Friday, July 31, 2009

ಆಡುಗೆ ಅರಮನೆಯಲ್ಲಿ ಅರಳಿದ ಅನಾನಸ್ ರೈಸ್

ಆರ್.ಸವಿತಾ, ಬೆಳಗಾವಿ
ಪುದೀನಾ ರೈಸ್, ಟೊಮೆಟೊ ರೈಸ್, ವೆಜಿಟಬಲ್ ರೈಸ್ ಎಲ್ಲಾ ಹಳೆಯದಾದವು. ಹೊಸರುಚಿ ಯಾವುದೂ ಇಲ್ವಾ? ಅಂಥ ಕೇಳುವವರಿಗೆ ಇಲ್ಲಿದೆ ಅನಾನಸ್ ರೈಸ್. ಬೆಳಗಿನ, ಸಂಜೆಯ ಉಪಾಹಾರವಾಗಿ ಸವಿಯಬಹುದು. ಅನಾನಸ್ ಜೂಸ್ ಮಾಡುವುದಕ್ಕಿಂತಲೂ ಸುಲಭವಾಗಿ ಇದನ್ನು ತಯಾರಿಸಿಕೊಳ್ಳಬಹುದು. ಹಾಗಿದ್ದರೆ ತಡವೇಕೆ?

ಬೇಕಾದ ಸಾಮಾಗ್ರಿಗಳು:

ಅಕ್ಕಿ : 1 ಬಟ್ಟಲು
ಅನಾನಸ್ ಹಣ್ಣಿನ ಚೂರು ; 1 ಬಟ್ಟಲು
ಸಕ್ಕರೆ: ಮುಕ್ಕಾಲು ಬಟ್ಟಲು
ದ್ರಾಕ್ಷಿ , ಗೋಡಂಬಿ: ರುಚಿಗೆ ತಕ್ಕಷ್ಟು
ತುಪ್ಪ : 3 ಚಮಚ
ಚೆರ್ರಿ ಹಣ್ಣು : 5-6
ಕೇಸರಿ ಎಸಳು : 4
ಏಲಕ್ಕಿ : 2

ಮಾಡುವ ವಿಧಾನ:
ಮೊದಲು ಉದುರಾಗಿ ಅನ್ನ ಮಾಡಿಕೊಳ್ಳಿ. ಅನಾನಸ್ ಚೂರುಗಳಿಗೆ ಒಂದು ಚಮಚ ತುಪ್ಪ ಹಾಕಿ ಹುರಿದುಕೊಂಡು, ಸ್ವಲ್ಪ ನೀರು ಚಿಮುಕಿಸಿ ಮೆತ್ತಗಾಗಲು ಬಿಡಿ. ಅನಂತರ ಸಕ್ಕರೆ ಹಾಕಿ ಕರಗುವವರೆಗೂ ಬಿಸಿ ಮಾಡಿ ಅನ್ನ ಸೇರಿಸಿ.ಅದಕ್ಕೆ ತುಪ್ಪ ಹಾಕಿ, ನೀರಿನಲ್ಲಿ ನೆನೆಸಿದ ಕೇಸರಿ ಎಸಳನ್ನು ಸೇರಿಸಿ ಬಿಸಿ ಮಾಡಿ ಇಳಿಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಬೆರಸಿ. ಚೆರ್ರಿ ಹಣ್ಣಿನಿಂದ ಅಲಂಕರಿಸಿ. ಸುವಾಸನೆಯ ಅನಾನಸ್ ರೈಸ್ ಸವಿಯಲು ಸಿದ್ಧ.

ಏನೇನೊ ಅನ್ನಕ್ಕಿಂತ ತೆಂಗಿನಕಾಯಿ ಅನ್ನವೇ ಲೇಸುಲಾವಣ್ಯ ಶಿವರಾಂ, ದಾವಣಗೆರೆ
ಇದನ್ನು ಮಾಡುವುದು ತುಂಬಾ ಸುಲಭ. ಬೇಕಾಗುವ ಪದಾರ್ಥಗಳಿಗೆ ತಿಣುಕಾಡಬೇಕಾಗಿಲ್ಲ. ಸಂಜೆ ಇಲ್ಲ ಬೆಳಗಿನ ಉಪಹಾರಕ್ಕೆ ಕ್ಷಣ ಮಾತ್ರದಲ್ಲಿ ತಯಾರಿಸಿಕೊಳ್ಳಬಹುದು. ಚಿತ್ರಾನ್ನ, ಆ ಅನ್ನ, ಈ ಅನ್ನ ತಿಂದು ಬೇಸರವಾಗಿದ್ದರೆ ಇದನ್ನೊಮ್ಮೆ ಪ್ರಯತ್ನಿಸಿ ನಿಮ್ಮ ಪಾಕ ಪ್ರಾವೀಣ್ಯವನ್ನು ಪ್ರದರ್ಶಿಸಿ.
ಅನ್ನ ಮಾಡುವ ಕೆಳಗಿನ ಪದಾರ್ಥಗಳ ಹೊಂದಿಸಿಕೊಳ್ಳಿ :ಹಸಿ ತೆಂಗಿನ ತುರಿ : 1 ಲೋಟ ಅಕ್ಕಿ : 1 ಲೋಟ ತುಪ್ಪ : 2 ಚಮಚ ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು : 1 ಚಮಚ ಕರಿಬೇವು : ಒಗ್ಗರಣೆಗೆ ಆಗುವಷ್ಟು ಉಪ್ಪು : ರುಚಿಗೆ ತಕ್ಕಷ್ಟು ಸಾಸಿವೆ : ಅರ್ಧ ಚಮಚ ಉದ್ದಿನ ಬೇಳೆ : 1 ಚಮಚ ಕಡಲೆ ಬೇಳೆ : 1 ಚಮಚ ಒಣ ಮೆಣಸಿನ ಕಾಯಿ : 4 ಸಣ್ಣಗೆ ಹೆಚ್ಚಿಕೊಂಡ ಹಸಿ ಮೆಣಸಿನ ಕಾಯಿ : 2 ಮುರಿದ ಗೋಡಂಬಿ : 1 ಚಮಚ
ಮಾಡುವ ವಿಧಾನ :
ಮೊದಲು ಹುಡಿಹುಡಿಯಾದ ಅನ್ನಕ್ಕೆ ತುಪ್ಪ ಹಾಗೂ ಉಪ್ಪನ್ನು ಬೆರಸಿ ಸ್ವಲ್ಪ ತಣ್ಣಗಾಗಲು ಬಿಡಿ. ಈಗ ಅಗಲವಾದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ. ಎಣ್ಣೆ ಕಾಯುತ್ತದ್ದಂತೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಮೆಣಸಿನ ಕಾಯಿ, ಹಸಿ ಮೆಣಸಿನ ಕಾಯಿ, ಗೋಡಂಬಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯ ಹಾಗೆ ಬಿಡಿ.
ಆಮೇಲೆ ತೆಂಗಿನಕಾಯಿ ತುರಿಯನ್ನು ಬೆರೆಸಿ ಒಂದೆರಡು ನಿಮಿಷ ಹುರಿಯಿರಿ. ಈ ಮಿಶ್ರಣವನ್ನು ಅನ್ನಕ್ಕೆ ಬೆರೆಸಿ ಚೆನ್ನಾಗಿ ತಿರುವಿ. ಇದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ. ಅಷ್ಟೆ ನಿಮ್ಮಿಷ್ಟದ ತೆಂಗಿನ ಕಾಯಿ ಅನ್ನ ಕ್ಷಣದಲ್ಲಿ ತಯಾರಾಗುತ್ತದೆ.

No comments: