಂಚಾಲ್‌ ಇತ್ತ್‌ಂಡಾ ಎಂಚಾಲಾ ಉಣೋಳಿ...’ (ಹಾಗಲಕಾಯಿ ಇದ್ದರೆ ಹೇಗೂ ಉಣ್ಣಬಹುದು) ಎಂಬ ನಾಣ್ಣುಡಿಯೇ ಇದೆ. ಹಾಗಲ ತಿನ್ನುವುದರಿಂದ ಹೊಟ್ಟೆಯಲ್ಲಿನ ಹುಳುಗಳು ಸಾಯುತ್ತವೆ ಎನ್ನುತ್ತಾಳೆ ಅಜ್ಜಿ . ಹಾಗಲ ಮಧುಮೇಹಕ್ಕೆ, ಅರ್ಥಾತ್‌ ಸಕ್ಕರೆ ಕಾಯಿಲೆಗೆ ರಾಮಬಾಣ ಎನ್ನುತ್ತಾರೆ ಅಳಲೇಕಾಯಿ ಪಂಡಿತಧಿರು. ಒಟ್ಟಾರೆ ಸಾರಾಂಶ ಇಷ್ಟೇ, ಹಾಗಲ ಎನ್ನುವುದು ತರಕಾರಿಯಷ್ಟೇ ಅಲ್ಲ , ಔಷಧಿಯೂ ಹೌದು. ಹಾಗಾಗಿ ರುಚಿಯಷ್ಟೇ ಅಲ್ಲ , ಆರೋಗ್ಯಭಾಗ್ಯವೂ ಹಾಗಲದಿಂದ ಲಭ್ಯ ಎಂದಾಯಿತು.
ಇಂತಿಪ್ಪ ಹಾಗಲಕಾಯಿಯಿಂದ ರುಚಿಯಾದ ಖಾದ್ಯಗಳ ಮಾಡುವುದು ಹೇಗೆ ? ಬನ್ನಿ, ಹಾಗಲಕಾಯಿಯ ಎರಡು ನಮೂನೆ ಪಲ್ಯಗಳನ್ನು ಹಾಗೂ ಚಟ್ನಿಯನ್ನು ಮಾಡೋಣ. ಮಾಡಿ ಸವಿಯೋಣ. ಸವಿದು ಆರೋಗ್ಯವಂತರಾಗೋಣ.
ಹಾಗಲಕಾಯಿ ಪಲ್ಯ (ವಿಧಾನ 1)
ಬೇಕಾಗುವ ಪದಾರ್ಥ:
ಹಾಗಲಕಾಯಿ - 1/4 ಕೆಜಿ
ಕೊತ್ತಂಬರಿ - 3 ಟೇಬಲ್‌ಸ್ಪೂನ್‌
ಕೆಂಪು ಮೆಣಸು - 8 ಅಥವಾ 10
ತುರಿದ ತೆಂಗಿನಕಾಯಿ - 3/4 ಕಪ್‌
ಹುಣಿಸೆಹಣ್ಣು - 1/2 ನಿಂಬೆಗಾತ್ರದ್ದು
ಬೆಲ್ಲ - 100 ಗ್ರಾಮ್‌ನಷ್ಟು
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಹಾಗಲಕಾಯಿಯನ್ನು ಸಣ್ಣಕ್ಕೆ ಹೆಚ್ಚಿಕೊಂಡು, ಬಾಣಲೆಯಲ್ಲಿ ಎಣ್ಣೆ ಇಟ್ಟು, ಸಾಸಿವೆ ಕಡಲೆಬೇಳೆ, ಉದ್ದಿನ ಬೇಳೆ ಒಗ್ಗರಣೆ ಹಾಕಿ, ಸಾಸಿವೆ ಸಿಡಿದ ನಂತರ ಹಾಗಲಕಾಯಿಯನ್ನು ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು. ಕೊತ್ತಂಬರಿ, ಮೆಣಸು, ಕಾಯಿತುರಿ, ಬೆಲ್ಲ , ಹುಣಿಸೆ - ಇಷ್ಟನ್ನು ಮಿಕ್ಸಿಯಲ್ಲಿ ಅರೆದು, ಬೆಂದ ಹಾಗಲಕಾಯಿಗೆ ಹಾಕಿ ಇನ್ನೂ ಸ್ವಲ್ಪಹೊತ್ತು ಚೆನ್ನಾಗಿ ಕುದಿಸಬೇಕು.
ಘಂ ಎನ್ನುವ ಹಾಗೂ ಆರೋಗ್ಯಕರ ಹಾಗಲ ಪಲ್ಯ ಸಿದ್ಧ .

ಹಾಗಲಕಾಯಿ ಪಲ್ಯ : ವಿಧಾನ -2
ಬೇಕಾಗುವ ಪದಾರ್ಥ:
ಹಾಗಲಕಾಯಿ - 1/4 ಕೆಜಿ
ಹಸಿರು ಮೆಣಸು (ಕಾಯಿ) - 4 ಅಥವಾ 5
ಈರುಳ್ಳಿ 1 (ಮಧ್ಯಮ ಗಾತ್ರ)
ನಿಂಬೆ - 1 ಹೋಳು
ಕಾಯಿತುರಿ - 3-4 ಚಮಚ

ಉಪ್ಪು - ರುಚಿಗೆ ತಕ್ಕಷ್ಟು .
ಮಾಡುವ ವಿಧಾನ : ಮೊದಲು ಕಡಲೆಬೇಲೆ-ಉದ್ದಿನಬೇಳೆ-ಸಾಸಿವೆ ಒಗ್ಗರಣೆ ಹಾಕಿ. ಸಾಸಿವೆ ಸಿಡಿದ ನಂತರ ಹಸಿಮೆಣಸಿನ ಹೋಳುಗಳನ್ನು ಸೇರಿಸಿ ಆಮೆಲೆ ಈರುಳ್ಳಿ (ಸಣ್ಣಗೆ ಹೆಚ್ಚಿಟ್ಟದ್ದು) ಹಾಕಿ. ಈರುಳ್ಳಿ ಸ್ವಲ್ಪ ಬಾಡಿದ ನಂತರ ಹಾಗಲಕಾಯಿ ಹಾಕಿ. ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಬೇಕು. ಬೆಂದ ನಂತರ ತೆಂಗಿನಕಾಯಿ ಉದುರಿಸಿ ನಿಂಬೆರಸ ಸೇರಿಸಿ ಕಲಸಿ. ಇದನ್ನು ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನಲಿಕ್ಕೆ ಸಕತ್ತಾಗಿರುತ್ತದೆ! ಹಾಗಲಕಾಯಿ ಚಟ್ನಿಬೇಕಾಗುವ ಪದಾರ್ಥ:

ಹಾಗಲಕಾಯಿ - 1/4 ಕೆಜಿ
ಕಡಲೆ ಬೇಳೆ - 2 ಟೇಬಲ್‌ಸ್ಪೂನ್‌
ಉದ್ದಿನಬೇಳೆ - 2 ಟೇಬಲ್‌ಸ್ಪೂನ್‌
ಕೆಂಪು ಮೆಣಸು - 8 ಅಥವಾ 10
ಮಾಡುವ ವಿಧಾನ : ಕಡಲೆ ಬೇಳೆ, ಉದ್ದಿನಬೇಳೆ, ಕೆಂಪುಮೆಣಸನ್ನು ಜತೆಯಾಗಿ ಹುರಿದುಕೊಂಡು, ಹುಣಸೆಹಣ್ಣು , ಬೆಲ್ಲ , ಉಪ್ಪು, ಮತ್ತು ಹಾಗಲಕಾಯಿ (ಪ್ರತ್ಯೇಕವಾಗಿ ಹುರಿದದ್ದು) ಹಾಕಿ ಮಿಕ್ಸಿಯಲ್ಲಿ ಅರೆದರೆ ಚಟ್ನಿ ರೆಡಿ! ಅನ್ನಕ್ಕಾದರೂ ಸೈ, ಚಪಾತಿ-ರೊಟ್ಟಿಗಾದರೂ ಸರಿ.
ಹಾಗಲದ ಪದಾರ್ಥಗಳನ್ನು ತಿನ್ನಿ ; ಆರೋಗ್ಯವಂತರಾಗಿರಿ.
ಕೋಸಿನ ಪಲ್ಯ’ ಹೀಗೆ ಮಾಡಿದ್ರೆ ಹೇಗೆ?ಸಾಮಾನ್ಯವಾಗಿ ಎಲ್ಲರೂ ಕೋಸು ಪಲ್ಯ ಮಾಡ್ತಾರೆ. ಆದರೆ ಪ್ರಿಯಂವದಾ ಥರ ಮಾಡಕ್ಕೆ ನಿಮಗೆ ಬರತ್ತಾ? ಕಲಿತುಕೊಳ್ಳಿ.ಪ್ರಿಯಂವದಾ ಅಗತ್ಯ ಪದಾರ್ಥಗಳು :

2 ಕಪ್‌ ಸಣ್ಣಗೆ ಹಚ್ಚಿದ ಕೋಸು
1 ಟೊಮಾಟೊ
1/2 ಕಪ್‌ ಬಟಾಣಿ
2 ದೊಡ್ಡ ಮೆಣಸಿನಕಾಯಿ
1/2 ಚಮಚ ಜೀರಿಗೆ ಪುಡಿ
1/2 ಚಮಚ ಕಾರದ ಪುಡಿ
1/4 ಚಮಚ ಧನಿಯ ಪುಡಿ
1/2 ಚಮಚ ಗರಂ ಮಸಾಲ
1/4 ಚಮಚ ಅರಿಶಿನದ ಪುಡಿ
1/2 ಚಮಚ ಸಕ್ಕರೆ (ಬೇಕಿದ್ದರೆ)
ಕಾಯಿತುರಿ (ಬೇಕಿದ್ದರೆ)
ಸ್ವಲ್ಪ ಕರಿಬೇವು,
ಕೊತ್ತಂಬರಿ ಸೊಪ್ಪು ,
ಚಿಟಿಕೆ ಹಿಂಗು,
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ಕ್ರಮ : ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ. ಅದು ಕಾದನಂತರ ಸಾಸಿವೆ, ಜೀರಿಗೆಯ ಒಗ್ಗರಣೆ ಹಾಕಿ. ಅದಕ್ಕೆ ಹಿಂಗು, ಕರಿಬೇವು, ಅರಿಶಿನ ಬೆರೆಸಿ. ನಂತರ ದೊಡ್ಡ ಮೆಣಸಿನಕಾಯಿ, ಬಟಾಣಿ ಹಾಕಿ ಸ್ವಲ್ಪ ಕಲಕಿ. ಆಮೇಲೆ ಹಚ್ಚಿದ ಕೋಸನ್ನು ಹಾಕಿ ನೀರು ಚಿಮುಕಿಸಿ ಚೆನ್ನಾಗಿ ಬಾಡಿಸಿ. ಎರಡು ನಿಮಿಷ ಮುಚ್ಚಳ ಮುಚ್ಚಿಡಿ.ಕೋಸು ಅರ್ಧ ಬೆಂದ ಮೇಲೆ ಮಸಾಲೆ, ಉಪ್ಪು, ಟೊಮಾಟೋ ಬೆರೆಸಬೇಕು. ನಂತರ ಕಡಿಮೆ ಉರಿಯಲ್ಲಿ ಬೇಯಿಸಿ. ಬಡಿಸುವ ಮೊದಲು ಕೊತ್ತಂಬರಿ ಸೊಪ್ಪು, ಒಂದು ಚಮಚ ತೆಂಗಿನತುರಿ, ಸಕ್ಕರೆ (ಬೇಕಿದ್ದಲ್ಲಿ) ಬೆರೆಸಿ. ಸಿದ್ಧವಾದ ಕೋಸಿನ ಬಲ್ಯವನ್ನು ತಟ್ಟೆಗೆ ಬಡಿಸಿಕೊಂಡು ರುಚಿ ನೋಡಿ.
ನಮ್ಮ ಟಿಪ್ಸ್‌ : ತೊಗರಿಬೇಳೆಯ ಡಬ್ಬಿಯಲ್ಲಿ 15 ಇಪ್ಪತ್ತು ಲವಂಗಗಳನ್ನು ಒಂದು ಸಣ್ಣ ಬಟ್ಟೆಯಲ್ಲಿ ಕಟ್ಟಿಡಿ. ಹೀಗೆ ಮಾಡಿದರೆ ಲವಂಗದ ವಾಸನೆಗೆ ಹುಳಗಳು ಪರಾರಿಯಾಗುತ್ತವೆ.

ಆಡುಗೆ ಅರಮನೆಯಲ್ಲಿ ಅರಳಿದ ಅನಾನಸ್ ರೈಸ್

ಆರ್.ಸವಿತಾ, ಬೆಳಗಾವಿ
ಪುದೀನಾ ರೈಸ್, ಟೊಮೆಟೊ ರೈಸ್, ವೆಜಿಟಬಲ್ ರೈಸ್ ಎಲ್ಲಾ ಹಳೆಯದಾದವು. ಹೊಸರುಚಿ ಯಾವುದೂ ಇಲ್ವಾ? ಅಂಥ ಕೇಳುವವರಿಗೆ ಇಲ್ಲಿದೆ ಅನಾನಸ್ ರೈಸ್. ಬೆಳಗಿನ, ಸಂಜೆಯ ಉಪಾಹಾರವಾಗಿ ಸವಿಯಬಹುದು. ಅನಾನಸ್ ಜೂಸ್ ಮಾಡುವುದಕ್ಕಿಂತಲೂ ಸುಲಭವಾಗಿ ಇದನ್ನು ತಯಾರಿಸಿಕೊಳ್ಳಬಹುದು. ಹಾಗಿದ್ದರೆ ತಡವೇಕೆ?

ಬೇಕಾದ ಸಾಮಾಗ್ರಿಗಳು:

ಅಕ್ಕಿ : 1 ಬಟ್ಟಲು
ಅನಾನಸ್ ಹಣ್ಣಿನ ಚೂರು ; 1 ಬಟ್ಟಲು
ಸಕ್ಕರೆ: ಮುಕ್ಕಾಲು ಬಟ್ಟಲು
ದ್ರಾಕ್ಷಿ , ಗೋಡಂಬಿ: ರುಚಿಗೆ ತಕ್ಕಷ್ಟು
ತುಪ್ಪ : 3 ಚಮಚ
ಚೆರ್ರಿ ಹಣ್ಣು : 5-6
ಕೇಸರಿ ಎಸಳು : 4
ಏಲಕ್ಕಿ : 2

ಮಾಡುವ ವಿಧಾನ:
ಮೊದಲು ಉದುರಾಗಿ ಅನ್ನ ಮಾಡಿಕೊಳ್ಳಿ. ಅನಾನಸ್ ಚೂರುಗಳಿಗೆ ಒಂದು ಚಮಚ ತುಪ್ಪ ಹಾಕಿ ಹುರಿದುಕೊಂಡು, ಸ್ವಲ್ಪ ನೀರು ಚಿಮುಕಿಸಿ ಮೆತ್ತಗಾಗಲು ಬಿಡಿ. ಅನಂತರ ಸಕ್ಕರೆ ಹಾಕಿ ಕರಗುವವರೆಗೂ ಬಿಸಿ ಮಾಡಿ ಅನ್ನ ಸೇರಿಸಿ.ಅದಕ್ಕೆ ತುಪ್ಪ ಹಾಕಿ, ನೀರಿನಲ್ಲಿ ನೆನೆಸಿದ ಕೇಸರಿ ಎಸಳನ್ನು ಸೇರಿಸಿ ಬಿಸಿ ಮಾಡಿ ಇಳಿಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಬೆರಸಿ. ಚೆರ್ರಿ ಹಣ್ಣಿನಿಂದ ಅಲಂಕರಿಸಿ. ಸುವಾಸನೆಯ ಅನಾನಸ್ ರೈಸ್ ಸವಿಯಲು ಸಿದ್ಧ.

