Sunday, July 25, 2010

ಹಾಸ್ಯ (ಸುಮ್ಮನೆ ನಕ್ಕುಬಿಡಿ)5

ನಾಗು ಫೋನ್ ಮಾಡಿದ್ದ...
ಈ ಕೆಲಸಗಳ ಒತ್ತಡ.. ಪುಸ್ತಕ ಬಿಡುಗಡೆಯ ಓಡಾಟ..
ನನಗೂ ಸಾಕು ಸಾಕಾಗಿತ್ತು..ಮೈತುಂಬಾ ಕೆಲಸವಿದ್ದರೂ ಸೀದಾ ನಾಗುವಿನ ಮನೆಗೆ ನಡೆದೆ...

ನಾಗು ನೋಡಿ ನನಗೂ ಖುಷಿಯಾಯಿತು..ಈಗ ಎದ್ದು ಓಡಾಡುತ್ತಿದ್ದ...
ಮುಖದಲ್ಲಿ ಅಶಕ್ತತೆ ಇದ್ದರೂ ನಗುವಿತ್ತು..

"ಏನಪ್ಪಾ ನಾಗು ಚೆನ್ನಾಗಿದ್ದೀಯಾ..? ಹೇಗಿದ್ದೀಯಾ ಈಗ..?"

"ಈಗ ಚೆನ್ನಾಗಿದ್ದೀನಿ..ಯಾಕೋ ಗೊತ್ತಿಲ್ಲ
ನನ್ನ ಜೀವ, ಜೀವನ, ಪ್ರಾಣ ಎಲ್ಲ ಭಾರ ಆಗಿದೆ ಕಣೋ..."

ನನಗೆ ಗಾಭರಿ, ಆತಂಕ ಆಯಿತು...

"ಯಾಕೊ ಹಾಗಂತೀಯಾ..?
ತೊಂದ್ರೆ ಇದ್ರೆ ಹೇಳೊ.. ನಾನಿದ್ದೀನಿ.."

"ಅಯ್ಯೊ.. ಆ ಭಾರ ಎಲ್ಲ ನಾನೇ ಹೊರಬೇಕಪ್ಪಾ...
ಆದ್ರೂ ಜೀವನ ಭಾರ ಜಾಸ್ತಿ ಆಯ್ತು ಕಣೊ.."

ಅಡಿಗೆ ಮನೆಯಿಂದ ಪಾತ್ರೆಗಳ ಶಬ್ಧ ಕೇಳಿಸಿತು...ಸ್ವಲ್ಪ ಜೋರಾಗಿಯೇ ಇತ್ತು...

ನಾಗು ನೋಡಿದೆ.. ಸೊರಗಿ ಹೋಗಿದ್ದ...
ಆಘಾತದಿಂದ ಇನ್ನೂ ಪೂರ್ತಿ ಚೇತರಿಸಿ ಕೊಂಡಿಲ್ಲ ಅನಿಸಿತು...
"ನಾಗು.. ಹೀಗೆಲ್ಲ ಹೇಳಬೇಡ್ವೊ... ಯಾಕೊ ಏನಾಯ್ತು..? "

ಅಷ್ಟರಲ್ಲಿ ನಾಗುವಿನ ಹೆಂಡತಿ ಧುಮು.. ಧುಮು ಅನ್ನುತ್ತ..ನಮ್ಮ ಬಳಿ ಬಂದಳು...

"ಪ್ರಕಾಶಾ...
ಇದು ನನ್ನ ಬಗ್ಗೆ ಹೇಳಿದ್ದು ಕಣೊ...
ಇವರು ನನ್ನ ಬಳಿ ಯಾವಗಲೂ ....
"ನೀನೇ ನನ್ನ ಪ್ರಾಣ...
ನೀನೇ ನನ್ನ ಜೀವಾ...
ನೀನೇ ನನ್ನ ಜೀವನಾ.. ಬದುಕು... ಅಂತಿದ್ದರು...!!
ಈಗ ನನ್ನ ತೂಕ ಜಾಸ್ತಿ ಆಯ್ತು ಅಂತ ಹೀಗೆ ಹೇಳ್ತಿದ್ದಾರೆ.."

ನಾಗು ನಗುತ್ತಿದ್ದ..

ದೇಹಕ್ಕೆ.. ಮನಸ್ಸಿಗೆ ನೋವಿದ್ದರೂ ನಗುತ್ತಿದ್ದಾನಲ್ಲ...!
ಸಾವಿನ ದವಡೆಯವರೆಗೆ ಹೋಗಿ ಬಂದಿದ್ದಾನೆ...!
ಸಾಯುವ ಯಮಯಾತನೆ ಅನುಭವಿಸಿದ ನೋವು ಮುಖದಲ್ಲಿ ಕಾಣುತ್ತಿಲ್ಲ...!

ನಾಗು ನಗುತ್ತಿದ್ದಾನೆ....!!

ನಗುವ ಮನಸ್ಸಿದ್ದರೆ ಹೇಗಿದ್ದರೂ...ನಗಬಹುದು...!
ನಿಜ ಅವನ ಜೀವನ ಭಾರವಾಗಿದ್ದು ಕಾಣುತ್ತಿತ್ತು....

"ಪ್ರಕಾಶು...
ನನಗೆ ವೀಕ್‍ನೆಸ್ಸು ಕಣೊ.. ಹೇಗೆ ಹೊರಲೊ ಈ ಜೀವನ ಭಾರಾನಾ...?
ನನ್ನ ಜೀವನಾ.. ಪ್ರಾಣಾ.. ಎಲ್ಲಾ ಭಾರ ಆಗಿದೆ...
ನಿನ್ನ ಪುಸ್ತಕ ಬಿಡುಗಡೆಗೆ ಬರ್ಲಿಕ್ಕೆ ಟ್ಯಾಕ್ಸಿಗೆ ಹೇಳಿದ್ದೀನಿ ಕಣೊ..
ಮೊದಲಿನ ಹಾಗೆ ಬೈಕಲ್ಲಿ ಆಗಲ್ಲ.."