ಏನೇನೊ ಅನ್ನಕ್ಕಿಂತ ತೆಂಗಿನಕಾಯಿ ಅನ್ನವೇ ಲೇಸುಲಾವಣ್ಯ ಶಿವರಾಂ, ದಾವಣಗೆರೆ
ಇದನ್ನು ಮಾಡುವುದು ತುಂಬಾ ಸುಲಭ. ಬೇಕಾಗುವ ಪದಾರ್ಥಗಳಿಗೆ ತಿಣುಕಾಡಬೇಕಾಗಿಲ್ಲ. ಸಂಜೆ ಇಲ್ಲ ಬೆಳಗಿನ ಉಪಹಾರಕ್ಕೆ ಕ್ಷಣ ಮಾತ್ರದಲ್ಲಿ ತಯಾರಿಸಿಕೊಳ್ಳಬಹುದು. ಚಿತ್ರಾನ್ನ, ಆ ಅನ್ನ, ಈ ಅನ್ನ ತಿಂದು ಬೇಸರವಾಗಿದ್ದರೆ ಇದನ್ನೊಮ್ಮೆ ಪ್ರಯತ್ನಿಸಿ ನಿಮ್ಮ ಪಾಕ ಪ್ರಾವೀಣ್ಯವನ್ನು ಪ್ರದರ್ಶಿಸಿ.
ಅನ್ನ ಮಾಡುವ ಕೆಳಗಿನ ಪದಾರ್ಥಗಳ ಹೊಂದಿಸಿಕೊಳ್ಳಿ :ಹಸಿ ತೆಂಗಿನ ತುರಿ : 1 ಲೋಟ ಅಕ್ಕಿ : 1 ಲೋಟ ತುಪ್ಪ : 2 ಚಮಚ ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು : 1 ಚಮಚ ಕರಿಬೇವು : ಒಗ್ಗರಣೆಗೆ ಆಗುವಷ್ಟು ಉಪ್ಪು : ರುಚಿಗೆ ತಕ್ಕಷ್ಟು ಸಾಸಿವೆ : ಅರ್ಧ ಚಮಚ ಉದ್ದಿನ ಬೇಳೆ : 1 ಚಮಚ ಕಡಲೆ ಬೇಳೆ : 1 ಚಮಚ ಒಣ ಮೆಣಸಿನ ಕಾಯಿ : 4 ಸಣ್ಣಗೆ ಹೆಚ್ಚಿಕೊಂಡ ಹಸಿ ಮೆಣಸಿನ ಕಾಯಿ : 2 ಮುರಿದ ಗೋಡಂಬಿ : 1 ಚಮಚ
ಮಾಡುವ ವಿಧಾನ :
ಮೊದಲು ಹುಡಿಹುಡಿಯಾದ ಅನ್ನಕ್ಕೆ ತುಪ್ಪ ಹಾಗೂ ಉಪ್ಪನ್ನು ಬೆರಸಿ ಸ್ವಲ್ಪ ತಣ್ಣಗಾಗಲು ಬಿಡಿ. ಈಗ ಅಗಲವಾದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ. ಎಣ್ಣೆ ಕಾಯುತ್ತದ್ದಂತೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಮೆಣಸಿನ ಕಾಯಿ, ಹಸಿ ಮೆಣಸಿನ ಕಾಯಿ, ಗೋಡಂಬಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯ ಹಾಗೆ ಬಿಡಿ.
ಆಮೇಲೆ ತೆಂಗಿನಕಾಯಿ ತುರಿಯನ್ನು ಬೆರೆಸಿ ಒಂದೆರಡು ನಿಮಿಷ ಹುರಿಯಿರಿ. ಈ ಮಿಶ್ರಣವನ್ನು ಅನ್ನಕ್ಕೆ ಬೆರೆಸಿ ಚೆನ್ನಾಗಿ ತಿರುವಿ. ಇದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ. ಅಷ್ಟೆ ನಿಮ್ಮಿಷ್ಟದ ತೆಂಗಿನ ಕಾಯಿ ಅನ್ನ ಕ್ಷಣದಲ್ಲಿ ತಯಾರಾಗುತ್ತದೆ.

ಹೂಕೋಸು ಮತ್ತು ಹಸಿ ಬಟಾಣಿ ಬಾತ್

ಸುಲೋಚನಾ, ಬೆಂಗಳೂರು
ಅದೇ ಉಪ್ಪಿಟ್ಟು, ಚಿತ್ರಾನ್ನ, ರೈಸ್‌ಬಾತ್ ತಪ್ಪಿದರೆ ಇಡ್ಲಿ, ವಡೆ ಸಾಂಬಾರ್, ದೋಸೆ. ಸಾಕಪ್ಪ ಸಾಕು ಎನ್ನುವ ಮಂದಿಗೆ ಇಲ್ಲಿದೆ ಹೊಸ ಬಾತ್ ಐಟಂ. ನಿಮ್ಮ ನಾಲಗೆ ರುಚಿ ತಣಿಸಲು ಹಾಗೂ ನಿಮ್ಮ ವಾರದ ಉಪಹಾರ ಪಟ್ಟಿಗೆ ಇದನ್ನು ಹೊಸದಾಗಿ ಸೇರ್ಪಡಿಸಿಕೊಳ್ಳಬಹುದು. ಪಾಕಶಾಸ್ತ್ರದಲ್ಲಿ ಆಆಇಈ ಕಲಿಯುತ್ತಿರುವವರು ಸುಲಭವಾಗಿ ಮಾಡಬಹುದಾದ ಅಡುಗೆ. ಒಮ್ಮೆ ಪ್ರಯತ್ನಿಸಿ.

ಬೇಕಾಗುವ ಪದಾರ್ಥಗಳು:
ಅಕ್ಕಿ : 1ಲೋಟ
ದೊಡ್ಡ ಗಾತ್ರದ ಈರುಳ್ಳಿ :2
ದೊಡ್ಡ ಗಾತ್ರದಟೊಮಾಟೋ: 3
ಹೂಕೋಸು:1
ಕೆಂಪು ಮೆಣಸಿನಕಾಯಿ ಪುಡಿ: ಅರ್ಧ ಚಮಚ
ಗರಂ ಮಸಾಲ ಪುಡಿ: ಅರ್ಧ ಚಮಚ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು: ಸ್ವಲ್ಪ
ಎಣ್ಣೆ : 2 ಚಮಚ
ನಿಂಬೆಹಣ್ಣು: 1
ಉಪ್ಪು:ರುಚಿಗೆ ತಕ್ಕಷ್ಟು
ಮಸಾಲೆ ತಯಾರಿಕೆ: ಸಣ್ಣ ಈರುಳ್ಳಿ- 7 ;ಹಸಿರು ಮೆಣಸಿನ ಕಾಯಿ- 4; ಹಸಿ ಶುಂಠಿಯ ಸಣ್ಣ ತುಂಡು. ಮೊದಲು ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಅರ್ಧ ಚಮಚ ಎಣ್ಣೆಯಲ್ಲಿ ಹುರಿಯಿರಿ. ನಂತರ ಹಸಿ ಶುಂಠಿಯೊಂದಿಗೆ ಅದನ್ನು ರುಬ್ಬಿಕೊಳ್ಳಿರಿ.
ಮಾಡುವ ವಿಧಾನ:
ಈರುಳ್ಳಿಯನ್ನು ಮೊದಲು ಸಣ್ಣಗೆ ಹೆಚ್ಚಿಕೊಳ್ಳಿ. ಟೊಮಾಟೊವನ್ನು 10 ನಿಮಿಷ ಬಿಸಿನೀರಿನಲ್ಲಿ ನೆನೆಸಿ. ಅದರ ಸಿಪ್ಪೆ ತೆಗೆದು ರುಬ್ಬಿಟ್ಟುಕೊಳ್ಳಿ. ಈಗ ಶೋಧಿಸಿ, ತಿರುಳನ್ನು ಬೇರ್ಪಡಿಸಿರಿ. ಹೂಕೋಸನ್ನು ಸಣ್ಣ ತುಂಡುಗಳಾಗಿ ಹೆಚ್ಚಿ. ಅದನ್ನು ಉಪ್ಪು ಮತ್ತು ಅರಿಶಿನಪುಡಿ ಸೇರಿಸಿದ ನೀರಿನಲ್ಲಿ ನೆನೆಸಿ. ಕೆಲ ನಿಮಿಷಗಳ ನಂತರ ಹೂಕೋಸನ್ನು ಹೊರತೆಗೆದು ಗರಿಗರಿಯಾಗಿ ಎಣ್ಣೆಯಲ್ಲಿ ಹುರಿದಿಟ್ಟುಕೊಳ್ಳಿ.
ಹಸಿ ಬಟಾಣಿಯನ್ನು ಪ್ರತ್ಯೇಕವಾಗಿ ಬೇಯಿಸಿಕೊಳ್ಳಿ. ಎರಡು ಲೋಟ ನೀರಿನಲ್ಲಿ ಅಕ್ಕಿಯನ್ನು ನೆನೆಸಿ. ಕುಕ್ಕರಿನಲ್ಲಿ ಬೇಯಿಸಿರಿ. ಅದು ತಣ್ಣಗಾಗಲು ಮತ್ತು ಹುಡಿ ಹುಡಿಯಾಗಲು ಸ್ವಲ್ಪ ಕಾಲ ಅಗಲವಾದ ಪಾತ್ರೆಯಲ್ಲಿ ಹರಡಿ.
ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ. ಈರುಳ್ಳಿಯನ್ನು ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಇದಕ್ಕೆ ರುಬ್ಬಿಟ್ಟುಕೊಂಡ ಟೊಮಾಟೊ ಹಾಗೂ ಈರುಳ್ಳಿ , ಹಸಿ ಶುಂಠಿಯ ಮಸಾಲೆ ಸೇರಿಸಿ. ನೀರಿನ ಅಂಶ ಇಂಗುವವರೆಗೆ ಹುರಿಯಿರಿ. ಈಗ ಉಪ್ಪು, ಕೆಂಪು ಮೆಣಸಿನಪುಡಿ, ಗರಂ ಮಸಾಲೆ ಮತ್ತು ಬೇಯಿಸಿದ ಬಟಾಣಿ ಸೇರಿಸಿ ಚೆನ್ನಾಗಿ ಕಲಸಿರಿ. ನಂತರ ಈ ಪಾತ್ರೆಗೆ ಮೊದಲೇ ತಯಾರಿಸಿಕೊಂಡ ಅನ್ನ ಮತ್ತು ಅರ್ಧದಷ್ಟು ಹುರಿದಿಟ್ಟ ಹೂಕೋಸನ್ನು ಸೇರಿಸಿ. ಕೆಲ ನಿಮಿಷಗಳಕಾಲ, ಅನ್ನ ಬಿಸಿಯಾಗುವವರೆಗೆ ಹುರಿಯಿರಿ. ನಂತರ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ. ಅದಕ್ಕೆ ಹುರಿದ ಗೋಡಂಬಿ, ನಿಂಬೆ ಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಕಲಸಿ.
ಉಳಿದ ಹುರಿದ ಹೂಕೋಸು, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ತಾಜಾ ತೆಂಗಿನಕಾಯಿ ತುರಿಯಿಂದ ಬಾತ್ ಅನ್ನು ಅಲಂಕರಿಸಿ ಸವಿಯಬಹುದು.

ಬಲ್ಲವನೇ ಬಲ್ಲ ಕಿತ್ತಳೆ ಪಲಾವ್ ರುಚಿಯ

*ಪುಷ್ಪಮಾಲಾ, ಮೈಸೂರು
ಈಗಾಗಲೇ ಬಗೆಬಗೆಯ ಪಲಾವ್‌ಗಳನ್ನು ಸವಿದಿರಬಹುದು. ಆದರೆ ಪಂಚೇಂದ್ರಿಯಗಳನ್ನು ಪ್ರೇರಿಪಿಸುವ ಕಿತ್ತಳೆ ಪಲಾವನ್ನುಸವಿದಿರುವವರು ಬಹಳ ಅಪರೂಪ. ಎಲ್ಲ ಪಲಾವ್‌ಗಳಂತೆ ಇದನ್ನು ತಯಾರಿಸುವುದು ತುಂಬಾ ಸುಲಭ.ಈ ಪಲಾವ್‌ಗೆ ಬಳಸುವ ಪದಾರ್ಥಗಳಲ್ಲಿ ಕಿತ್ತಳೆ ಹಣ್ಣು ಬಹಳ ಪ್ರಮುಖ. ಸ್ವಲ್ಪ ಸಿಹಿ, ಒಂಚೂರು ಹುಳಿ,ಖಾರ ಎಲ್ಲವೂ ಬೆರೆತ ಪಲಾವ್‌ನಾಲಿಗೆ ಮೇಲೆ ಹೊರಳುತ್ತಿದ್ದರೆ...ಬಲ್ಲವನೇ ಬಲ್ಲ ಪಲಾವ್‌ರುಚಿಯ!
ಬೇಕಾಗುವ ಪದಾರ್ಥಗಳು
ಬಾಸ್ಮತಿ ಅಕ್ಕಿ: 1 ಲೋಟ
ಹಣ್ಣಾದ ಕಿತ್ತಳೆ: 3
ಬೀಜ ರಹಿತ ದ್ರಾಕ್ಷಿ: ¼ ಕಪ್
ಗೋಡಂಬಿ: 1 ಚಮಚ
ತಾಜಾ ತೆಂಗಿನಕಾಯಿ ತುರಿ: ¼ ಕಪ್
ಏಲಕ್ಕಿ:2
ದಾಲ್ಚಿನ್ನಿ: 1 ಇಂಚಿನ ತುಂಡು
ಪಲಾವ್ ಎಲೆ: 1
ಕಿತ್ತಳೆ ಕೆಂಪು ಬಣ್ಣ: 1 ಚುಟುಕೆ
ಈರುಳ್ಳಿ: 2
ಹಸಿರು ಮೆಣಸಿನಕಾಯಿ: 4 ಅಥವಾ 5
ಬೆಳ್ಳ್ಳುಳ್ಳಿ: 5 ತೊಳೆ
ತುಪ್ಪ; 3 ಚಮಚ
ಶುಂಠಿ: ¼ ಇಂಚಿನ ಒಂದು ತುಂಡು
ಕೊತ್ತಂಬರಿ ಸೊಪ್ಪು: ' ಕಟ್ಟು
ಉಪ್ಪು: ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ
ಮೊದಲು ಬಾಸ್ಮತಿ ಅಕ್ಕಿಯನ್ನು ಶುದ್ಧವಾದ ನೀರಿನಲ್ಲಿ ತೊಳೆದುಕೊಂಡು 10 ನಿಮಿಷ ನೀರಿನಲ್ಲಿ ನೆನೆಸಿ. ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ತೆಳ್ಳಗೆ ಉದ್ದುದ್ದವಾಗಿ ಸೀಳಿರಿ. ತೆಂಗಿನಕಾಯಿ ತುರಿಯಿಂದ, ತೆಂಗಿನ ಹಾಲನ್ನು ಹಿಂಡಿ ತೆಗೆಯಿರಿ. 1 ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದು ಪಕ್ಕಕ್ಕಿಡಿ. ಇನ್ನೆರಡು ಕಿತ್ತಳೆ ಹಣ್ಣಿನಿಂದ ಬೀಜಗಳನ್ನು ಬೇರ್ಪಡಿಸಿ, ರಸ ಕಿವುಚಿಕೊಳ್ಳಿ. ಶುಂಠಿ ಮತ್ತು ಬೆಳ್ಳುಳ್ಳಿಯನ್ನು ನುಣ್ಣಗೆ ರುಬ್ಬಿಟ್ಟುಕೊಳ್ಳಿ.
ನಂತರ ಪ್ರೆಜರ್ ಪ್ಯಾನಿನಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದರಲ್ಲಿ ಮಸಾಲೆ ಪದಾರ್ಥಗಳು,ಹೆಚ್ಚಿಕೊಂಡ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ರುಬ್ಬಿಟ್ಟುಕೊಂಡ ಶುಂಠಿ ಮತ್ತು ಬೆಳ್ಳುಳ್ಳಿ ಹಾಗೂ ಅಕ್ಕಿಯನ್ನು ಸೇರಿಸಿ. 2 ನಿಮಿಷ ಹುರಿಯಿರಿ. ನಂತರ ಕಿತ್ತಳೆ ರಸ, ತೆಂಗಿನಕಾಯಿ ಹಾಲನ್ನು ನೀರಿನೊಂದಿಗೆ ಬೆರೆಸಿ 2 ಲೋಟ ಆಗುವಂತೆ ಮಾಡಿ ಇದನ್ನ್ನು ಪ್ರತ್ಯೇಕವಾಗಿ ಬಿಸಿ ಮಾಡಿ, ಅನ್ನದ ಮೇಲೆ ಸಾಕಷ್ಟು ಉಪ್ಪು ಮತ್ತು ಬಣ್ಣದೊಂದಿಗೆ ಸುರಿಯಿರಿ. ಸಣ್ಣ ಉರಿಯಲ್ಲಿ ಕಲಕಿ 10 ನಿಮಿಷ ಪ್ರೆಜರ್ ಪ್ಯಾನಿನಲ್ಲಿ ಬೇಯಿಸಿರಿ. ಒಲೆಯಿಂದ ಇಳಿಸಿದ ನಂತರ ಹುರಿದ ಗೋಡಂಬಿ, ಕಿತ್ತಳೆ ತೊಳೆಗಳು,ದ್ರಾಕ್ಷಿ ಮತ್ತು ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಬೆರೆಸಿ.
ಹೀಗೆ ತಯಾರಾದ ಪಲಾವನ್ನು ಮಸಾಲೆ ಮೊಸರು ಬಜ್ಜಿ ಅಥವಾ ತರಕಾರಿ ಮೊಸರು ಬಜ್ಜಿಯೊಂದಿಗೆ ಬಡಿಸಿಕೊಂಡು ಸವಿಯಬಹುದು.

ವಿಭಿನ್ನ ರುಚಿಯ ಬೆಳ್ಳ್ಳುಳ್ಳಿ ರೈಸ್ ಬಾತ್

ಕಲ್ಪನಾ, ಬೆಂಗಳೂರು
ವಿಭಿನ್ನ ರುಚಿಯ ತಿಂಡಿ ಬಯಸುವರಿಗೆ ದಿಢೀರ್ ಎಂದು ಮಾಡಲು ತರಹೇವಾರಿ ಅಡುಗೆಗಳಿವೆ. ಬಿಸಿ ಅನ್ನ ಅಥವಾ ಅನ್ನ ಮಿಕ್ಕಿದ್ದರೆ ಬೆಳ್ಳುಳ್ಳಿ ರೈಸ್ ಬಾತ್ ಮಾಡಿ ಸವಿಯಬಹುದು.
ಬೇಕಾದ ಪದಾರ್ಥಗಳು:
ಅನ್ನ: 1 ಡೊಡ್ಡ ಬಟ್ಟಲು
ಬೆಳ್ಳುಳ್ಳಿ: 10 ಎಸಳುಗಳು, ಸಣ್ಣಗೆ ಹೆಚ್ಚಿಕೊಳ್ಳಬೇಕು
ಎಣ್ಣೆ: 2-3 ಟೇಬಲ್ ಚಮಚ
ಮೆಣಸಿನ ಪುಡಿ: 1 ಟೀ ಚಮಚ
ಕೊಬ್ಬರಿ ತುರಿ: 1 ಟೀ ಚಮಚ
ಒಣ ಮೆಣಸಿನಕಾಯಿ: 4
ಕರಿಬೇವು: 1 ಎಳೆ
ಕಡಲೆ ಬೇಳೆ, ಉದ್ದಿನ ಬೇಳೆ: ತಲಾ 1 ಟೀ ಚಮಚ
ಸಾಸಿವೆ, ಜೀರಿಗೆ: 1 ಟೀ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ದಪ್ಪ ತಳದ ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾಗುತ್ತಿದ್ದಂತೆ ಸಾಸಿವೆ ಸಿಡಿಸಿ. ಈಗ ಕಡಲೆ ಬೇಳೆ, ಉದ್ದಿನ ಬೇಳೆಯನ್ನು ಹಾಕಿ 30 ನಿಮಿಷಗಳ ಕಾಲ ಬಿಡಿ. ನಂತರ ಸಣ್ಣಗೆ ಹೆಚ್ಚಿಕೊಂಡ ಬೆಳ್ಳುಳ್ಳಿ ಎಸಳುಗಳನ್ನು ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಜೀರಿಗೆ, ಮೆಣಸಿನಕಾಯಿ, ಕರಿಬೇವು ಹಾಕಿ ಬಾಣಲೆಯನ್ನು ಒಲೆಯ ಮೇಲಿಂದ ಇಳಿಸಿ. ಮೆಣಸಿನ ಪುಡಿ ಮತ್ತು ಉಪ್ಪ್ಪನ್ನು ಹಾಕಿ ಚೆನ್ನ್ನಾಗಿ ಕಲಸಿ. ಈಗ ಈ ಮಿಶ್ರಣವನ್ನು ಬಿಸಿಬಿಸಿ ಅನ್ನಕ್ಕೆ ಹಾಕಿ ಚೆನ್ನಾಗಿ ಕಲಸಬೇಕು. ಕೊಬ್ಬರಿ ತುರಿಯನ್ನು ಉದುರಿಸಿ ಮತ್ತೊಮ್ಮೆ ಕಲಸಿಕೊಂಡರೆ ಬೆಳ್ಳುಳ್ಳಿ ರೈಸ್ ಬಾತ್ ಸಿದ್ಧವಾದಂತೆ. ಬೆಳ್ಳುಳ್ಳಿ ರೈಸ್ ಬಾತನ್ನು ಹಾಗೆ ಸವಿಯಬಹುದು ಅಥವಾ ಜೊತೆಗೆ ಉಪ್ಪಿನ ಕಾಯಿ ವಗೈರಾ ವಗೈರಾ ಇದ್ದರೆ ಮತ್ತಷ್ಟು ರುಚಿಯಾಗಿರುತ್ತದೆ.

ಬಾಸುಮತಿ ಅಕ್ಕಿ ತರಕಾರಿ ಬಿರಿಯಾನಿ

* ಮೇದಿನಿ ಗುಪ್ತ, ಸೋಮವಾರಪೇಟೆ
ಕರ್ನಾಟಕದಲ್ಲಿ ಅಕ್ಕಿ ಬೆಲೆಗಳು ಗಗನಕ್ಕೆ ಜಿಗಿದಿವೆ. ಸಾಧಾರಣ ಸೋನಾ ಮಸೂರಿ ಅಕ್ಕಿ ಕೆಜಿಗೆ 40 ರೂಪಾಯಿ! ಆದರೆ ಬಾಸುಮತಿ ಅಕ್ಕಿ 45-50 ರೂಪಾಯಿಗೆ ದೊರಕತ್ತೆ. ಅದರ ಬಿರಿಯಾನಿ ಮಾಡುವುದೇ ಜಾಣ ಜಾಣೆಯರ ಇವತ್ತಿನ ಜಾಣತನ.
ಬೇಕಾದ ಪದಾರ್ಥಗಳು
ಬಾಸುಮತಿ ಅಕ್ಕಿ - 2 ಲೋಟದ ತುಂಬ (ಅಥವಾ ಪಲಾವ್ ಅಕ್ಕಿ)
ಸಣ್ಣಗೆ ಕತ್ತರಿಸಿದ ವಿಧವಿಧವಾದ ತರಕಾರಿಗಳು - 4 ಲೋಟ ( ಬಟಾಣಿ, ಕ್ಯಾರೆಟ್, ಆಲೂಗೆಡ್ಡೆ, ಹೂಕೋಸು, ಬೀನ್ಸ್)
ದೊಡ್ಡ ಈರುಳ್ಳಿ - 3
ಬೆಳ್ಳುಳ್ಳಿ - 8 ತೊಳೆ
ಎಲಕ್ಕಿ - 4
ಲವಂಗ - 6
ದಾಲ್ಚಿನಿ - 2
ಇಂಚಿನ ಒಂದು ತುಂಡು
ಪಲಾವ್ ಎಲೆ - 4
ಮರಾಠ ಮೊಗ್ಗು - 4
ಎಣ್ಣೆ - 6 ಚಮಚ
ರುಚಿಗೆ ತಕ್ಕಷ್ಟು ಉಪ್ಪು.

ಮಿಕ್ಸಿಯ ಕೆಲಸ :
ತೆಂಗಿನಕಾಯಿ ತುರಿ - 1 ಲೋಟ nಕೊತ್ತಂಬರಿ ಸೊಪ್ಪು - 1 ದೊಡ್ಡ ಕಟ್ಟು
ಬೆಳ್ಳುಳ್ಳಿ 6 ತೊಳೆ, ಹಸಿರುಮೆಣಸಿನಕಾಯಿ 8 ಕಡ್ಡಿ, ಎರಡನ್ನೂ ಚೂರು ಎಣ್ಣೆಯಲ್ಲಿ ಹುರಿದು ಆನಂತರ ಮಿಕ್ಸಿಗೆ ಹಾಕಿ. ನುಣ್ಣಗೆ ರುಬ್ಬಿ.
ತಯಾರಿಸುವ ವಿಧಾನ
ಮೊದಲು ಅಕ್ಕಿಯನ್ನು ತೊಳೆದು, 10 ನಿಮಿಷ ನೀರಿನಲ್ಲಿ ನೆನೆಸಿರಿ. ಎಣ್ಣೆ ಯನ್ನು ಪ್ರೆಜರ್ ಕುಕ್ಕರ್ ನಲ್ಲಿ ಬಿಸಿಮಾಡಿ, ಮಸಾಲೆ ಪದಾರ್ಥಗಳು ನಂತರ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿರಿ. ಈರುಳ್ಳಿ ಬೆಂದ ಮೇಲೆ, ಅಕ್ಕಿ ಬೆರೆಸಿ ಎರಡು ನಿಮಿಷ ಹುರಿಯಿರಿ. ಅದಕ್ಕೆ ಮಸಾಲೆ ಮತ್ತು ಅರ್ಧಬೆಂದ ತರಕಾರಿ ಸೇರಿಸಿ. ಒಳ್ಳೆ ವಾಸನೆ ಬರುವವರೆಗೆ ಹುರಿಯಿರಿ. 4 ಲೋಟ ಬಿಸಿ ನೀರು ಮತ್ತು ಉಪ್ಪನ್ನು ಸೇರಿಸಿರಿ. 12 ನಿಮಿಷ ಪ್ರೆಜರ್ ಕುಕ್ಕರ್ ನಲ್ಲಿ ಬೇಯಿಸಿ. ಅನ್ನ ಆರುವ ಮುಂಚೆ ಬಿರಿಯಾನಿಯನ್ನು ಹುರಿದ ಗೋಡ೦ಬಿಯಿ೦ದ ಸಿಂಗಾರಗೊಳಿಸಿ.
ಹೀಗೂ ಮಾಡಬಹುದು :
ದೊಡ್ಡ ಈರುಳ್ಳಿ ಬದಲಾಗಿ ಸಣ್ಣ (ಸಾಂಬಾರ್) ಈರುಳ್ಳಿಯನ್ನು ಬಳಸಿ. ಕೊತ್ತಂಬರಿಸೊಪ್ಪು ಕಡಿಮೆ ಹಾಕಿ, ರುಬ್ಬುವಾಗ ಶುಂಠಿ ಸೇರಿಸಬಹುದು. ತೆಂಗಿನಕಾಯಿ ನೀರನ್ನು ಅನ್ನ ಬೇಯಿಸಲು ಉಪಯೋಗಿಸಬಹುದು.ಕತ್ತರಿಸಿದ ಟೊಮೇಟೊ ಸೇರಿಸಬಹುದು. ಬೇಯಿಸಿದ ಮಷ್ ರೂಂ ಮತ್ತು ಸೋಯಾ ತುಣುಕುಗಳನ್ನು ಸೇರಿಸಬಹುದು.

ಬಲು ಪೌಷ್ಟಿಕ ಅಲಸಂದೆ ರೊಟ್ಟಿ

* ನಿವೇದಿತಾ ಪ್ರಭಾಕರ್, ಬೆಂಗಳೂರು
ಅಲಸಂದೆ ರೊಟ್ಟಿ ತಿಂಡಿಯನ್ನು ತಯಾರಿಸುವ ಮುನ್ನ ಅಲಸಂದೆ ಕುರಿತಂತೆ ನನ್ನ ಬಾಲ್ಯದ ಅನುಭವವನ್ನು ಹೇಳಲೇಬೇಕು. ಆಗ ನಾವಿನ್ನೂ ಚಿಕ್ಕವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಎಂಬ ಗ್ರಾಮಕ್ಕೆ ಶಾಲೆಗೆ ರಜೆ ಬಂದಾಗಲೆಲ್ಲ ಅಲ್ಲಿಗೆ ಓಡುತ್ತಿದ್ದೆವು. ರಜಾ ಮಜಾಕ್ಕಾಗಿ ಅಲ್ಲಿಗೆ ಹೋಗಲು ಅಲ್ಲಿದ್ದ ದೊಡ್ಡ ಮನೆ, ಹಸು, ಸಾಕಿದ ಮುಧೋಳದ ನಾಯಿಗಳಷ್ಟೇ ಆಕರ್ಷಣೆಯಾಗಿರಲಿಲ್ಲ. ಮನೆಯಿಂದ ಎರಡು ಕಿ.ಮೀ.ದೂರದಲ್ಲಿದ್ದ ಗದ್ದೆ, ತೆಂಗಿನ ತೋಟ, ಬತ್ತದ ತೆನೆಗಳು, ಪಕ್ಕದಲ್ಲಿದ್ದ ಮಾವಿನ ಮರ, ಭಡಾರನೆ ನೀರು ಚಿಮ್ಮುಕಿಸುತ್ತಿದ್ದ ಬೋರವೆಲ್ ನೀರು, ಪರಿಶುದ್ಧ ಹವೆ...
ಆದಿನಗಳನ್ನು ನೆನೆಸಿಕೊಳ್ಳುತ್ತಿದ್ದರೆ ಈಗಲೂ ಕಣ್ಣು ಅರಳುತ್ತವೆ. ಮತ್ತೊಮ್ಮೆ ಹಳ್ಳಿಗೆ ಓಡಿಹೋಗಬೇಕು ಅಂತ ಅನ್ನಿಸುತ್ತದೆ.
ಗದ್ದೆಯಲ್ಲಿರುವ ಹಾವು ದೂರ ಓಡಿಹೋಗಲೆಂದು ಹಯ್ ಹುಯ್ ಅಂತ ಸದ್ದು ಮಾಡುತ್ತ ಬತ್ತದ ಜೊತೆಗೆ ಬೆಳೆಯುತ್ತಿದ್ದ ಮೆಣಸಿನಕಾಯಿ, ಕುಂಬಳಕಾಯಿ, ಬೆಂಡೆಕಾಯಿ, ಅಲಸಂದೆ ಮುಂತಾದವುಗಳನ್ನು ಹೆಕ್ಕಲು ಗದ್ದೆಗೆ ಹೋಗುತ್ತಿದ್ದೆವು. ನಿಮಗೆ ಆಶ್ಚರ್ಯವಾಗಬಹುದು, ಎಳೇ ಹಸಿರು ಮೆಣಸಿನಕಾಯಿಗಳನ್ನು ಬರಿಬಾಯಲ್ಲೇ ಕಚ್ಚಿ ತಿನ್ನುತ್ತಿದ್ದೆವು, ಖಾರವಿರುತ್ತಿರಲಿಲ್ಲ. ಜೊತೆಗೆ ಎಳೇ ಎಳೇ ಅಲಸಂದೆ ಕಾಯಿಗಳು ನೇರವಾಗಿಯೇ ಹೊಟ್ಟೆಗಿಳಿಯುತ್ತಿದ್ದವು. ಯಾವುದೇ ರಾಸಾಯನಿಕ ಸಿಂಪಡಿಸಿರದಿದ್ದರಿಂದ ಯಾವುದೇ ತೊಂದರೆಯಿರುತ್ತಿರಲಿಲ್ಲ.
ಬಲಿತ ಅಲಸಂದೆ ಕಾಳುಗಳನ್ನು ಬೇಯಿಸದೆ ತಿನ್ನಲು ಸಾಧ್ಯವಿಲ್ಲ. ಆದರೆ, ಎಳೇ ಅಲಸಂದೆ ಕಾಯಿ ತಿನ್ನಲು ಬಲುರುಚಿ. ಅಲಸಂದೆಯ ಮತ್ತೊಂದು ಮಹತ್ವವೆಂದರೆ, ಅದರಲ್ಲಿಯ ಕ್ಯಾಲರಿ ಅಂಶ. ಅಲಸಂದೆಯಲ್ಲಿನ ಫೈಬರ್ ರಕ್ತದಲ್ಲಿನ ಕೊಬ್ಬನ್ನು ಕರಗಿಸಲು ಬಲು ಸಹಕಾರಿ. ಇದರಲ್ಲಿ ಖನಿಜಾಂಶಗಳೂ ಸಾಕಷ್ಟಿದ್ದು, ಪೊಟ್ಯಾಷಿಯಂ ಅಂಶ ರಕ್ತದೊತ್ತಡ ಕಡಿಮೆಮಾಡುತ್ತದೆ. ಪ್ರೋಟೀನ್ ಅಲಸಂದೆಯಲ್ಲಿ ಜಾಸ್ತಿ ಇರುವುದರಿಂದ ಮಾಂಸ ತಿನ್ನುವವರು ಮಾಂಸವನ್ನು ತ್ಯಜಿಸಿ ಅಲಸಂದೆಗೆ ಶರಣಾಗಬಹುದು. ಇದು ಕ್ಯಾನ್ಸರ್ ಹರಡದಂತೆ ಕೂಡ ತಡೆಯುತ್ತದೆ ಎನ್ನುತ್ತದೆ ವೈದ್ಯಕೀಯ.
ಇಷ್ಟೆಲ್ಲ ಸತ್ವಯುತ ಆಹಾರ ಅಲಸಂದೆಯಿಂದ ರೊಟ್ಟಿಯನ್ನು ಕೂಡ ತಯಾರಿಸಬಹುದು. ಆದರೆ ಇದನ್ನು ಮಾಡುವುದನ್ನು ನೋಡಿದ್ದು ಮಾತ್ರ ಬೆಂಗಳೂರಿನಲ್ಲಿ. ಜೋಳದ ರೊಟ್ಟಿಯಂತೆಯೇ ಇದು ಕೂಡ ಪೌಷ್ಟಿಕ. ಹಾಗಾದರೆ ಒಮ್ಮೆ ನೀವೂ ತಯಾರಿಸಿ ನೋಡಿ.