ನನಗೆ ನನ್ನಾಕೆಯ ನೆನಪಾಯಿತು..ತಕ್ಷಣ ಫೋನಾಯಿಸಿದೆ...
"ಹಲ್ಲೋ..."

"ಏನ್ರಿ...?"

"ಏನಿಲ್ಲ ಕಣೆ...
ನಿನ್ನ ಜೀವನ ಹೇಗಿದೆಯೆ..?
ಭಾರ ಆಯ್ತು ಅಂತ ಅನಿಸ್ತಾ ಇದೆಯಾ...?"

"ಏನ್ರಿ.. ಹೀಗಂತೀರಾ...? ರಾಯರು ಒಳ್ಳೆ ಮೂಡಲ್ಲಿರೊ ಹಾಗಿದೆ..?"

"ಇಲ್ಲಾ ಚಿನ್ನಾ..
ಹೇಳು ನಿನ್ನ ಜೀವನ ಭಾರ ಆಯ್ತು ಅಂತ ಅನಿಸ್ತಾ ಇದೆಯಾ..?"

"ಇಲ್ರೀ... ನೀವಿರುವಾಗ ಎಂಥಾ ಭಾರ ..?
ಎಲ್ಲಾ ಹಗುರ ರೀ....
ನೀವು ಜೊತೆಯಲ್ಲಿರುವಾಗ ಏನು ಭಾರ ಮಾರಾಯ್ರೆ...?
ಎಲ್ಲಾ ಭಾರ ನೀವೇ ಹೊರ್ತಾ ಇದ್ದೀರಲ್ಲಾ..!
ನಂಗೇನು...ನಾನು ಆರಾಮಾಗಿದ್ದೀನ್ರಿ..."

ಹೌದಲ್ವಾ...?

ನಾನು ಫೋನ್ ಕಟ್ ಮಾಡಿದೆ...

ನಿಜ ಅವಳಿಗೇನು? ಜಿಂಕೆ ಹಾಗೆ ಕುಣಿತಾ ಇದ್ದಾಳೆ...!

ಭಾರ ಹೊರ್ತಿರೋದು ನಾನು...!

ಈ ಜೀವನದ ಭಾರ ಕಡಿಮೆ ಮಾಡ್ಕೋ ಬೇಕು ಅನ್ನಿಸ್ತಾ ಇದೆ....!
..................................................................................................................


ಹುಟ್ಟಿದಾಗ ನನ್ನ ತಲೆ ದೊಡ್ಡದಾಗಿತ್ತಂತೆ...
ಡೆಲಿವರಿ ಸಮಯದಲ್ಲಿ ಅಮ್ಮನಿಗೆ ಬಹಳ ಕಷ್ಟವಾಯಿತಂತೆ...

ಹೆರಿಗೆಯ ನೋವು ಊಹೆಗೂ ಮೀರಿದ್ದು...!
ಗಂಡಸರ ಕಲ್ಪನೆಗೆ ಮೀರಿದ್ದು ಅದು...
ಪ್ರತಿ ಹೆರಿಗೆಯಲ್ಲೂ ಮಗುವಿನ ಸಂಗಡ ತಾಯಿಯೊಬ್ಬಳು ಹುಟ್ಟುತ್ತಾಳೆ..
ಮರು ಜನ್ಮ ಪಡೆಯುತ್ತಾಳೆ...

ನೋವಿನಲ್ಲೂ ಸುಖ ಕಾಣುವ ತಾಯಿಯ ಬಗೆಗೆ,
ಹೆಣ್ಣಿನ ಆ ಸ್ವಭಾವದ ಬಗೆಗೆ ನನಗೆ ಹೊಟ್ಟೆಕಿಚ್ಚಿದೆ...

ಅದು ಹೇಗೆ ಸಾಧ್ಯ ಎನ್ನುವ ಕುತೂಹಲವೂ ಇದೆ...

ನಾನು ಹುಟ್ಟಿದ ಮೂರು ತಿಂಗಳಲ್ಲಿ ನನಗೆ ರಿಕೆಟ್ಸ್ ರೋಗ ಆಯಿತು...
ಹುಬ್ಬಳ್ಳಿಯಲ್ಲಿ , ...
ಸಿರ್ಸಿಯ ವಿನಾಯಕ ಡಾಕ್ಟರ್ ಬಳಿ ಚಿಕಿತ್ಸೆ ಕೊಡಿಸಿದ್ದರಂತೆ...

ಬಡಕಲು ಶರೀರ...ಎಲುಬು ಚರ್ಮ...
ತಲೆಯೊಂದು ಮಾತ್ರ ದೊಡ್ಡದು...
ಯಾವಾಗಲೂ ಅಳುತ್ತಿದ್ದನಂತೆ...
ನನ್ನ ಮೈಗೆ "ಕಾಡ್ಳಿವರ್ ಆಯಲ್"
(ಮೀನಿನ ಎಣ್ಣೆ) ಹಚ್ಚಿ ಬೆಳಗಿನ ಬಿಸಿಲಲ್ಲಿ ಮಲಗಿಸುತ್ತಿದ್ದರಂತೆ...
ಸುಮಾರು ಏಳು ವರ್ಷ ಕಾಡಿತ್ತು ಈ ರೋಗ....!

ಅಶಕ್ತತೆಯ ಮಗು, ಕುರೂಪ...
ಎಲುಬು ಚರ್ಮ, ರಕ್ತವಿರದ ...
ಯಾವಾಗಲೂ ರೋಗಿಷ್ಟವಾದ .....
ನಕ್ಕರೂ ಚಂದ ಕಾಣದ ನನ್ನನ್ನು ನನ್ನಮ್ಮ ಎಂದೂ ಅಲಕ್ಷಿಸಲಿಲ್ಲ..