ಬೇಕಾಗುವ ಪದಾರ್ಥಗಳು :

3 ಕಪ್‌ ಅಲಸಂದೆ ಕಾಳು
ಸ್ವಲ್ಪ ಎಳ್ಳು
1 ಕಪ್ಪು ಗೋದಿಹಿಟ್ಟು
4 -6 ಹಸಿ ಮೆಣಸಿನ ಕಾಯಿ
ಅರ್ಧ ಚಮಚದಷ್ಟು ಜೀರಿಗೆ
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಒಂದೆರಡು ಎಸಳು ಕೊತ್ತಂಬರಿಸೊಪ್ಪು.

ಮಾಡುವ ವಿಧಾನ :
ಮೊದಲು ಅಲಸಂದೆ ಕಾಳನ್ನು ಕುಕ್ಕರ್‌ನಲ್ಲಿ ಬೇಯಿಸಿಕೊಳ್ಳಬೇಕು. ಅಲಸಂದೆ ಚೆನ್ನಾಗಿ ಬೇಯದಿದ್ದರೆ ಅರಗಿಸಿಕೊಳ್ಳುವುದು ಕಷ್ಟ. ಹಾಗಾಗಿ ಚೆನ್ನಾಗಿ ಬೇಯಲಿ. ಅದು ಆರಿದ ಬಳಿಕ ಸುಣ್ಣಗೆ ರುಬ್ಬಿಟ್ಟುಕೊಳ್ಳಿ. ಇದಕ್ಕೆಸಣ್ಣಗೆ ಹೆಚ್ಚಿದ ಹಸಿ ಮೆಣಸಿನ ಕಾಯಿ, ಕೊತ್ತಂಬರಿಸೊಪ್ಪು, ಹುರಿದ ಎಳ್ಳು, ಜೀರಿಗೆ, ಗೋದಿಹಿಟ್ಟು ಹಾಗೂ ಉಪ್ಪು ಸೇರಿಸಿ ಚಪಾತಿ ಹಿಟ್ಟಿನ ರೀತಿಯಲ್ಲಿ ಕಲೆಸಿ.
ಆನಂತರ ಸಣ್ಣ ಸಣ್ಣ ಉಂಡೆಗಳನ್ನು ಮಾಡಿಟ್ಟುಕೊಂಡು ಮಣೆಯ ಮೇಲೆ ಚಪಾತಿಯಂತೆ ಲಟ್ಟಿಸಬಹುದು ಅಥವಾ ಜೋಳದ ರೊಟ್ಟಿಯಂತೆ ತಟ್ಟಬಹುದು (ತಟ್ಟಲು ಬಾರದವರು ಲಟ್ಟಿಸಬಹುದು ಅಷ್ಟೆ). ಎಣ್ಣೆಯನ್ನು ಅವರವರ ಅಗತ್ಯಗಳಿಗೆ ತಕ್ಕಂತೆ ಹಚ್ಚಬಹುದು. ಆನಂತರ ಕಾದ ಕಾವಲಿಯ ಮೇಲೆ ಎರಡೂ ಬದಿ ಚೆನ್ನಾಗಿ ಬೇಯಿಸಿ. ಬೇಯಿಸುವಾಗ ಎಣ್ಣೆ ಹಚ್ಚದಿದ್ದರೆ ಆರೋಗ್ಯಕ್ಕೂ ಹಿತ. ಅಲಸಂದೆ ರೊಟ್ಟಿಯನ್ನು ಉಪ್ಪಿನಕಾಯಿ, ಬದನೆಕಾಯಿ ಎಣ್ಣೆಗಾಯಿ, ಚಟ್ನಿಪುಡಿ, ಗುರೆಳ್ಳು, ಕಾಯಿ ಚಟ್ನಿಯ ಜತೆ ತಿನ್ನಲು ಬಲು ಸೊಗಸಾಗಿರುತ್ತದೆ

ರೋಟಿಯ ಸಂಗಾತಿ, ಮಾವಿನಕಾಯಿ ದಾಲ್

*ಮನಸ್ವಿನಿ, ನಾರಾವಿ
ಬೇಸಿಗೆಯಲ್ಲಿ ಹಣ್ಣುಗಳರಾಜ ಮಾವು, ಅಡುಗೆಮನೆಯಲ್ಲಿ ಖಾಯಂ ಅತಿಥಿ. ಮಾವಿನ ಚಿಗುರು, ಕಾಯಿ, ಹಣ್ಣು ಎಲ್ಲವೂ ಬಗೆಬಗೆಯ ಖಾದ್ಯಗಳಿಗೆ ಕಚ್ಚಾವಸ್ತುವಾಗಬಲ್ಲದು. ನಗರವಾಸಿಗಳಲ್ಲಿ ನಿತ್ಯ ರೋಟಿ, ಕುಲ್ಛಾ, ನಾನ್ ಸೇವನೆ ಸಾಮಾನ್ಯ. ಇದಕ್ಕೆ ನೆಚ್ಚಿಕೊಳ್ಳಲು ಮಾವಿನಕಾಯಿ ದಾಲ್ ರುಚಿಕರ. ಹಾಗಂತ ಬರೀ ರೋಟಿ ಜತೆ ತಿನ್ನಬೇಕೆಂದಿಲ್ಲ. ಚಪಾತಿ, ರೊಟ್ಟಿ ಜತೆ ಕೂಡ ದಾಲ್ ಬಳಸಬಹುದು.
ಬೇಕಾದ ಸಾಮಾಗ್ರಿಗಳು:
*ಹುಳಿಯಾಗಿರುವ ಮಾವಿನಕಾಯಿ : ಸಣ್ಣಗಾತ್ರದ್ದು ಎರಡು
* ಮೆಣಸಿನಪುಡಿ : 1 ಟೀ ಚಮಚ
* ಸಾಸಿವೆ : 1/2 ಟೀ ಚಮಚ
* ಜೀರಿಗೆ : 1/2 ಟೀ ಚಮಚ
* ತೊಗರಿಬೇಳೆ: 1 ಕಪ್
* ಉದ್ದಿನಬೇಳೆ : 1/4 ಟೀ ಚಮಚ
* ಕರಿಬೇವಿನ ಸೊಪ್ಪು ಸ್ವಲ್ಪ
* 1 ಚಿಟಿಕೆ ಇಂಗು
* 1 ಚಿಟಿಕೆ ಅರಿಶಿನ ಪುಡಿ
* 1ಈರುಳ್ಳಿ
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ರೀತಿ:
*ಮಾವಿನಕಾಯಿ ಸಿಪ್ಪೆ ತೆಗೆದು ಸಣ್ಣ್ಣ ಹೋಳುಗಳನ್ನಾಗಿ ಕತ್ತರಿಸಿ, ಈ ರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ತೊಗರಿಬೇಳೆಯನ್ನು ಬೇಯಿಸಿಕೊಳ್ಳಿ.
*ಸಾಸಿವೆ, ಜೀರಿಗೆ, ಉದ್ದಿನಬೇಳೆ, ಅರಿಶಿನಪುಡಿ, ಇಂಗು ಹಾಗೂ ಕರಿಬೇವಿನ ಸೊಪ್ಪನ್ನು ಬಾಣಲೆಗೆ ಹಾಕಿ ಹುರಿಯರಿ. ಉರಿ ಸಣ್ಣಗಿರಲಿ.
*ಬಾಣಲೆಗೆ ಮಾವಿನಕಾಯಿ ಹೋಳುಗಳನ್ನು ಮತ್ತು ಈರುಳ್ಳಿಯನ್ನು ಹಾಕಿ. ಒಂದು ಲೋಟ ನೀರು(ಅಗತ್ಯಕ್ಕೆ ತಕ್ಕಷ್ಟು) ಹಾಕಿ ಬೇಯಿಸಿ.
* ಹೋಳುಗಳು ಬೆಂದ ಮೇಲೆ, ಬೇಳೆ ಮತ್ತು ಮೆಣಸಿನಪುಡಿ ಹಾಕಿ ಸ್ವಲ್ಪ ಉರಿ ಹೆಚ್ಚಿಸಿ ಚೆನ್ನಾಗಿ ಕುದಿಸಿ.ಬಿಸಿ ಇರುವಾಗಲೇ ತಿನ್ನಲು ಉಪಯೋಗಿಸಿ

ಬರೇ ಬೇಳೆ ಸಾರಲ್ಲ, ಬೇಳೆ ಕಾಳುಗಳ ಪೌಷ್ಟಿಕ ಸಾರು

ಒಂದೇ ರೀತಿ ಸಾರು, ಹುಳಿ ತಿಂದು ಬೋರಾಗಿದ್ದರೆ ಇಲ್ಲಿ ತಿಳಿಸಿದ ಮಿಶ್ರ ಬೇಳೆ ಕಾಳಿನ ಸಾರು ಮಾಡಿ ನೋಡಿ. ಬಾಯಿಗೂ ರುಚಿ. ಆರೋಗ್ಯಕ್ಕೂ ಹಿತ. ಬಗೆಬಗೆಯ ಕಾಳುಗಳನ್ನು ಸೇರಿಸಿರುವುದರಿಂದ ಹೆಚ್ಚಿನ ಪ್ರೊಟೀನ್ ಇದೆ ಈ ಸಾರಲ್ಲಿ. ಮಕ್ಕಳಿಗಂತೂ ಪೌಷ್ಟಿಕವಾದ ಸಾರು.
* ವೈಶಾಲಿ ಹೆಗಡೆ, ಬೋಸ್ಟನ್
ಪದಾರ್ಥಗಳು:

1/4 ಕಪ್ ಉದ್ದಿನಬೇಳೆ
1/4 ಕಪ್ ಹೆಸರುಬೇಳೆ
1/2 ಕಪ್ ತೊಗರಿಬೇಳೆ
1/4 ಕಪ್ ಹುರುಳಿಕಾಳು
1/4 ಕಪ್ ರಾಜ್ಮ ಅಥವಾ ಕಿಡ್ನಿ ಬೀನ್ಸ್
1/4 ಕಪ್ ಅಲಸಂದೆ ಕಾಳು
1-2 ಟೊಮೇಟೊ
1 ಈರುಳ್ಳಿ
1 ಚಮಚ ಸಾರಿನಪುಡಿ
1/2 ಚಮಚ ಗರಂ ಮಸಾಲ ಪುಡಿ
ಕೊತ್ತಂಬರಿ ಸೊಪ್ಪು, ಸ್ವಲ್ಪ
3-4 ಕೆಂಪು ಅಥವಾ ಹಸಿಮೆಣಸಿನಕಾಯಿ, ಖಾರಕ್ಕೆ ತಕ್ಕಂತೆ
ಒಗ್ಗರಣೆಗೆ ಎಣ್ಣೆ, ಅರಿಶಿನ, ಸಾಸಿವೆ, ಜೀರಿಗೆ ಚಿಟಿಕೆ ಉಪ್ಪು,ಸಕ್ಕರೆ ರುಚಿಗೆ ತಕ್ಕಂತೆ
ಮಾಡುವ ವಿಧಾನ:
ಎಲ್ಲ ಕಾಳುಗಳನ್ನು 3-4 ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಎಲ್ಲ ಬೇಳೆ ಕಾಳುಗಳನ್ನು ಒಟ್ಟಿಗೆ ಕುಕ್ಕರ್ನಲ್ಲಿ ಚೆನ್ನಾಗಿ ಬೇಯಿಸಿ. ಬೇಯಿಸುವಾಗ, ಸ್ವಲ್ಪ ಅರಿಶಿನ, 1/4 ಚಮಚ ಎಣ್ಣೆ ಸೇರಿಸಿದರೆ ಚೆನ್ನಾಗಿ ಅರಳಿ ಬೇಯುತ್ತವೆ.
ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆ ಹಾಕಿಕೊಂಡು, ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಸ್ವಲ್ಪ ಬಾಡಿಸಿ. ಈಗ ಸಾರಿನಪುಡಿ, ಗರಂ ಮಸಾಲ ಪುಡಿ ಸೇರಿಸಿ ಹುರಿಯಿರಿ. ಈಗ ಟೊಮೇಟೊ ಸೇರಿಸಿ, ಉಪ್ಪು, ಚಿಟಿಕೆ ಸಕ್ಕರೆ ಸೇರಿಸಿ ಮುಚ್ಚಿ ಬೇಯಿಸಿ. ಈ ಮಿಶ್ರಣ ಮೆತ್ತಗೆ ಪೇಸ್ಟ್ನಂತೆ ಬೆಂದಾಗ ಬೆಂದ ಬೇಳೆ ಕಾಲಿನ ಮಿಶ್ರಣ ಸೇರಿಸಿ. ನಿಮ್ಮ ಹದಕ್ಕೆ ತಕ್ಕಂತೆ ನೀರು ಸೇರಿಸಿ (ತುಂಬಾ ತೆಳ್ಳಗಿರದಂತೆ ನೋಡಿಕೊಳ್ಳಿ) ಕುದಿಸಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
ಬಿಸಿ ಅನ್ನ ಅಥವ ಘೀ ರೈಸ್, ಜೀರಾ ರೈಸ್ನೊಂದಿಗೆ ಬಡಿಸಿದರೆ ಚೆನ್ನಾಗಿರುತ್ತದೆ

ಮಾವಿನಕಾಯಿಯ ಮಸಾಲೆಭಾತ್

* ವಾಣಿ ಸಿದ್ದಾರ್ಥ್, ತುಮಕೂರು
ಮಾವಿನಕಾಯಿ ಮತ್ತು ಮಾವಿನಹಣ್ಣಿನ ವಿವಿಧ ಬಗೆಯ ತಿಂಡಿ, ತಿನಿಸುಗಳನ್ನು ಮಾಡಲು ಇದುವೇ ಸಕಾಲ. ಯಾಕೆಂದರೆ ಮಾವಿನಕಾಯಿಗಳು ಎಲ್ಲಾ ಕಾಲದಲ್ಲೂ ಲಭ್ಯವಿರುವುದಿಲ್ಲ. ಸಿಕ್ಕಾಗಲೇ ಬಗೆಬಗೆಯ ತಿನಿಸುಗಳನ್ನು ಮಾಡಿ ರುಚಿ ನೋಡಿ, ಇತರರಿಗೂ ತಿಳಿಸುವವ ಜಾಣ. ಬನ್ನಿ ಮಾವಿನಕಾಯಿ ಮಸಾಲೆಭಾತ್ ಮಾಡೋಣ
ಹೊಂದಿಸಿಕೊಳ್ಳಬೇಕಾದ ಸಾಮಗ್ರಿಗಳು
* ಸಾದಾ ಅಕ್ಕಿ - ಒಂದು ಲೋಟ
* ಅರ್ಧ ಹಣ್ಣಾದ ಮಾವಿನಕಾಯಿ - 1
* ತುಪ್ಪ ಅಥವಾ ಎಣ್ಣೆ - 2 ಚಮಚ
* ಅರಸಿನಪುಡಿ - 1/4 ಚಮಚ
* ಕತ್ತರಿಸಿದ ಕೊತ್ತಂಬರಿ ಸೊಪ್ಪು - 1 ಚಮಚ
* ಕರಿಬೇವಿನ ಸೊಪ್ಪು - 1 ಚಮಚ
* ಜೀರಿಗೆ ಮತ್ತು ಕೆಂಪುಮೆಣಸಿನಕಾಯಿ - 2 ಚಮಚ
* ತೆಂಗಿನ ಕಾಯಿ - 1 ಹಿಡಿ
* ರುಚಿಗೆ ಬೇಕಾದಷ್ಟು ಉಪ್ಪು
ತಯಾರಿಸುವ ವಿಧಾನ:
ಮೊದಲು ಅನ್ನ ಮಾಡಿಕೊಳ್ಳಿರಿ. ಅದನ್ನು ತಣ್ಣಗಾಗಲು, ಅಗಲವಾದ ತಟ್ಟೆಯಲ್ಲಿ ಹರಡಿ ಸ್ವಲ್ಪ ಕಾಲಬಿಡಿ. ಅದಕ್ಕೆ 1 ಚಮಚ ತುಪ್ಪ ಸೇರಿಸಿ. ಮಾವಿನಕಾಯಿಯ ಹಸಿರು ಸಿಪ್ಪೆಯನ್ನು ಎರೆದು ಅದನ್ನು ತುರಿದಿಟ್ಟುಕೊಳ್ಳಿ. ಮಸಾಲೆ ಸಾಮಗ್ರಿಯನ್ನು ರುಬ್ಬುವಾಗ, ಜೀರಿಗೆ, ಕೆಂಪು ಮೆಣಸಿನಕಾಯಿ ಮತ್ತು ತೆಂಗಿನಕಾಯಿಯನ್ನು ರುಬ್ಬಿಕೊಳ್ಳಿ. ನಂತರ ತುರಿದಿಟ್ಟ ಮಾವಿನಕಾಯಿಯನ್ನು ಸೇರಿಸಿ ಆನಂತರ ಎಣ್ಣೆಯನ್ನು ಪಾತ್ರೆಯೊಂದರಲ್ಲಿ ಬಿಸಿ ಮಾಡಿಕೊಂಡು ಒಗ್ಗರಣೆ ಮಾಡಿರಿ. ಕೊನೆಯಲ್ಲಿ ರುಬ್ಬಿಕೊಂಡ ಮಸಾಲೆ ಸೇರಿಸಿ ಎರಡು ನಿಮಿಷ ಕಾಲ ಹುರಿಯಿರಿ. ಇದನ್ನು ಅನ್ನಕ್ಕೆ ಉಪ್ಪಿನೊಂದಿಗೆ ಬೆರೆಸಿರಿ. ತಯಾರಾದ ಭಾತಿಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಹಾಕಿರಿ, ಮಾವಿನಕಾಯಿ ಮಸಾಲೆಭಾತ್ ರೆಡಿ. ತಿಂದು ಮಜಾ ಉಡಾಯಿಸಿ.
ಯಾವುದೇ ತಿನಿಸಿರಲಿ ತಿನ್ನಲೇಬೇಕು ಅನ್ನಿಸಿದಾಗ, ತಿನ್ನದೇ ಮತ್ತೆ ತಿಂದರಾಯಿತು ಎಂದು ಮುಂದೆ ಹಾಕಿದರೆ ಹೊಟ್ಟೆಗೆ ಅನ್ಯಾಯ ಮಾಡಿಕೊಂಡಂತೆ ಅಂತೆ. ಈ ರೆಸಿಪಿ ಓದಿದ ಮೇಲಂತೂ ನಿಮಗೆ ಬಾಯಲ್ಲಿ ನೀರೂರದೆ ಇರದು, ನಾವೂ ಮಾಡಿಕೊಂಡು ತಿಂದಿಂದ್ದರೆ ಎಷ್ಟು ಚೆನ್ನಾಗಿತ್ತು ಅಂತ ಅನ್ನಿಸುವುದೂ ಸಹಜ. ದಯವಿಟ್ಟು ನಿಮ್ಮ ಹೊಟ್ಟೆಗೆ ಅನ್ಯಾಯ ಮಾಡಿಕೊಳ್ಳಬೇಡಿ. ಈಗಲೇ ಮಾವಿನಕಾಯಿ ಮಸಾಲಾಭಾತ್ ತಯಾರಿಸಿ ರುಚಿನೋಡಿ, ನಮಗೂ ತಿಳಿಸಿರಿ.

ಬಹುಪಯೋಗಿ ಖಾರದ ಪುಡಿ ಮಾಡಿ ನೋಡಿ

ಉಪ್ಪು, ಹುಳಿ, ಖಾರ ಇಲ್ಲದ ಅಡಿಗೆ ಅಡಿಗೆಯೇ? ನಿತ್ಯ ನಮ್ಮ ನಿಮ್ಮ ಮನೆಗಳಲ್ಲಿ ಮಾಡುವ ಅಡಿಗೆಗೆ ಬೇಕೇ ಬೇಕು ಸಾರಿನ ಪುಡಿ. ಈ ಸಾರಿನ ಪುಡಿಗೆ ಕೆಲವರು ಮೆಣಸಿನ ಪುಡಿ ಎನ್ನುವುದೂ ಉಂಟು. ಇಬ್ಬರು ಹಿರಿಯರು, ಇಬ್ಬರು ಕಿರಿಯರ ಚಿಕ್ಕ ಚೊಕ್ಕ ಸುಖೀ ಸಂಸಾರಕ್ಕೆ ಬೇಕಾಗುವಷ್ಟು ಮೆಣಸಿನ ಪುಡಿ ತಯಾರಿಕೆಗೆ ಇಲ್ಲಿದೆ ನಿಮಗೆ ಭಟ್ಟರ ಕೈಪಿಡಿ.

ಅಡುಗೆಗೆ ಸಿದ್ಧವಾಗುವ ಮುನ್ನ, ಅಡುಗೆಮನೆಯಲ್ಲಿ ಏನಿದೆ, ಏನಿಲ್ಲ ಎಂಬುದನ್ನು ನೋಡಿಕೊಳ್ಳಬೇಕು. ಎಲ್ಲರ ಅಡುಗೆಮನೆಗಳಲ್ಲಿ ಇರಲೇಬೇಕಾದ ವಸ್ತುಗಳ ಪಟ್ಟಿ ದೊಡ್ಡದಿದೆ. ಆ ಪಟ್ಟಿಯ ಮೊದಲ ಪುಟದಲ್ಲಿ ಕಾಣಿಸಿಕೊಳ್ಳುವ ಮೊದಲಿಗನೆಂದರೆ ಖಾರದಪುಡಿ. ಖಾರದ ಪುಡಿಗಳಲ್ಲಿ ನಾನಾಥರ. ಮೊಟ್ಟಮೊದಲಿಗೆ ನಾವು ನಿಮಗೆ ಸಾರಿನ ಪುಡಿ ಮಾಡುವ ವಿಧಿವಿಧಾನಗಳನ್ನು ಸರಳವಾಗಿ ವಿವರಿಸುತ್ತೇವೆ. ನೀವೂ ಮಾಡಿ, ಪಕ್ಕದ ಮನೆಯವರಿಗೂ ಹೇಳಿ. ಅವರ ಮನೆ ದೂರವಿದ್ದರೆ ಈ ಪುಟವನ್ನು ಅವರಿಗೆ ಈಮೇಲ್‌ನಲ್ಲಿ ಕಳಿಸಿಕೊಡಿ.
ಬೇಕಾಗುವ ಸಾಮಾನು, ಅಗತ್ಯವಾದ ಸಾಧನ:
1. ಮೆಣಸಿನ ಕಾಯಿ - ಕೆಂಪು ಉದ್ದನೆಯ ಬ್ಯಾಡಗಿ ಮೆಣಸಿನ ಕಾಯಿ - ಸಾರಿನ ರುಚಿ, ಕಂಪು ಹಾಗೂ ಕಣ್ಮನ ತಣಿಸುವ ಕೆಂಪು ಬಣ್ಣಕ್ಕೆ ಬಹುಯೋಗ್ಯ. ಖಾರ ಎಂದರೇ ಬೆಚ್ಚಿ ಬೀಳುವ, ಬಣ್ಣಕ್ಕೆ ಮಾರು ಹೋಗುವವರಿಗೆ - ಬ್ಯಾಡಗಿ. ಎರಡು ಹಿಡಿ - ಹೆಚ್ಚೂ ಕಡಿಮೆ - 50 ಮೆಣಸಿನ ಕಾಯಿ. ಅಥವಾ ಚೋಟುದ್ದದ ಉರಿಗಾರದ ಆದರೆ - ಬಣ್ಣಕ್ಕೆ ಹೆಚ್ಚು ಪ್ರಾಶಸ್ತ್ಯವಿಲ್ಲದ ರುಚಿಗೆ ಹೆಸರಾದ ಗುಂಟೂರು ಅಥವಾ ದೊಡ್ಡಬಳ್ಳಾಪುರ ಅಥವಾ ಮಣ್ಣುಕಟ್ಟಿದ 30 ಮೆಣಸಿನಕಾಯಿ.
2. ಧನಿಯಾ ಅಥವಾ ಕೊತ್ತುಂಬರಿ ಬೀಜ. ಹಸಿರಸಿರಾಗಿ ಸಣ್ಣಗಾತ್ರದ ಗೂನ ಧನಿಯಕ್ಕೆ ಘಮ ಹೆಚ್ಚು. ಇದು ಒಂದೂವರೆ ಬಟ್ಟಲು.
3. ಜೀರಿಗೆ - ಆರು ಚಮಚ
4. ಮೆಣಸು - ಕರಿಯ ಕಾಳು ಮೆಣಸು. 3 ಚಮಚ
5. ಮೆಂತ್ಯ - ಘಮಘಮಿಸುವ ಸಾರಿಗೆ ಮೆಂತ್ಯವೇ ಪ್ರಾಮುಖ್ಯ - 2 ಚಮಚ.
6. ಸಾಸಿವೆ 1 ಚಮಚ.
7. ಕರಿಬೇವಿನ ಎಸಳು - 5 ಅಥವಾ 6
8. ಇನ್ನು ಇಂಗು. ಇಂಗಿಲ್ಲದೆ ಪರಿಮಳ ಉಂಟೆ. ಇಂಗಿನ ರುಚಿ ಬಲ್ಲವರೇ ಬಲ್ಲರು
ವಿಧಿವಿಧಾನ:
ಮೊದಲಿಗೆ ಒಲೆಯ ಮೇಲೆ ಅಗಲವಾದ ದಪ್ಪ ತಳದ ಬಾಣಲೆಯನ್ನಿಟ್ಟು ಎರಡು ಹನಿ ಎಣ್ಣೆ ಹಾಕಿ ಕಾದಮೇಲೆ ಜೀರಿಗೆ, ಮೆಂತ್ಯ, ಮೆಣಸು, ಸಾಸಿವೆಯನ್ನು ಬೇರೆಬೇರೆಯಾಗಿ ಕಂಪು ಬರುವವರೆಗೆ ಹುರಿಯಬೇಕು. ಸ್ವಲ್ಪ ಹೆಚ್ಚು ಅಂದರೆ ಅರ್ಧ ಚಮಚ ಎಣ್ಣೆಯಲ್ಲಿ ಮೆಣಸಿನ ಕಾಯಿ, ಧನಿಯ ಬೇರೆಬೇರೆ ಹುರಿಯಬೇಕು. ಇಂಗು ಮತ್ತು ಕರಿಬೇವನ್ನು ಸ್ಪಲ್ಪ ಎಣ್ಣೆಯಲ್ಲಿ ಒಟ್ಟಿಗೆ ಹುರಿಯಬಹುದು. ಹುರಿದ ಎಲ್ಲಾ ಸಾಮಾನುಗಳನ್ನೂ 10 ನಿಮಿಷದ ನಂತರ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. 10 ನಿಮಿಷದ ನಂತರ ಹಬೆ ಕಡಿಮೆಯಾದ ತರುವಾಯ ಬಿಗಿ ಮುಚ್ಚಳವಿರುವ ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳುವುದು.
ಸಲಹೆ: ಮೆಣಸಿನಕಾಯಿಯನ್ನು ಕೊನೆಯಲ್ಲಿ ಹುರಿಯುವುದರಿಂದ - ಮೂಗಿಗೆ ತಟ್ಟುವ ಹಾಗೂ ನೆತ್ತಿಗೇರಿ ಸೀನು ಬರಿಸುವ ಮೆಣಸಿನ ಘಾಟನ್ನು ತಡೆಗಟ್ಟಬಹುದು.
ಉಪಯೋಗಗಳು :
1) ಅನ್ನದೊಂದಿಗೆ ಕಲಸಿ ಮೇಯಲು ತೊಗರಿಬೇಳೆಯಲ್ಲಿ ಮಾಡುವ ತಿಳಿಸಾರ್‌.
2) ಅವಲಕ್ಕಿ , ಮಂಡಕ್ಕಿ ಜತೆ ಹಸಿಹಸಿಯಾಗಿ ಈರುಳ್ಳಿ ಬೆರಸಿ ಮಾಡುವ, ಉತ್ತರ ಕರ್ನಾಟಕದ ಕಡೆ ಸೂಸಲ ಎಂದು ಕರೆಯಲಾಗುವ ಸಾಯಂಕಾಲದ ತಿಂಡಿಗೆ ಬೆರೆಸುವ ಕೆಂಪುಖಾರ.
3) ಸ್ಲೈಸ್‌ ಮಾಡಿದ ಹಸಿ ಸೌತೆಕಾಯಿ, ಟೊಮಾಟೋಗೆ ಉಪ್ಪು , ನಿಂಬೆರಸದ ಜತೆ ಸವರಿಕೊಳ್ಳುವ ಖಾರ.
4) ಹದನೋಡಿಕೊಂಡು ಖಾರ ಮೂಲದ ತಿಂಡಿ ತಿನಿಸಿಗಳಿಗೆ ಒಣ ಖಾರ ಬೆರೆಸಿಕೊಳ್ಳುವ ಜಾಣ ಜಾಣೆಯರಿಗೆ.
ಕೊನೆಯದಾಗಿ
5) ಕಳ್ಳಕಾಕರು ಮನೆಗೆ ನುಗ್ಗಿದರೆ ಅಂಜದೆ ತಿರುಗಿ ಬೀಳುವ ಹೆಣ್ಣು ಮಕ್ಕಳ ಆಯುಧ.