ಪ್ರೀತಿಗೆ ಕೊರತೆ ಮಾಡಲಿಲ್ಲ...
ಯಾವಾಗಲೂ ಮುದ್ದಿಸುತ್ತಿದ್ದರು....
ಎದೆಗೆ ಅವಚಿಕೊಳ್ಳುತ್ತಿದ್ದರು...
"ಚಿನ್ನಾ... ನೀನು ಕೃಷ್ಣನ ಹಾಗಿದ್ದಿಯಾ.." ಅಂತಿದ್ದರು...
ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ದೊಡ್ಡವನ್ನನ್ನಾಗಿಸಿದರು...

ನನ್ನ ತಂದೆ ತೀರಿದ ಒಂದು ತಿಂಗಳ ನಂತರ ನಾನು ಹುಟ್ಟಿದ್ದು...
ಪತಿಯ ಅಗಲಿಕೆಯ ನೋವು...
ಹೆರಿಗೆಯ ನೋವು...
ನನ್ನ ಅನಾರೋಗ್ಯ, ಅಶಕ್ತತೆ...,
ಕುರೂಪ...
ಭವಿಷ್ಯದ ಕತ್ತಲು....!
ಇದ್ಯಾವದೂ ಪ್ರೀತಿಗೆ, ಮಮತೆಗೆ ಅಡ್ಡಿ ಬರಲಿಲ್ಲ...

ಯಾವ ತಾಯಿಗೂ ಇವೆಲ್ಲ ಕಾಣಿಸೋದೂ ಇಲ್ಲ....!!

ನೋವಿನಲ್ಲೂ ಸುಖ ಕಾಣುವ ..
ತಾಯಿಯ ಬಗೆಗೆ, ಹೆಣ್ಣಿನ ಬಗೆಗೆ ನನಗೆ ಹೊಟ್ಟೆಕಿಚ್ಚಿದೆ...

ಅಳುವಿನಲ್ಲೂ ನಗ ಬಲ್ಲರು..
ಅವರು ದುಃಖದಲ್ಲೂ ಸುಖ ಕಾಣ ಬಲ್ಲರು.....
ಕುರೂಪದಲ್ಲೂ ರೂಪ ಕಾಣ ಬಲ್ಲರು...ಮಮತೆ ಕೊಡ ಬಲ್ಲರು...!

ಅಂಥಹ ತಾಯಿಗೆ...
ಸಮಸ್ತ ಹೆಣ್ಣುಕುಲಕ್ಕೆ
ಹೆಣ್ಣು ಹೃದಯಗಳಿಗೆ ನನ್ನ ನುಡಿ ನಮನಗಳು...

.............................................................................................................

ಕಳೆದ ಒಂದು ವರ್ಷದಿಂದ ನಾನು ಬ್ಲಾಗ್ ಬರೆಯುತ್ತಿದ್ದೇನೆ...

ನೀವೆಲ್ಲ ಇಲ್ಲಿ ಬಂದಿದ್ದೀರಿ...
ಓದಿದ್ದೀರಿ...

ಕೆಲವೊಮ್ಮೆ ನಕ್ಕಿದ್ದೀರಿ... ದುಃಖವೂ ಆಗಿರ ಬಹುದು...
ಖುಷಿ ಪಟ್ಟಿದ್ದೀರಿ...
ನನ್ನ ಲೇಖನ ಬೋರ್ ಆಗಿ ಬೇಸರ ಪಟ್ಟಿರ ಬಹುದು
ಕೆಲವು ಶಬ್ಧಗಳ ಪ್ರಯೋಗದ ಬಗ್ಗೆ ಬಯ್ದಿರಲೂ ಬಹುದು... !
ಆದರೂ ....
ನನ್ನ ಬೆನ್ನು ತಟ್ಟಿದ್ದೀರಿ... ಸಂತಸ ಪಟ್ಟಿದ್ದೀರಿ... !

ನನಗೆ ಇನ್ನಷ್ಟು ಬರೆಯಲು ಪ್ರೋತ್ಸಾಹ ನೀಡಿದ್ದೀರಿ... !

ಈ "ಹೇಸರೇ.. ಬೇಡ" ಪುಸ್ತಕ ನನ್ನ ಮಗು..

ಗುಣ ದೋಷ ನನಗೆ ಕಾಣುತ್ತಿಲ್ಲ...
ಬರಿ ಚಂದ ಮಾತ್ರ ಕಾಣುತ್ತಿದೆ...
ಸೊಗಸು ಮಾತ್ರ ನೋಡುತ್ತಿದ್ದೇನೆ...

ತಾಯಿ ಹೃದಯದ ಭಾವ ಅರ್ಥ ಆಗುತ್ತಿದೆ...
ಗುಣ ದೋಷ ಕಂಡರೂ ಕಾಣದಂತಿದ್ದೇನೆ.... !

ಇದೇ ಭಾನುವಾರ ನನ್ನ ಮಗುವನ್ನು ನಿಮ್ಮ ಕೈಗೆ ಇಡುತ್ತಿದ್ದೇನೆ...
ದಯವಿಟ್ಟು ಬನ್ನಿ...
ನನ್ನ ಸಂತಸದ ಕ್ಷಣಗಳವು.... ನಿಮಗಾಗಿ ಕಾಯುತ್ತೇನೆ.... ಬನ್ನಿ...
ಪ್ರೋತ್ಸಾಹಿಸಿ...

ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ... ಬೆಳಿಗ್ಗೆ ಹತ್ತು ಗಂಟೆಗೆ...

ಅಂದು ಏನೇನಿರುತ್ತದೆ...?

ವಾರದ ರಜಾದಿನದದಲ್ಲಿ ಬೆಚ್ಚನೆಯ ಕಾಫೀ...ತಿಂಡಿ...

ಪುಸ್ತಕ ಪ್ರೇಮಿಗಳಿಗೆ ಪುಸ್ತಕದ ಮಳಿಗೆಗಳು..
ಅವಧಿಯ ಎಲ್ಲಾ...ಪುಸ್ತಕಗಳು... !!