ನಾಲಿಗೆ ಚಾಪಲ್ಯಕ್ಕೆ ಮಾವಿನಕಾಯಿ ಚಿತ್ರಾನ್ನ

ಬೇಸಿಗೆ ಕಾಲಿಡುತ್ತಿದ್ದಂತೆ ಮಾವಿನಮರದ ಹಸಿರೆಲೆ ನಡುವೆ ಹಾಡುವ ಕೋಗಿಲೆಯ ಇಂಪಾದ ಗಾನವನ್ನು ಕೇಳುವುದೇ ಒಂದು ಆನಂದ. ಜೊತೆಗೇ ಗೊಂಚಲು ಗೊಂಚಲಾಗಿ ತೂಗುಬಿದ್ದಿರುವ ಎಳೆ ಮಾವಿನಕಾಯಿ ಹೊಟ್ಟೆ ಚುರುಗುಟ್ಟುವಂತೆ ಮಾಡುತ್ತದೆ. ಕಲ್ಲು ಹೊಡೆದು (ಅವಕಾಶವಿದ್ದರೆ) ಕಲ್ಲಿನಿಂದಲೇ ಕುಟ್ಟಿ ಮನೆಲಿಂದ ಕದ್ದು ತಂದ ಉಪ್ಪು, ಖಾರ ಹಾಕಿ ಮಾವಿನಕಾಯಿ ಮೆಲ್ಲುವುದು ಯಾರಿಗೆ ಇಷ್ಟವಾಗಲಿಕ್ಕಿಲ್ಲ. ನಾಲಿಗೆ ಚಾಪಲ್ಯವನ್ನು ಹಿಡಿದಿಡುವುದು ಶಕ್ಯವಲ್ಲ, ಸಾಧುವೂಅಲ್ಲ.
ಅದೇ ಮಾವಿನಕಾಯಿಯಿಂದ ತಯಾರಿಸಿದ ಚಿತ್ರಾನ್ನ ಅಡುಗೆಯಲ್ಲಿ ವೆರೈಟಿಯನ್ನು ತಂದುಕೊಡುತ್ತದೆ. ಬೆಳಗಿನ ತಿಂಡಿಗೇ ಆಗಲಿ, ಮಧ್ಯಾಹ್ನದ ಊಟಕ್ಕೇ ಆಗಲಿ, ರಾತ್ರಿ ಡಿನ್ನರ್ ಗೇ ಆಗಲಿ ಮಾವಿನಕಾಯಿ ಚಿತ್ರಾನ್ನ ಹೊಂದಿಕೆಯಾಗಬಲ್ಲದು. ಬಾಯಲ್ಲಿ ನೀರೂರಲು ಪ್ರಾರಂಭಿಸಿದ್ದರೆ ಇನ್ನೇಕೆ ತಡ ಮಾವಿನಕಾಯಿ ಚಿತ್ರಾನ್ನ ಮಾಡಲು ಪ್ರಾರಂಭಿಸಿ.
ಬೇಕಾಗುವ ಸಾಮಗ್ರಿ :

1/2 ಕೆ.ಜಿ ಅಕ್ಕಿ
2-3 ಮಾವಿನ ಕಾಯಿ
ಶೇಂಗಾ ಬೀಜ
7-8 ಗೋಡಂಬಿ
2-3 ಟೀ ಚಮಚ ಕಡಲೆಬೆಳೆ
4-5 ಹಸಿ ಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು
8-10 ಕರಿಬೇವು ಎಲೆ
ಒಂದು ಚಿಟುಕಿಯಷ್ಟು ಅರಿಶಿಣ ಪುಡಿ
ಟೀ ಚಮಚದಷ್ಟು ಸಾಸಿವೆ

ತುರಿದ ಹಸಿ ಕೊಬ್ಬರಿ
ಮಾಡುವ ವಿಧಾನ :
ಮೊದಲು ಒಂದು ಪಾತ್ರೆಯಲ್ಲಿ ಅನ್ನವನ್ನು ಮಾಡಿಟ್ಟುಕೊಂಡಿರಿ. ಅನ್ನ ಸ್ವಲ್ಪ ಉದುರಾಗಿದ್ದರೆ ಚಿತ್ರಾನ್ನ ಕಲಿಸಲು ಸುಲಭವಾಗುತ್ತದೆ. ಅನಂತರ ಎಲ್ಲಾ ಮಾವಿನಕಾಯಿಗಳ ಸಿಪ್ಪೆಯನ್ನು ತೆಗೆದು ಸಣ್ಣಗೆ ತುರಿದುಕೊಳ್ಳಿ. ತುರಿದುಕೊಂಡ ಮಾವಿನಕಾಯಿಯಲ್ಲಿ 3-4 ಹಸಿಮೆಣಸಿನಕಾಯಿ ಹಾಕಿ ನೀರನ್ನು ಬಳಸದೆ ಮಿಕ್ಸಿ ಮಾಡಿ ಇಡಿ.

ಅಗತ್ಯವಿದ್ದಷ್ಟು ಎಳ್ಳೆಣ್ಣೆಯನ್ನು ಬಾಣಲೆಗೆ ಹಾಕಿಕೊಂಡು ತುಸುಬಿಸಿಯಾಗುತ್ತಿದ್ದಂತೆ ಸಾಸಿವೆ ಹಾಕಿರಿ. ಚಟಪಟ ಅನ್ನುತ್ತಿದ್ದಂತೆ ಅರಿಶಿಣ ಪುಡಿ ಹಾಕಿ ನಂತರ ಕರಿಬೇವು ಸೊಪ್ಪನ್ನು ಹಾಕಿರಿ. ಸ್ಟೌ ಉರಿ ಸಣ್ಣದಾಗಿರಲಿ, ಒಗ್ಗರಣೆ ಹೊತ್ತದಿರಲೆಂದು. ಅದಕ್ಕೆ ಕಡಲೆಬೇಳೆ, ಶೇಂಗಾ, ಗೋಡಂಬಿ ಹಾಕಿ ಕಂದು ಬಣ್ಣ ಬರುವವರೆಗೆ ತಾಳಿಸಿರಿ. ಇದಕ್ಕೆ ಹಸಿ ಕೊಬ್ಬರಿಯನ್ನೂ ಹಾಕಿ ತಾಳಿಸಿದರೆ ಮಾವಿನಕಾಯಿ ಚಿತ್ರಾನ್ನ ಹೆಚ್ಚು ಸಮಯದವರೆಗೆ ಇಡಬಹುದು.
ಇದಕ್ಕೆ ಮೊದಲೇ ಮಿಕ್ಸಿಯಲ್ಲಿ ಮಿಶ್ರ ಮಾಡಿಕೊಂಡ ಮಾವಿನಕಾಯಿ, ಹಸಿಮೆಣಸಿನಕಾಯಿ ಮಿಶ್ರಣವನ್ನು ಸೇರಿಸಿ ಮತ್ತೆ ಸ್ವಲ್ಪ ತಾಳಿಸಿರಿ. ಬಾಣಲೆಯನ್ನು ಕೆಳಗಿಳಿಸಿ ಉದುರುದುರಾದ ಅನ್ನದೊಡನೆ ಉಪ್ಪು ಹಾಕಿ ಕಲಿಸಿರಿ. ಅದಕ್ಕೆ ಹೆಚ್ಚಿಟ್ಟುಕೊಂಡ ಕೊತ್ತಂಬರಿ ಸೊಪ್ಪು ಉದುರಿಸಿದರೆ ಮಾವಿನಕಾಯಿ ಚಿತ್ರಾನ್ನ ತಯಾರ್.

ಬಾಯಲ್ಲಿ ನೀರೂರಿಸುವ ನಿಂಬೆಹಣ್ಣಿನ ಉಪ್ಪಿನಕಾಯಿ *

ಪಂಚಭಕ್ಷ ಪರಮಾನ್ನದ ಭೂರಿ ಭೋಜನವೇ ಇರಬಹುದು, ಪಾಲಿಗೆ ಬಂದದ್ದು ಪಂಚಾಮೃತವೆಂದುಕೊಂಡು ತಿಂದುಂಡು ನಲಿಯುವ ಮುದ್ದೆ ಸಾರಿನ ಊಟವೇ ಆಗಿರಬಹುದು. ಊಟಕ್ಕೆ ಕುಳಿತೆವೆಂದರೆ ನಾನಿಲ್ಲಿದ್ದೇನೆ ಎಂದು ನೆನಪಿಸುವ ಉಪ್ಪಿನಕಾಯಿ ನಮ್ಮ ನಿತ್ಯ ಆಹಾರದ ಅನನ್ಯ ಮಿತ್ರ.
ಉಪ್ಪಿನಕಾಯಿ ಇಲ್ಲದ ಊಟ ಅದ್ಯಾತರ ಊಟವಯ್ಯ ಎಂದು ದಾಸರು ಹಾಡಿರದಿದ್ದರೆ ನಾವೂ ನೀವೂ ಕಲೆತು ಹಾಡೋಣ. ಛಪ್ಪನ್ನಾರು ಬಗೆಯ ಉಪ್ಪಿನಕಾಯಿಗಳನ್ನು ನಾವಿವತ್ತು ಅಂಗಡಿಯಿಂದ ತಂದು ತಿನ್ನಬಹುದು. ಆದರೆ, ಮನೆಯಲ್ಲೇ ಮಾಡಿದ , ವರ್ಷದ ಯಾವ ಸಮಯದಲ್ಲೂ ಮಾಡಬಹುದಾದ ನಿಂಬೆಕಾಯಿ ಉಪ್ಪಿನಕಾಯಿಯ ಗಮ್ಮತ್ತು ತಿಂದವರಿಗೇ ಗೊತ್ತು. ಬನ್ನಿ, ನಿಂಬೆಕಾಯಿ ಉಪ್ಪಿನಕಾಯಿ ಮಾಡುವ ವಿಧಾನವನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡೋಣ...ಲೊಟ್ಟೆ ಹೊಡೆಯುತ್ತಾ ಸವಿಯೋಣ.
ಬೇಕಾಗುವ ಪದಾರ್ಥ

ಒಳ್ಳೆಯ ಹೊಂಬಣ್ಣದ ಕಳಿತ ನಿಂಬೆ -50
ಉಪ್ಪು ಅರ್ಧ ಕೆಜಿ
ಕೆಂಪು ಬ್ಯಾಡಗಿ ಮೆಣಸು ಅಥವ
ಶುದ್ಧ ಮೆಣಸಿನ ಪುಡಿ ಕಾಲು ಕೆಜಿ
ಅರಿಶಿಣ 2 ಚಮಚ
ಮೆಂತ್ಯ 4 ಚಮಚ
ಎಳ್ಳೆಣ್ಣೆ ಕಾಲು ಕೆಜಿ
ಇಂಗು ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ
ಮೊದಲು ನಿಂಬೆ ಹಣ್ಣುಗಳನ್ನು ಚೆನ್ನಾಗಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿಟ್ಟುಕೊಂಡು ನಂತರ ಪ್ರತಿಯಾಂದನ್ನು ಎಂಟು ಹೋಳುಗಳನ್ನಾಗಿ ಹೆಚ್ಚಿಟ್ಟು ಕೊಳ್ಳಬೇಕು.
ಮಂತ್ಯವನ್ನು ಕೆಂಪಗೆ ಘಮಘಮ ಪರಿಮಳ ಬರುವಂತೆ ಹುರಿದಿಟ್ಟುಕೊಂಡು ಇದರೊಂದಿಗೆ ಸಾಸಿವೆ, ಅರಿಶಿಣ ಮತ್ತು ಬ್ಯಾಡಗಿ ಮೆಣಸು ಅಥವ ಮೆಣಸಿನ ಪುಡಿ - ಎಲ್ಲವನ್ನು ಬೆರೆಸಿ ತರಿತರಿಯಾಗಿ ಪುಡಿ ಮಾಡಿ. ಹೆಚ್ಚಿಟ್ಟ ನಿಂಬೆ , ಉಪ್ಪು ಮತ್ತು ಸಿದ್ಧ ಪಡಿಸಿದ ಉಪ್ಪಿನಕಾಯಿ ಪುಡಿಯನ್ನು ಚೆನ್ನಾಗಿ ಬೆರೆಸಿ.

ಎಳ್ಳೆಣ್ಣೆ ಕಾಯಿಸಿಕೊಂಡು ಅದಕ್ಕೆ ಇಂಗನ್ನು ಹಾಕಿ. ಆಮೇಲೆ ಹೋಳುಗಳೊಂದಿಗೆ ಬೆರೆಸಿ ಜಾಡಿಗಳಲ್ಲಿ ಅದುಮಿಟ್ಟು ತುಂಬಿಸಿ. ಎಲ್ಲಾ ಜಾಡಿಗಳಿಗೂ ಒಂದು ವಾರದವರೆಗೆ ಶುದ್ಧವಾದ ಬಿಳಿ ಬಟ್ಟೆ ಕಟ್ಟಿಡಿ. ಒಂದು ವಾರದ ನಂತರ ಉಪ್ಪಿನಕಾಯಿಯನ್ನು ಚೆನ್ನಾಗಿ ಕಲೆಸಿ, ಜಾಡಿಯಲ್ಲಿ ತುಂಬಿ ಮುಚ್ಚಳ ಹಾಕಿಡಿ. ಒಂದು ವರ್ಷದವರೆಗೂ ಡೈನಿಂಗ್‌ ಟೇಬಲ್‌ ಮೇಲೆ ಉಪ್ಪಿನಕಾಯಿ ತಪ್ಪುವುದಿಲ್ಲ.
ಉಪ್ಪಿನಕಾಯಿಯಲ್ಲಿ ಹುಳವಾಗುವುದು, ಕಪ್ಪಾಗುವಂತಹ ಸಮಸ್ಯೆಗಳು ಬೇಗನೇ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನೀವು ಕೆಲವು ಮುನ್ಸೂಚನೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ತಾಮ್ರ, ಹಿತ್ತಾಳೆ, ಅಥವಾ ಕಬ್ಬಿಣದ ಪಾತ್ರೆಯನ್ನು , ಉಪ್ಪಿನಕಾಯಿ ಮಾಡುವ ಯಾವ ಹಂತದಲ್ಲಿಯೂ ಉಪಯೋಗಿಸಬೇಡಿ. ಗಾಜು, ಪಿಂಗಾಣಿ, ಅಥವ ಕಲ್ಲಿನ ಜಾಡಿಯನ್ನು ಉಪಯೋಗಿಸಿದಲ್ಲಿ ಉಪ್ಪಿನಕಾಯಿಗೆ ಯಾವುದೇ ಹಾನಿಯಾಗುವುದಿಲ್ಲ. ಮಗುಚುವುದಕ್ಕೆ, ಉಪ್ಪಿನಕಾಯಿ ತೆಗೆದುಕೊಳ್ಳುವುದಕ್ಕೆ ಒಣಗಿದ ಸೌಟನ್ನೇ ಬಳಸೇಕು.
ನಿಂಬೆಹಣ್ಣು ಉಪ್ಪಿನಕಾಯಿ ಕಳಿತ ಮೇಲೆ ಬಲು ರುಚಿ ಮತ್ತು ತಿನ್ನಲೂ ಸುಲಭ. ಬಾಣಂತಿಯರಿಗೆ, ಮಕ್ಕಳಿಗೆ, ಇಷ್ಟವಿರುವವರಿಗೆ ನಿಂಬೆಹಣ್ಣು ಉಪ್ಪಿನಕಾಯಿ ಇಲ್ಲದ ದಿನಗಳೇಇರುವುದಿಲ್ಲ. ಸಿಹಿ ಇಷ್ಟಪಡುವವರು ಈ ಉಪ್ಪಿನಕಾಯಿಗೆ ಸಕ್ಕರೆ ಬೆರೆಸಿ ಕೂಡ ತಿನ್ನುತ್ತಾರೆ.

ಪಡವಲಕಾಯಿ ಗಸಿ ಅಥವಾ ಪಟ್ಲಕಾಯಿ ಹಶಿ

ನೋಡಲು ಹಾವಿನಂತೆ ಜೋತುಬೀಳುವ ಪಡವಲಕಾಯಿ ಹಶಿ ಅಥವಾ ಪಟ್ಲಕಾಯಿ ಗಸಿ ಬಲೇ ಆರೋಗ್ಯಕರ. ವಿಟಮಿನ್ ಮತ್ತು ನೀರಿನಿಂಶ ಜಾಸ್ತಿ ಇರುವ ಈ ತರಕಾರಿ ತಿಂದರೆ ಮಲಬದ್ಧತೆ ನಿವಾರಣೆಯಾಗುತ್ತದೆ. ಹಾಗೆಯೇ ಇದರ ಹಸಿರು ಎಲೆಗಳು ಕೂಡ ಕಾಮಾಲೆ ರೋಗ ಮತ್ತು ಹೃದ್ರೋಗಗಳಿಗೆ ಉತ್ತಮ ಔಷಧಿ. ಇದರಿಂದ ತಯಾರಿಸುವ ಬೋಂಡಾ ಕೂಡ ಬಲು ರುಚಿಕರ.

ಪಡವಲಕಾಯಿ ಒಂದು ಉತ್ತಮ ಕಾಯಿಪಲ್ಲೆ ಆಗಿದೆ. ಮಲಬದ್ಧತೆಗೆ ಇದು ತುಂಬಾ ಉಪಯುಕ್ತ. ಕೆಲವೆಡೆ ಇದನ್ನು ಪಟ್ಲಕಾಯಿ ಎಂದೂ ಹೇಳುತ್ತಾರೆ. ಇಂಗ್ಲೀಷಿನಲ್ಲಿ "Snake gourd" ಎಂದು ಹೇಳುವುದಲ್ಲದೇ, "Serpent gourd" ಎಂದೂ ಹೇಳುತ್ತಾರೆ. ಪಡವಲಕಾಯಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್‌ಗಳು ಹಾಗೂ ನೀರು ತುಂಬಿರುವುದು ಸಂಶೋಧನೆಯಲ್ಲಿ ಕಂಡುಬಂದಿದೆ. ಕೊಬ್ಬಿನಂಶಗಳು ಹೆಚ್ಚಿನ ಪ್ರಮಾಣದಲ್ಲಿಲ್ಲ. ಹಾಗಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಹುದು. ಅಪಾಯಕಾರಿಯಲ್ಲ. ಇದರಲ್ಲಿ ಮೆಗ್ನೇಶಿಯಮ್, ಕ್ಯಾಲ್ಶಿಯಮ್ ಹಾಗೂ ರಂಜಕಗಳ ಖನಿಜಾಂಶಗಳು ಹೇರಳವಾಗಿವೆ. ಇದರ ಹಸಿರೆಲೆಗಳು ಕಾಮಾಲೆ ರೋಗಕ್ಕೆ, ಹೃದಯ ರೋಗ, ಜ್ವರ, ಅತಿಯಾದ ಕೂದಲುದುರುವಿಕೆ ಮುಂತಾದ ಸಮಸ್ಯೆಗಳಿಗೆ ಉತ್ತಮ ಔಷಧವೆಂದು ಸಾಬೀತಾಗಿದೆ. ಆಯುರ್ವೇದದಲ್ಲಿ ವಿಷ ಸೇವಿಸಿದ ವ್ಯಕ್ತಿಯಿಂದ ವಿಷವನ್ನು ಕಾರಿಸಿ ಹೊರ ತೆಗೆಯಲೂ ಈ ಪಡವಲ ಕಾಯಿಯನ್ನು ಬಳಸುತ್ತಾರೆ.
ಈ ಕಾಯಿಪಲ್ಲೆಯ ಹಶಿಯನ್ನು ಉತ್ತರಕನ್ನಡದ ಕಡೆ ಹೆಚ್ಚಾಗಿ ಮಾಡುತ್ತಾರೆ. ಬಿಸಿ ಅನ್ನದೊಂದಿಗೆ ಇದನ್ನು ತೆಗೆದುಕೊಂಡರೆ ಬಲು ರುಚಿಕರ.
ಬೇಕಾಗುವ ಸಾಮಗ್ರಿಗಳು :

ಪಡವಲಕಾಯಿ - ಒಂದು (ಸಾಮಾನ್ಯ ಗಾತ್ರದ್ದು).
ತೆಂಗಿನಕಾಯಿಯ ತುರಿ - ಅರ್ಧ ಭಾಗದಲ್ಲಿ ಅರ್ಧದಷ್ಟು.
ಇಂಗು - ಚಿಟಿಕೆಯಷ್ಟು.
ಸಾಸಿವೆ - 1/2 ಚಮಚ
ಕಡ್ಡಿ ಮೆಣಸು (ಕೆಂಪು ಮೆಣಸು)- ಒಂದು
ಬೆಲ್ಲ - ರುಚಿಗೆ ತಕ್ಕಷ್ಟು. ಸಾಮಾನ್ಯವಾಗಿ ೧-೨ ಚಮಚ ಬೆಲ್ಲವನ್ನು ಹಾಕುತ್ತೇವೆ.
ಉಪ್ಪು - ರುಚಿಕೆ ತಕ್ಕಷ್ಟು
ಮೊಸರು - 2 ಸೌಟು
ಒಗ್ಗರಣೆಗೆ ತೆಂಗಿನೆಣ್ಣೆ - 1/2 ಅಥವಾ 1 ಚಮಚ

ಮಾಡುವ ವಿಧಾನ :
* ಮೊದಲಿಗೆ ಪಡವಲ ಕಾಯಿಯನ್ನು ಚೆನ್ನಾಗಿ ತೊಳೆದು, ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಬೇಕು.
* ನಂತರ ಇದಕ್ಕೆ ಸ್ವಲ್ಪ ಬೆಲ್ಲ ಹಾಗೂ ಉಪ್ಪನ್ನು ಹಾಕಿ ಬೇಯಿಸಬೇಕು. ತುಂಬಾ ಕರಟುವಂತೆ ಬೇಯಬಾರದು. ಹದವಾಗಿ ಬೇಯಿಸಿಕೊಂಡರೆ ಸಾಕು. ಬೆಂದ ಮೇಲೆ ತಣಿಯಲು ಬಿಡಬೇಕು.
* ತೆಂಗಿನತುರಿಯನ್ನು ನುಣ್ಣಗೆ ಬೀಸಿಕೊಳ್ಳಬೇಕು. ಇದಕ್ಕೆ ಬೇಯಿಸಿ ಚೆನ್ನಾಗಿ ತಣಿಸಿದ ಪಡವಲಕಾಯಿಯನ್ನು ಹಾಕಬೇಕು. (ಸ್ವಲ್ಪ ಬಿಸಿ ಇದ್ದರೂ ಕಾಯಿಗೆ ಹಾಕಿದ ತುಸು ಹೊತ್ತಿಗೇ ಕಸರಾಗುವ ಸಾಧ್ಯತೆ ಇದೆ. ಹಾಗಾಗಿ ಸಂಪೂರ್ಣ ತಣಿದ ನಂತರವೇ ಸೇರಿಸಬೇಕು.)
* ಈ ಮಿಶ್ರಣಕ್ಕೆ ಮೊಸರನ್ನು ಹಾಕಿ, ಬೇಕಿದ್ದರೆ ಉಪ್ಪು ಹಾಗೂ ನೀರನ್ನು ಸ್ವಲ್ಪ ಸೇರಿಸಿ, ಇದಕ್ಕೆ ಸಾಸಿವೆ, ಇಂಗು ಹಾಗೂ ಕಡ್ಡಿಮೆಣಸು ಚೂರುಗಳ ಒಗ್ಗರಣೆ ಹಾಕಿದರೆ ಘಮ್ಮೆನ್ನುವ ಪಟ್ಲಕಾಯಿ ಹಶಿ ಬಿಸಿ ಅನ್ನಕ್ಕೆ ಕಲಸಿಕೊಂಡು ತಿನ್ನಲು ರೆಡಿ.

ಹೊಸರುಚಿ . ಶೇಂಗಾ ಹೋಳಿಗೆ

ಕಡಲೆಬೇಳೆಯಿಂದ ತಯಾರಿಸಿದ ಹೂರಣದ ಹೋಳಿಗೆ, ಕಾಯಿ ಹೋಳಿಗೆ, ಸಕ್ಕರೆ ಹೋಳಿಗೆ ಮುಂತಾದ ತರಹೇವಾರಿ ಹೋಳಿಗೆಗಳನ್ನು ಹಬ್ಬಹರಿದಿನಗಳಲ್ಲಿ ಮೆಂದಿರುತ್ತೀರಿ. ಇವೆಲ್ಲಕ್ಕೆ ಹೊರತಾಗಿ ಹೊಸಬಗೆಯ ಸಿಹಿತಿನಿಸನ್ನು ಬಯಸುವವರಿಗೆ ಇಲ್ಲಿದೆ ನೋಡಿ ಹೊಸರುಚಿ . ಶೇಂಗಾ ಹೋಳಿಗೆಯನ್ನು ತಯಾರಿಸುವ ವಿಧಾನವನ್ನು ನೋಡೋಣ ಬನ್ನಿ.

ಬೇಕಾಗುವ ಪದಾರ್ಥಗಳು
ಶೇಂಗಾ 1 ಬಟ್ಟಲು ,ಬೆಲ್ಲ 1 ಬಟ್ಟಲು,ಗೋಧಿಹಿಟ್ಟು 1 ಬಟ್ಟಲು,ಏಲಕ್ಕಿ ಪುಡಿ 1 ಚಮಚಎಣ್ಣೆ
ಮಾಡುವ ವಿಧಾನ
ಶೇಂಗಾ ಅಥವಾ ಕಡಲೆಕಾಯಿ ಬೀಜಗಳನ್ನು ಹುರಿದುಕೊಂಡು ಸಿಪ್ಪೆಯನ್ನು ತೆಗೆದು ಒಂದು ಬೋಗುಣಿಯಲ್ಲಿ ಹಾಕಿಟ್ಟುಕೊಳ್ಳಿ. ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು. ನಂತರ ಉಂಡೆ ಬೆಲ್ಲವನ್ನು ಹೆರೆದಿಟ್ಟುಕೊಂಡು ಅದಕ್ಕೆ ಪುಡಿ ಮಾಡಿ ಶೇಂಗಾವನ್ನು ಸೇರಿಸಿ ಮತ್ತೆ ಮಿಕ್ಸಿಯಲ್ಲಿ ತಿರುವಿ ಹೂರಣ ತಯಾರಿಸಿಕೊಳ್ಳಬೇಕು.
ನಂತರದ ಕೆಲಸ ಗೋಧಿಹಿಟ್ಟಿನ ಕಣಕವನ್ನು ತಯಾರಿಸುವುದು. ಹಿಟ್ಟಿಗೆ ನೀರನ್ನು ಬೆರೆಸಿ ಚಪಾತಿ ಮಾಡುವ ಕಣಕದಂತೆ ತಯಾರಿಸಿಟ್ಟುಕೊಳ್ಳಿ. ಮೊದಲೇ ತಯಾರಿಸಿದ ಹೂರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಅದನ್ನು ಗೋಧಿಹಿಟ್ಟಿನ ಕಣದಿಂದ ಪೂರ್ತಿ ಮುಚ್ಚಿ ಲಟ್ಟಿಸಿರಿ. ಲಟ್ಟಿಸಿದ ಶೇಂಗಾ ಹೋಳಿಗೆಯ ಎರಡೂ ಬದಿಗೆ ಎಣ್ಣೆಯನ್ನು ಸವರಿ ಕಂದುಬಣ್ಣ ಬರುವವರೆಗೆ ಬೇಯಿಸಿರಿ.
ನೆನಪಿಡಿ, ಈ ಶೇಂಗಾ ಹೋಳಿಗೆಯನ್ನು ಬಿಸಿಬಿಸಿಯಾಗಿರುವಾಗಲೇ ಹೊಟ್ಟೆಗಿಳಿಸಬೇಕು. ಒಂದು ಚಮಚ ತುಪ್ಪದೊಡನೆ ತಿಂದರೆ ರುಚಿಯಾಗಿರುತ್ತದೆ.

ಬೇಳೆ ಕಾಳುಗಳ ಪೌಷ್ಟಿಕ ಸಾರು

ಬರೇ ಬೇಳೆ ಸಾರಲ್ಲ, ಬೇಳೆ ಕಾಳುಗಳ ಪೌಷ್ಟಿಕ ಸಾರು
ಒಂದೇ ರೀತಿ ಸಾರು, ಹುಳಿ ತಿಂದು ಬೋರಾಗಿದ್ದರೆ ಇಲ್ಲಿ ತಿಳಿಸಿದ ಮಿಶ್ರ ಬೇಳೆ ಕಾಳಿನ ಸಾರು ಮಾಡಿ ನೋಡಿ. ಬಾಯಿಗೂ ರುಚಿ. ಆರೋಗ್ಯಕ್ಕೂ ಹಿತ. ಬಗೆಬಗೆಯ ಕಾಳುಗಳನ್ನು ಸೇರಿಸಿರುವುದರಿಂದ ಹೆಚ್ಚಿನ ಪ್ರೊಟೀನ್ ಇದೆ ಈ ಸಾರಲ್ಲಿ. ಮಕ್ಕಳಿಗಂತೂ ಪೌಷ್ಟಿಕವಾದ ಸಾರು.