ಜಿ. ಎನ್. ಮೋಹನ್ ರವರ ಸೊಗಸಾದ ಮಾತುಗಳು...
ನಗೆಯುಕ್ಕಿಸುವ ಅವರ ಶೈಲಿಯ ಜೋಕುಗಳು...
ನಿಮ್ಮನ್ನು ನಿರಾಸೆ ಗೋಳಿಸಲಾರದು...

ನಾಗೇಶ ಹೆಗಡೆಯರ ಭಾಷಣ...
ಅವರ ಜ್ಞಾನದ, ತಿಳುವಳಿಕೆಯ ಮಾತುಗಳು...
ಅವರೊಂದು ಸಮುದ್ರ....
ಅಂಥಹ ಪರಿಸರ ತಜ್ಞರು ನಮ್ಮೊಂದಿಗೆ ಇರುವದೇ ನಮ್ಮ ಭಾಗ್ಯ...

ಡಾ. ಬಿ. ವಿ. ರಾಜಾರಾಮರ ಮಾತುಗಳು..
ಅವರು ಸೊಗಸಾದ ವಾಗ್ಮಿಗಳು....

ನಗೆ ನಾಟಕಗಳ ಸರದಾರ..
ಯಶವಂತ ಸರದೇಶಪಾಂಡೆಯವ ನಗೆ ಚಟಾಕಿಗಳು...
ಹೊಟ್ಟೆ ಹುಣ್ಣು ತರಿಸುವ ಹಾಸ್ಯಗಳು... ಜೋಕುಗಳು...

ಅಲ್ಲಿಗೆ ಬರುವ ಸಾಹಿತಿಗಳು... ಅನೇಕ ಗಣ್ಯರು.... !

ನಮ್ಮ ಬ್ಲಾಗ್ ಮಿತ್ರರು...
ಅದೊಂದು ಬ್ಲಾಗ್ ಗೆಳೆಯರ ಸಮಾರಂಭ...ಹಲವಾರು ಮಿತ್ರರ ಮುಖ ಪರಿಚಯ ಆಗುತ್ತದೆ...
ಸುಮಾರು ನೂರು ಬ್ಲಾಗ್ ಮಿತ್ರರು ಬರುತ್ತಿದ್ದಾರೆ...!

ನನ್ನ ಕಥನಗಳಲ್ಲಿ ಬರುವ ಪಾತ್ರಗಳು....

ನನ್ನ ಕೆಲಸದ ಒತ್ತಡದಿಂದಾಗಿ ಪ್ರತ್ಯೇಕವಾಗಿ ಕರೆಯಲು ಸಾಧ್ಯವಾಗದಿದ್ದುದಕ್ಕೆ ಕ್ಷಮೆ ಇರಲಿ...

ಬನ್ನಿ ನನ್ನ ಭಾವ ತೋಟಕ್ಕೆ..
ನಿಮಗಾಗಿ ಅಂದು ನಾನು ಕಾಯುತ್ತೇನೆ...

ನಿಮ್ಮೆಲ್ಲರ ..
ಪ್ರತಿಯೊಬ್ಬರ ನಗುವಿಗಾಗಿ ..
ನಾನು, ನನ್ನ ಗೆಳೆಯರು... ನನ್ನ ಕಥನದ ಪಾತ್ರಧಾರಿಗಳು....
ಬಾಗಿಲಲ್ಲಿ ಕಾಯುತ್ತೇವೆ..... ... ಬರುತ್ತೀರಲ್ಲ...??!!

ಒಂದು ರಜಾದಿನ ...
ಬೋರಾಗಿ...
ಎಂದಿನಂತೆ ಮಾಮೂಲಿಯಂತೆ....
ಕಳೆದು ಹೋಗುವ ಮುನ್ನ...ದಯವಿಟ್ಟು ಬನ್ನಿ..

ನಾನು ಸಣ್ಣವನಿದ್ದಾಗಬಹಳ ವೀಕ್ ಆಗಿದ್ದೆ..
ಬಡಕಲು ಕಾಲು, ಕೈಗಳು..
ದೊಡ್ಡದಾದ ತಲೆ...
"ದೊಡ್ಡತಲೆ ಪ್ರಕಾಶ" ಅನ್ನುವ ಅಡ್ಡ ಹೆಸರು ಕೂಡ ನನಗಿತ್ತು...
ನಾನು ಸಣ್ಣವನಿದ್ದಾಗ ನನಗೆ ರಿಕೆಟ್ಸ್ ರೋಗ ಆಗಿತ್ತು...
ಬಹಳ ವೀಕ್ ಆಗಿದ್ದರಿಂದ ಉಳಿದ ಮಕ್ಕಳ ಹಾಗೆ ಆಡಲು ಕಷ್ಟ ಆಗುತ್ತಿತ್ತು...
ನನ್ನ ಪಾದಗಳು ಎಲ್ಲರಂತೆ ಉದ್ದವಾಗಿರದೆ...
ಅಡ್ಡವಾಗಿ ತಿರುಗಿಕೊಂಡಿದ್ದವು...
ಒಂದು ಮಾರು ನಡೆಯುವಷ್ಟರಲ್ಲಿ ಎರಡುಸಾರಿ ಬೀಳುತ್ತಿದ್ದೆ...
ಓಡಾಡುವಾಗ ಕಾಲುಗಳು ಒಂದಕ್ಕೊಂದು ತಾಗಿ ಬಿದ್ದು ಬಿಡುತ್ತಿದ್ದೆ...
ಆಡಲು ಹೋದರೂ ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದೆ...
ಆ ನನ್ನ ಕಾಲುಗಳಿಗೊಂದು ಬೆಳ್ಳಿಯ ಬಳೆ...
ನನ್ನಜ್ಜ ಧರ್ಮಸ್ಥಳಕ್ಕೆ ಹರಕೆ ಹೊತ್ತುಕೊಂಡಿದ್ದನಂತೆ..
ಆ ಬಳೆಗಾಗಿ ಉಳಿದ ಮಕ್ಕಳೆಲ್ಲ ಹಾಸ್ಯ ಮಾಡುತ್ತಿದ್ದರು...
"ಇದು ಸೇರುಗಾರನ ಬಳೆ.." ಅಂತ..
ಬೇಸರವಾಗುತ್ತಿತ್ತು...ನೋವಾಗುತ್ತಿತ್ತು...
ದುಃಖವೂ ಆಗುತ್ತಿತ್ತು...
ಯಾರಬಳಿಯಲ್ಲಾದರೂ ಹೇಳಿಕೊಳ್ಳಬೇಕು ಅನಿಸುತ್ತಿತ್ತು..
ನನ್ನನ್ನು ಚಾಳಿಸುವ ಮಕ್ಕಳಿಗೆ ಬಯ್ಯಿಸ ಬೇಕು ಎಂದು ಅನಿಸುತ್ತಿತ್ತು...
ಯಾರ ಬಳಿ ಹೇಳಿಕೊಳ್ಳ ಬೇಕು...?
ಮನೆತುಂಬಾ ಮಕ್ಕಳು... ಅಮ್ಮನಿಗೋ ಮೈತುಂಬಾ ಕೆಲಸ...
ಒಂಟಿಯಾಗಿರುತ್ತಿದ್ದೆ... ಅದು ಅನಿವಾರ್ಯವೂ ಆಗಿತ್ತು...
ಆಡಲು ಬರದ ಮಕ್ಕಳಿಗೆ
ಯಾರೂ
ಸ್ನೇಹಿತರು ಬರುವದಿಲ್ಲ...
ನಾನಾಗ ನಾಲ್ಕನೆ ತರಗತಿ..
ಒಂದುದಿನ ನನ್ನ ಚಿಕ್ಕಪ್ಪ ಒಂದು ಮಕ್ಕಳ ಪತ್ರಿಕೆ ತಂದುಕೊಟ್ಟರು...
ಈಗಿನ ಪ್ರಖ್ಯಾತ ನಟಿ, ನಿರೂಪಕಿ ಸುಂದರಿ "ಅಪರ್ಣಾ"ರವರ ಮುಖಪುಟದ ಪತ್ರಿಕೆ....!
ಅದು "ಪಾಪಚ್ಚಿ"...! ಅದು ಮಕ್ಕಳ ಪತ್ರಿಕೆ...!
ಅದರಲ್ಲಿರೋ... ಕಥೆಗಳನ್ನು ಓದಿದೆ... ತುಂಬಾ ಚೆನ್ನಾಗಿತ್ತು...
ಯಾರೋ ಪಕ್ಕದಲ್ಲಿ ಕುಳಿತು ಕಥೆ ಹೇಳಿದಂತಿತ್ತು...
ಓದುತ್ತ... ಓದುತ್ತ ಜಗತ್ತನ್ನೇ.. ಮರೆತು ಬಿಟ್ಟೆ...
ಓದುವದು ನನಗೆ ಬಹಳ ಇಷ್ಟವಾಯಿತು...
ಯಾರೂ ನನ್ನೊಂದಿಗೆ ಆಡಲು ಬಾರದ ಸಮಯದಲ್ಲಿ ಪುಸ್ತಕಗಳು ನನಗೆ ಗೆಳೆಯನಾಗಿಬಿಟ್ಟಿತು...
ನನ್ನ ಜೀವನದ ಒಂಟೀತನದಲ್ಲಲ್ಲೆಲ್ಲ ಈ ಗೆಳೆಯ ನನ್ನೊಂದಿಗಿದ್ದಾನೆ..
ಯಾರೂ ಕೊಡದ ಸಮಾಧಾನ, ಸಾಂತ್ವನ.. ಈತ ಕೊಟ್ಟಿದ್ದಾನೆ...
ನನ್ನನ್ನು ನನ್ನಷ್ಟಕ್ಕೇ.. ನಗಿಸಿದ್ದಾನೆ..
ಅಳಿಸಿದ್ದಾನೆ..
ಭಾವದ ಅಲೆಯಲ್ಲಿ ತೇಲಿಸಿದ್ದಾನೆ...!
ನನ್ನಲ್ಲಿದ ಕನಸುಗಳನ್ನು ನನ್ನಲ್ಲಿಟ್ಟಿದ್ದಾನೆ...!
ಎಲ್ಲಿಲ್ಲದ ಹುಚ್ಚು ಕಲ್ಪನೆಯನ್ನು ನನ್ನಲ್ಲಿ ತುಂಬಿದ್ದಾನೆ...!
ಇಂಥಹ ಸ್ನೇಹಿತನನ್ನು ನನಗೆ ಕೊಟ್ಟ ನನ್ನ ಚಿಕ್ಕಪ್ಪನಿಗೆ ಹೇಗೆ ಕೃತಜ್ಞತೆ ಹೇಳಲಿ...?
ಶಬ್ಧಗಳಿಗೆ ಶಕ್ತಿಯಿಲ್ಲ...
ನನಗೆ ಓದುವ ಚಟ ಹಿಡಿಸಿದ ನನ್ನ ಚಿಕ್ಕಪ್ಪನಿಗೆ ನಮನಗಳು....
ನನ್ನ ಪುಸ್ತಕ ನನ್ನ ಚಿಕ್ಕಪ್ಪನಿಗೆ ಅರ್ಪಣೆ....
ನನ್ನ...
ಇಂದಿನ ಸಂತಸ.. ಯಶಸ್ಸೆಲ್ಲ..
ನನ್ನದಲ್ಲ...
ಹಾಗಂತ...ನಿನ್ನದೂ ಅಲ್ಲ..!!
ದಾರಿಗೊತ್ತಿರದ ಬಾಳಲ್ಲಿ..
ಸರಿಯಾಗಿ ನಿಲ್ಲಲೂ ಬಾರದ