ಪದಾರ್ಥಗಳು:

1/4 ಕಪ್ ಉದ್ದಿನಬೇಳೆ
1/4 ಕಪ್ ಹೆಸರುಬೇಳೆ
1/2 ಕಪ್ ತೊಗರಿಬೇಳೆ
1/4 ಕಪ್ ಹುರುಳಿಕಾಳು
1/4 ಕಪ್ ರಾಜ್ಮ ಅಥವಾ ಕಿಡ್ನಿ ಬೀನ್ಸ್
1/4 ಕಪ್ ಅಲಸಂದೆ ಕಾಳು
1-2 ಟೊಮೇಟೊ
1 ಈರುಳ್ಳಿ
1 ಚಮಚ ಸಾರಿನಪುಡಿ
1/2 ಚಮಚ ಗರಂ ಮಸಾಲ ಪುಡಿ
ಕೊತ್ತಂಬರಿ ಸೊಪ್ಪು, ಸ್ವಲ್ಪ

3-4 ಕೆಂಪು ಅಥವಾ ಹಸಿಮೆಣಸಿನಕಾಯಿ, ಖಾರಕ್ಕೆ ತಕ್ಕಂತೆ
ಒಗ್ಗರಣೆಗೆ ಎಣ್ಣೆ, ಅರಿಶಿನ, ಸಾಸಿವೆ, ಜೀರಿಗೆ
ಚಿಟಿಕೆ ಉಪ್ಪು, ಸಕ್ಕರೆ ರುಚಿಗೆ ತಕ್ಕಂತೆ

ಮಾಡುವ ವಿಧಾನ:
ಎಲ್ಲ ಕಾಳುಗಳನ್ನು 3-4 ಗಂಟೆ ನೀರಿನಲ್ಲಿ ನೆನೆಸಿಡಿ. ನಂತರ ಎಲ್ಲ ಬೇಳೆ ಕಾಳುಗಳನ್ನು ಒಟ್ಟಿಗೆ ಕುಕ್ಕರ್ನಲ್ಲಿ ಚೆನ್ನಾಗಿ ಬೇಯಿಸಿ. ಬೇಯಿಸುವಾಗ, ಸ್ವಲ್ಪ ಅರಿಶಿನ, 1/4 ಚಮಚ ಎಣ್ಣೆ ಸೇರಿಸಿದರೆ ಚೆನ್ನಾಗಿ ಅರಳಿ ಬೇಯುತ್ತವೆ.
ಒಂದು ದೊಡ್ಡ ಬಾಣಲೆಯಲ್ಲಿ ಒಗ್ಗರಣೆ ಹಾಕಿಕೊಂಡು, ಅದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ ಸ್ವಲ್ಪ ಬಾಡಿಸಿ. ಈಗ ಸಾರಿನಪುಡಿ, ಗರಂ ಮಸಾಲ ಪುಡಿ ಸೇರಿಸಿ ಹುರಿಯಿರಿ. ಈಗ ಟೊಮೇಟೊ ಸೇರಿಸಿ, ಉಪ್ಪು, ಚಿಟಿಕೆ ಸಕ್ಕರೆ ಸೇರಿಸಿ ಮುಚ್ಚಿ ಬೇಯಿಸಿ. ಈ ಮಿಶ್ರಣ ಮೆತ್ತಗೆ ಪೇಸ್ಟ್ನಂತೆ ಬೆಂದಾಗ ಬೆಂದ ಬೇಳೆ ಕಾಲಿನ ಮಿಶ್ರಣ ಸೇರಿಸಿ. ನಿಮ್ಮ ಹದಕ್ಕೆ ತಕ್ಕಂತೆ ನೀರು ಸೇರಿಸಿ (ತುಂಬಾ ತೆಳ್ಳಗಿರದಂತೆ ನೋಡಿಕೊಳ್ಳಿ) ಕುದಿಸಿರಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸೇರಿಸಿ.
ಬಿಸಿ ಅನ್ನ ಅಥವ ಘೀ ರೈಸ್, ಜೀರಾ ರೈಸ್ನೊಂದಿಗೆ ಬಡಿಸಿದರೆ ಚೆನ್ನಾಗಿರುತ್ತದೆ

ಅಪ್ಪ ಅಮ್ಮ (ನನ್ನ ಬದುಕು)

ಅಸಿದ ಹೊಟ್ಟೆ ಹರಿದ ಬಟ್ಟೆ ಗುಟ್ಟಬಿಡದ ದಿಟ್ಟೆ
ಬರದ ಬಿಸಿಲ ಮೈಗೆ ಸ್ಥಿರದ ನೆರಳ ಕೊಟ್ಟ ದಣಿಗೆ
ಬಿಡದೆ ದುಡಿದು ದಣಿದ ಮುಗುದೆ
ಬೆವರ ಸುರಿಸಿ ಮೈರಕ್ತ ಹರಿಸಿ ಹಸನು
ಬೆಳೆಯನು ಬೆಳೆಸಿ ತುಂಬಿದವಳು
ಅಮ್ಮ
ಮೂರುತಿಂಗಳಕೂಸು ಕಂಕಳಲ್ಲಿ ಕಟ್ಟಿಕೊಂಡು
ಕೂಲೊನಾಲಿ ಮಾಡಿಕೊಂಡು ಮಕ್ಕಳನೆಲ್ಲಾ ಬೆಳೆಸಿದವಳು
ವಾರವಾದರೂ ಮನೆಗೆಬರದ ಗಂಡನೊದಿಗೆ
ಬೇಸರವಿಲ್ಲದೆ ಬಾಳುವವಳು
ವಾರಗಿತ್ತಿಯರಲ್ಲಿ ವೈನಾಕಿ ಎನಿಸಿಕೊಂಡವಳು
ಅಮ್ಮ
ಕೆಲಸಕ್ಕೆಂದು ಪಕ್ಕದೂರಿಗೆ ಹೊಗಿದ್ದ ಯಂಕ್ಟ
ಸಂಜೆಯಾದ್ರು ಕೂಲಿ ಕೊಡದ ದಣಿಯ ಕಾದು ಕುಳಿತ
ಕೇಳೊರ್ ಯಾರು ಅವನ ಸಂಕ್ಟ
ಅವನು ಬರುವುದು ದಿನರಾತ್ರಿ ಹತ್ತು ಘಂಟೆ
ಅಸಿದ ಮಕ್ಕಳು ಸುಮ್ನೆ ಮಲಗುವುದುಂಟೆ
ವಾರದಿಂದ ವೈನವಿಲ್ಲದ (ಆರೋಗ್ಯಸರಿಇಲ್ಲದ)
ಅಮ್ಮ
ಏರಿದಳು ಕೀಳಲೆಂದು ನುಗ್ಗೆ ಸೊಪ್ಪನ್ನ
ತತ್ತರಿಸಿ ಕೈಕಾಲು ಬಿದ್ದುಬಿಟ್ಟಳು ಕಿತ್ತು ಮೂರು ಹಿಡಿ ಸೊಪ್ಪನು
ಬಿದ್ದರಬಸಕ್ಕೆ ಸೊಂಟ ಉಳುಕಿ ಕಾಲು ಊನವಾಯ್ತು ವಿಧಿ ಎಣಿಕೆಗೆ ಎದುರುಂಟೆ
ಹಿರಿಯ ಮಗಳ ಕರೆದು ಸೊಪ್ಪ ಬಿಡಿಸಿ ಬೇಯಿಸು
ಅಳುವ ತಮ್ಮ ತಂಗಿಯರನ್ನು ಸುದಾರಿಸು(ಸಂತೈಸು)
ಸೊಂಟಕಾದ ನೋವು ಕಾಲು ಊತ ಅಸಿದ ಮಕ್ಕಳ ನೋಡಿ ನುಂಗಿಕೊಂಡಳು
ಅಮ್ಮ
ಎತ್ತಿಕೊಳ್ಳಲಿಲ್ಲವೆಂದು ಅಳುತ್ತಿದ್ದ ನನ್ನತಮ್ಮ
ಬಂದ ಅಪ್ಪ ವೆಂಕ್ಟ ಹೊರಗಿನಿಂದ ಕೂಗಿ ಕರೆದ ಯಂಕ್ಟಿ ಯಂಕ್ಟಿ
ಬರುವುದನ್ನೆ ಕಾಯುತ್ತಿದ್ದ ಮಡದಿ ಹೊರಗೆ ಬರದಕಂಡು ಎನಾಯ್ತು ಎಂದುಕೊಂಡು
ಕೂಗಿ ಕರೆದ ಹಿರಿಯ ಮಗಳ "ಅಪ್ಪಾ ಅಮ್ಮನಿಗೆ ಏಳಲಾಗುತ್ತಿಲ್ಲಾ"
ಮಗಳ ಮಾತ ಕೇಳಿ ವೆಂಕ್ಟ ನಿಂತಲ್ಲೇ ಕರಗಿ ಹೋದ
ವಿಧಿ ಎನಗೇಕೆ ಇಂತ ಶಿಕ್ಷೆ ಕೊಟ್ಟ ಅಂತ ಮರುಗಿದ
ಅಪ್ಪ
ಯಂಕ್ಟಿ ಹತ್ರ ಬಂದು ಕೂತು "ಏನಾಯ್ತೆ ನಿನಗೆ" ಅಂದ
ಅವಳ ಮುಖವ ನೋಡಿದವಗೆ ಮಾತೇ ಬಾರದಾಯ್ತು ಮುಂದ
ಅವನ ಅಳುವ ಕಂಡ ಅಮ್ಮ "ಯಾಕೆ ನೀ ಅಳುವೆ
ನನಗೇನಾಗಿಲ್ಲ ಸೊಂಟ ಸ್ವಲ್ಪ ಉಳುಕಿದೆ"
ಗಂಡ ಚಿಂತೆಯಲ್ಲಿ ಮುಳುಗಿಬಿಡುವನೆಂಬ ಗುಟ್ಟು ಬಿಡದ ಪಟ್ಟಿನವಳು
ಅಮ್ಮ
ಅಸಿದ ಮಕ್ಕಳ ನೋಡಿ ನುಗ್ಗೆ ಸೊಪ್ಪ ಕೀಳಲೋದೆ
ಆಯತಪ್ಪಿ ಬಿದ್ದುಬಿಟ್ಟೆ ಸೊಂಟ ಸ್ವಲ್ಪ ಉಳುಕಿದೆ
ಊರ ಕೊನೆಯ ಮನೆಯ ನಾಟಿವೈದ್ಯರನ್ನು ಕರೆತಂದನಪ್ಪ
ವೈದ್ಯ ಹೇಳಿದನು ಇವತ್ತು ನಾಳೆ ಚೆನ್ನಾಗಿ ನೋಡಿಕೊಳುವುದು
ಸೊಂಟಕ್ಕೆ ಕಾಲಿಗೆ ಚಿಕಿತ್ಸೆ ಮಾಡಿಸಿ ಅಂದು ಮನೆಯಲ್ಲೆ ನಿಂದ
ಅಪ್ಪ
ಎದ್ದು ಓಡಾಡಿದರೆ ಸೊಂಟ ಸರಿಯಾಗದು
ಇದ್ದಕಡೆಯೇ ಸುಮ್ಮನಿರಲು ಬೇಗ ಸರಿಯಾಗ್ವುದು
ಸರಿಯೆಂದು ನಿಟ್ಟುಸಿರು ಬಿಟ್ಟು ಅಡಿಗೆ ತಾನೆ ಮಾಡಿದ
ಮಕ್ಕಳಿಗೂ ಬಡಿಸಿ ಮಡದಿಗೂ ತಿನ್ನಿಸಿ
ಅವಳ ಪಕ್ಕದಲ್ಲೇ ತಲೆದಿಂಬಿಗೊರಗಿದ
ಅಪ್ಪ
ದಿನವೂ ಅಮ್ಮನೆದ್ದು ನಮ್ಮನೆಬ್ಬಿಸುತ್ತಿದ್ದಳು
ಇಂದು ಅವಳಿನ್ನೂ ಮಲಗಿದ್ದಳು
ಅಪ್ಪನೆದ್ದು ನಮ್ಮನೆಬ್ಬಿಸಿ ಅನ್ನ ಮಾಡಿಕೊಡುವೆ ನಿಮಗೆ
ತೊಂದರೆ ಕೊಡದಿರಿ ನಿಮ್ಮಮಗೆ ಆಡಿಕೊಳ್ಳಿ ಅನ್ನತಿಂದು
ನಿಮ್ಮ ಅಕ್ಕನೊಂದಿಗೆ ಎಂದು ಹೇಳಿ ನಡೆದ ಅಡುಗೆ ಮನೆಗೆ
ಅಪ್ಪ
ಅನ್ನ ಮಾಡಿ ಕೆಳಗೆ ಇಟ್ಟು ಮಡದಿ ಬಳಿ ಬಂದು ಕೂಗಿದ
ನೋವಿಗೆಂದು ಕೊಟ್ಟ ಮದ್ದು ಹೆಚ್ಚು ನಿದ್ದೆ ಮಾಡಿಸಿತ್ತು
ಅವನು ಕೂಗಿದರೂ ಅವಳು ಕದಲಲಿಲ್ಲ ಅವನ ಎದೆ ನಡುಗಿತು
ಎದೆ ಎದೆ ಚಚ್ಚಿ ಕೊಂಡು ಬಿದ್ದು ಬಿದ್ದು
ಅಳುತ ಕೆಳಗೆ ಬಿದ್ದವನು ಮೇಲೇಳಲೇ ಇಲ್ಲ
ಅಪ್ಪ
ಮಕ್ಕಳ ಅಳುವ ಕಂಡು ಅಕ್ಕ ಪಕ್ಕ ದವರು ಸೇರಿದರು
ಮನೆಯಲೆಲ್ಲ ನೋಡಿದರು ವೆಂಕ್ಟ ಇನ್ನಿಲ್ಲ
ಇವಳಿಗೇನಾಗಿದೆ ಎಂದು ವೈದ್ಯ ನಾಡಿ ನೋಡಿದ
ರಾತ್ರಿ ಕೊಟ್ಟ ಮದ್ದು ಇವಳ ಬಿಟ್ಟಿಲ್ಲ
ಅಕ್ಕ ಪಕ್ಕ ದವರು ಬಂದು ಬಳಗ ಕರೆಸಿ ಬಿಟ್ಟರು
ಅಮ್ಮನಮ್ಮ ಬಂದು ಮಗಳೆ ಮಗಳೆ ಎಂದು ಗಲ್ಲ ಸ್ವರಿ ಅತ್ತಳು
ಆಗ ಅಮ್ಮ ಕಣ್ಣು ಬಿಟ್ಟಳು
ಯಾಕೆ ಬಂದೆ ಯವ್ವ ನನಗೇನಾಗಿಲ್ಲ ಎಂದಳು
"ನಿನ್ನ ಗಂಡ ಬರಲು ಹೇಳಿದ ಬಂದು ಬಿಟ್ಟೆ" ಎಂದಳು
ಎಲ್ಲಿ ಅವರು ಎಂದು ತೆವಳಿಕೊಂಡು ಬಂದಳು
ಮನೆಯ ತುಂಬ ಇಅರುವ ಜನರ ನೋಡಿ ನಕ್ಕಳು
ಅಮ್ಮ
ಅಯ್ಯೋ ನನಗೇನಾಗಿದೆ ಎಂದು ಎಲ್ಲ ಬಂದಿರಿ
ಯಾರಿಗೂ ಆಗದ್ದೇನು ನನಗಾಗಿದೆ ಮನೆಗೆ ಹೋಗಿರಿ
ಮಕ್ಕಳು ಎಲ್ಲಿ ಎಂದು ತನ್ನ ತಾಯ ಕೇಳ್ದಳ್ಯ್
"ಅವರ ಅಪ್ಪನ ಮುಂದೆ ಕುಳಿತಿವೆ"
"ಯಾಕೆ ಯವ್ವ ಅವರಿಗೇನಾಯ್ತು ಎಂದಳು"
ಅಮ್ಮ
ಏನಾಗಿಲ್ಲ ಹೋಗಿ ನೋಡು ಮಗಳೆ ಎಂದು ಬಿಕ್ಕಿ ಬಿಕ್ಕಿ ಅತ್ತಳು
ಮಂದಿ ಸರಿಸಿ ಮುಖವ ನೋಡಿ ಉಸ್ಸೆಂದು ಬಿದ್ದಳು
ಕಷ್ಟ ನೋಡಿ ನನ್ನ ಬಿಟ್ಟು ನೀನೊಬ್ಬನೆ ಓದೆಯಾ
ನಾನು ಬರಲು ಮಕ್ಕಳು ತಬ್ಬಲಿ ಯಾಗುವವೆಂದು ಅತ್ತಳು
ಅವನ ಅಂತ್ಯಕಾರ್ಯ ಮುಗಿಸಿ ಹೆಗಲಿಗೆ ಕೂಸ ಇರಿಸಿ
ನಮ್ಮ ಸ್ಕೂಲಿಗೆ ಕಳಿಸಿ ದಣಿಯ ಮನೆಯ ಕಡೆಗೆ ನಡೆದಳು.
ಅಮ್ಮ
-ವಿ ಕೃಷ್ಣಮೊರ್ತಿ ಅಜ್ಜಹಳ್ಳಿ