ನನ್ನ ಬಾಲ್ಯದಲ್ಲಿ..
ದಿಕ್ಕನ್ನು ತೋರಿದ..
ನಿನ್ನ...ತೋರು ಬೆರಳಿನದು...!
ಚಿಕ್ಕಪ್ಪಾ...
ನನ್ನ ಪುಟ್ಟ ಕೈಗೆ..
ನೀ.... ಕೊಟ್ಟ... ತೋರು ಬೆರಳಿನದು...!!
( ಪ್ರಿಯ ಓದುಗರೆ...
ನನಗಂತೂ ಮೊದಲ ಪ್ರೇಮದ ಸಂಭ್ರಮ... ಸಡಗರ...!
ಹೆಸರೇ... ಬೇಕಿರದ ನನ್ನ ಕಥನಗಳು ಪುಸ್ತಕವಾಗುತ್ತಿವೆ.. ..
ಇದೇ ಬರುವ ನವೆಂಬರ್ ಹದಿನೈದಕ್ಕೆ..
ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ....
ಬಿಡುಗಡೆಯಾಗಲಿದೆ...
ಇದಕ್ಕೆ ಮಾರ್ಗದರ್ಶನ... ಸಹಾಯ, ಸಲಹೆ ಸೂಚನೆ ಕೊಟ್ಟು...
ಸಹಾಯ ಮಾಡಿ...
ಪ್ರೀತಿಯಿಂದ ಮುನ್ನುಡಿ ಬರೆದು ಕೊಟ್ಟವರು ನಮ್ಮ ಮೆಚ್ಚಿನ ಜಿ. ಎನ್. ಮೋಹನ್ ರವರು
ಬೆನ್ನುಡಿಯನ್ನು.. ಬ್ಲಾಗ್ ಲೋಕದ ಕಾಕಾ...
ನಮ್ಮೆಲ್ಲರ ಮೆಚ್ಚಿನ ಸುನಾಥ ಸರ್...
ಅಕ್ಕರೆಯಿಂದ ಬರೆದು ಕೊಟ್ಟು ಬೆನ್ನುತಟ್ಟಿದ್ದಾರೆ...
ನನ್ನ ವ್ಯವಹಾರದ ಕೆಲಸದ ಜೊತೆಗೆ...
ಪುಸ್ತಕ ಸಂಭ್ರಮದ ಖುಷಿ... ಒತ್ತಡ..
ಹೇಗೆ ನಿಭಾಯಿಸುತ್ತೇನೋ.. ಗೊತ್ತಿಲ್ಲ...
ನಿಮಗೆಲ್ಲ ಪ್ರತ್ಯೇಕವಾಗಿ ಕರೆಯುತ್ತೇನೆ...
ಬರುತ್ತೀರಲ್ಲ..!
ಖುಷಿಯಲ್ಲಿ.. ಸಂತೋಷದಲ್ಲಿ ಪಾಲ್ಗೊಳ್ಳುತ್ತೀರಲ್ಲ...?
ನೀವು ಅಲ್ಲಿ ಬಂದಾಗ ನಗಿಸಲು ಸ್ಪೆಷಲ್ ಗೆಸ್ಟ್ ಬರಲಿದ್ದಾರೆ...!
ಸ್ನೇಹಿತ ಶಿವುರವರ "ವೆಂಡರ್ ಕಣ್ಣು"..
ಗೆಳೆಯ ದಿವಾಕರನ ನಾಟಕಗಳು "ಉದ್ಧಾರ ಮತ್ತು ಸಂತೆ"
ನನ್ನ ಪುಸ್ತಕದ ಹೆಸರು...
" ಹೆಸರೇ.. ಬೇಡ..!!..."
ಈ ಹೆಸರು ಕೊಟ್ಟವರು ಯಾರು...?
ಹೇಗೆ ಬಂತು ಈ ಹೆಸರು..?
ನಿಮ್ಮನ್ನು ನಗಿಸಲು ಬರುವ ಸ್ಪೆಷಲ್ ಗೆಸ್ಟ್ ಯಾರು...?
ಇನ್ನು ನಾಲ್ಕಾರು ದಿನಗಳಲ್ಲಿ ಹೇಳುವೆ....
ನಿಮ್ಮ ಪ್ರೋತ್ಸಾಹಕ್ಕೆ ನನ್ನ ನಮನಗಳು...)
ಕೆಲವು ದಿನಗಳ ಹಿಂದೆ ಊರಿಗೆ ಹೋಗಿದ್ದೆ...

ಸಿರ್ಸಿಯಲ್ಲಿ ನನ್ನ ಸ್ನೇಹಿತರನ್ನು ಭೇಟಿಯಾಗ ಬೇಕಿತ್ತು...

"ಅಣ್ಣಾ... ಸಿರ್ಸಿಗೆ ಹೋಗಿ ಬರ್ತೇನೆ...
ಏನಾದ್ರೂ ಸಾಮಾನು ತರುವದು ಇದೆಯಾ..?"

ಪೇಟೆಗೆ ಹೋಗುವ ಮುನ್ನ ಹೀಗೆ ಕೇಳುವದು.. ವಾಡಿಕೆ...

"ತರಕಾರಿ ತರಬೇಕಿತ್ತು.. ಮಾರಾಯ ..
ನಿನ್ನ ನೋಡಿದರೆ....
ಸಾಮಾನಿನ ಬೆಲೆ ಜಾಸ್ತಿ ಹೇಳಿ ಹೆರೆದು ಬಿಡ್ತಾರೆ..
ಕಾನಸೂರಿನಲ್ಲಿ ಹೆಗಡೇರ ಅಂಗಡಿಯಲ್ಲಿ ಹೇಳಿಟ್ಟಿದ್ದೇನೆ...
ಆ ಸಾಮಾನು ತಗೊಂಡು ಬಾ..."

ನಾನು ಸರಿ ಎಂದೆ...

"ಹೋಗುವಾಗ ಕುಷ್ಟನೂ... ಬರ್ತಾನೆ..
ಅವನಿಗೆ ಆರೋಗ್ಯ ಸರಿ ಇಲ್ಲಂತೆ ಕರೆದು ಕೊಂಡು ಹೋಗು.."

ಕುಷ್ಟನಿಗೂ ಖುಷಿಯಾಗಿತ್ತು..!!

"ಸಣ್ಣ ಹೆಗಡೇರೆ.. ನಿಮ್ಮ ಸಂಗಡ ಕಾರಲ್ಲಿ ಹೋಗಬೇಕು ಅಂತ ಆಸೆ ಇತ್ರ..
ಇವತ್ತು ಪೂರ್ತಿ ಆಯ್ತು ನೋಡಿ... ."

ನಾನೂ ಕುಷ್ಟನೂ ಲೋಕಾಭಿರಾಮವಾಗಿ ಮಾತನಾಡುತ್ತ.. ಸಿರ್ಸಿ ಹತ್ತಿರ ಬಂದೆವು...

"ಕುಷ್ಟ ನಿನಗೆ ಯಾವ ಡಾಕ್ಟರ್ ಹತ್ತಿರ ಹೋಗಬೇಕು..? ಏನಾಗಿದೆ..?"

ಕುಷ್ಟ ಸ್ವಲ್ಪ ನಾಚಿಕೊಂಡ...

"ಪಕಾಸ್ ಹೆಗ್ಡೇರೆ... ನಂಗೆ ಸಾಮಾನು ಡಾಕ್ಟರ್ ಹತ್ರ ಹೋಗಬೇಕ್ರಾ..!"

ನನಗೆ ಅಶ್ಚರ್ಯವಾಯಿತು...!!

" ಸಾಮಾನಿನ ಡಾಕ್ಟರ್ರಾ.??.?
ಯಾರು ಅದು..?"

" ಅದೇರ್ರಾ...
ನಿನ್ನೆ ಬೆಟ್ಟದಿಂದ ಇಳಿಯುವಾಗ ಬಿದ್ದು..
ನನ್ನ ಸಾಮಾನಿಗೆ ಪೆಟ್ ಆಗಿದೆರ್ರಾ..
ನಟರಾಜ್ ರೋಡಿನಲ್ಲಿ ಇದ್ದರಲ್ರಾ.." ನಾಯಕ್ ಡಾಕ್ಟ್ರು."...
ಅವ್ರು ಸಾಮಾನು ಡಾಕ್ಟ್ರಂತೆ.. ಅವರ ಬಳಿ ಹೋಗುವಾ ಅಂತ..
ಒಳ್ಳೆ ಔಷಧ ಕೊಡ್ತಾರಂತೆ.."

ನನಗೆ ಈಗ ಅರ್ಥವಾಯಿತು...

ನಾನು ಅವನನ್ನು ಆಲ್ಲೇ ಬಿಟ್ಟು... ನನ್ನ ಸ್ನೇಹಿತ ಮೂರ್ತಿಯನ್ನು ನೋಡಲು ಹೊರಟೆ..
ಸಿರ್ಸಿ ಬಸ್ಟಾಂಡಿನ ಹತ್ತಿರ ಅವನ ಅಂಗಡಿ ಇದೆ...

ಕಾಲೇಜು ದಿನಗಳಲ್ಲಿ ಅವನ ಅಂಗಡಿ ನಮ್ಮ ಅಡ್ಡವಾಗಿತ್ತು....

ಮೂರ್ತಿಗೆ ತುಂಬಾ ಖುಷಿ ಆಯ್ತು...
ತುಂಬಾ ದಿನಗಳಾಗಿತ್ತು ಭೇಟಿಯಾಗದೆ..

"ಮೂರ್ತಿ.. ಚೆನ್ನಾಗಿದ್ದೀಯಾ...? ಹೇಗಿದೆ ಬಿಸಿನೆಸ್...?
ಹಬ್ಬ ಜೋರಾ..?"

"ಏನಿಲ್ಲ .. ಪ್ರಕಾಶು...... .
ನಾಳೆ ದೀಪಾವಳಿ.. ಆಯುಧ ಪೂಜೆ..
ಕೆಲಸಗಾರರು ಎಲ್ಲಾ ಸಾಮಾನು ತೊಳೆದು ಇಡ್ತಾ ಇದ್ದಾರೆ..
ನಾಳೆ ಎಲ್ಲಾ ಸಾಮಾನಿಗೂ ಪೂಜೆ ಮಾಡ್ಬೇಕಲ್ಲಾ..
ಅಲ್ಲಾ ಬೆಂಗಳೂರಲ್ಲಿ ಪೂಜೆ ಯಾವಾಗಾ..?
ಅಲ್ಲಿ ಸಾಮಾನುಗಳ ಪೂಜೆ ಎಲ್ಲಾ ಇದೆಯಾ..?"

ನಂಗೆ ನಗು ಬಂತಾದರೂ ತಡೇದು ಕೊಂಡೆ...

"ಬೆಂಗಳೂರಲ್ಲಿ ಆಯುಧ ಪೂಜೆ ನವರಾತ್ರಿಯಲ್ಲಿ ಮಾಡ್ತಾರೆ"

ಮೂರ್ತಿ ನಕ್ಕ...ನಂಗೂ ತಡೆದು ಕೊಳ್ಳಲಾಗಲಿಲ್ಲ..
ಇದೇ ಸಂದರ್ಭ ಅಂತ ಜೋರಾಗಿ ನಕ್ಕು ಬಿಟ್ಟೆ...

ಅಷ್ಟರಲ್ಲಿ ಮೂರ್ತಿ ಗೆಳೆಯ ಗುರು ಬಂದ... ಅವರದು ಹಾರ್ಡ್‍ವೇರ್ ಅಂಗಡಿ ಇದೆ...

"ಮಾರಾಯಾ.. ನಾಳೆ ಪೂಜೆಗೆ ಅಂತ ಸಾಮಾನು ತೊಳಿತಾ ಇದ್ದೆ..

ಎಲ್ಲ ಸಾಮಾನು ಯಾಕೆ ತೊಳಿಬೇಕು..?

ಶಾಸ್ತ್ರಕ್ಕೆ ಅಂತ ಒಂದೆರಡು ತೊಳೆದು ಪೂಜೆ ಮಾಡಿದ್ರೆ ಆಗಲ್ವಾ..?
ಹೀಗೆಲ್ಲ ತೊಳೆದರೆ ಕೆಲವು ಹಳೆ ಸಾಮಾನಿಗೆ ಜಂಗ್ ಹಿಡಿದು ಬಿಡ್ತದೆ..

ಹಳೆ ಸಾಮಾನಿಗೆಲ್ಲಾ ಯಾಕಪ್ಪಾ ಪೂಜೆ...?

ನನ್ನಪ್ಪನಿಗೆ ಹೇಳಿದ್ರೆ ಕೇಳ್ತಾಇಲ್ಲ.. ಮಾರಾಯಾ...
ವರ್ಷಕ್ಕೊಮ್ಮೆ ಆದ್ರೂ ಸಾಮಾನಿಗೆ ನೀರು ಹಾಕಿ ತೊಳಿಬೇಕು ಅಂತ ಹಠ ...
ಅವರ ಹತ್ರ ಎಂತಾ ಜಗಳ ಅಂತ ಈ ಕಡೆ ಬಂದೆ.."

ನನಗೆ ಅಲ್ಲಿ ನಿಲ್ಲಲಾಗಲಿಲ್ಲ...

ಕೆಲಸ ಎಲ್ಲ ಮುಗಿಸಿ ಕುಷ್ಟನನ್ನು ಕರೆದು ಕೊಂಡು ಕಾನಸೂರಿಗೆ ಹೊರಟೆ..

"ಏನಾಯ್ತು ಕುಷ್ಟ..? ಡಾಕ್ಟ್ರು ಏನು ಹೇಳಿದ್ರು..?"

"ಪಕಾಸ್ ಹೆಗ್ಡೇರೆ.. ಈ ಡಾಕ್ಟ್ರು ಸರಿ ಇಲ್ರ..
ಎಂತಾ .... ಮರ್ಯಾದಿ ಇಲ್ಲದ ಜನ ಮಾರಾಯ್ರೆ...?
ರಾಮ...ರಾಮಾ...!... ನಂಗೆ ನಾಚಿಕೆ .. ಮರ್ವಾದಿ, ಎಲ್ಲಾ ತೆಗೆದು ಬಿಟ್ರು...
ಅದೆಲ್ಲ ...ಹೇಳೂಕೆ ನಾಚ್ಕೇರ್ರಾ....!

ಡಾಕ್ಟ್ರ ಹತ್ರೆ ಮರ್ಯಾದಿ ಇಟ್ಕೋ ಬಾರ್ದು ಅಂತ ಉಪದೇಸ ಬೇರೆ ಕೊಟ್ರು..
ಈ ಔಷಧ ತಗೊ.., ಎರಡು ದಿನ ಬಿಟ್ಟು ಮತ್ತೆ ಬಾ ಅಂತ ಹೇಳಿದ್ರು.."

"ಹಾಗೆ ಮಾಡು ಎರಡು ದಿನ ಬಿಟ್ಟು ಮತ್ತೆ ಹೋಗಿ ಬಾ.."

" ಇಷ್ಟು .. ಮರ್ಯಾದಿ ಹೋಗಿದ್ದು ಸಾಕ್ರ...

ಪದೆ.. ಪದೆ ಮರ್ಯಾದಿ ತೆಗಿಸಿಕೊಳ್ಳೋಕೆ ನಾನೇನು ರಾಜಕೀಯದವ್ನಾ..?
ಲಂಚ ಕೇಳೋ.. ಆಫಿಸರ್ನಾ...?
ಕೈಲಿ ಆಗೂದಿಲ್ರ...!
ನನ್ನ ಮಗನ್ನ ಕಳಸ್ತೆ.. ಔಷಧಿ ತರ್ಲಿಕ್ಕೆ.."

"ಅವರು "ತಪಾಸಣೆ" ಮಾಡಿ ಔಷಧ ಕೊಡ ಬೇಕಾಗ್ತದೆ...
ಪೆಟ್ಟಾಗಿದ್ದು ನಿಂಗೆ..
ನೀನೇ ಹೋಗಬೇಕು ಮಾರಾಯಾ.."

"ನನ್ನ ಮಗ ಸಣ್ಣವ...ಸರಿ..
ನಮ್ ಪಕ್ಕದ ಮನೆ ನಾಣಿ ಕಳಸ್ತೆ...
ನಂಗೆ ಹೀಗ್ ಹೀಂಗೆ ಆಗ್ತದೆ ಅಂತ ಅವ ಡಾಕ್ಟ್ರ ಹತ್ರ ಹೇಳ್ತಾನೆ..
ಅಲ್ರಾ... ಕಾಮತ್ರು ನಂಗೆ ಮಂತ್ರಿಸಿ ಕೊಡ್ಬೇಕಾದ್ರೆ...
ನನ್ನ ಮಗನ್ನ ಕಳಸ್ತಿದ್ದೆ..
ಕಾಮತ್ರ್‍ ಗೆ ಆಯ್ತದೆ... ಡಾಕ್ಟ್ರಿಗೆ ಆಗೋದಿಲ್ವ..?
ಕಾಮತ್ರು ಎಷ್ಟು ದೊಡ್ಡ ಜನಾ...? ಏನು ಕಥೆ..?
ಕಾಮತ್ರ ಯೋಗ್ಯತೆ ಇದೆಯಾ ಇವರಿಗೆ...?
ಮಂತ್ರ ಹೇಳಿ ಗಂಡು ಮಗನ್ನ ಕೊಡ್ಸಿದವ್ರು..!!!
ಅವ್ರಿಗಿಂತ ದೊಡ್ಡವ್ನ... ಈ ಡಾಕ್ಟರ್ರು...?? "
" ಇಲ್ಲಪ್ಪಾ ನೀನೇ ಹೋಗ್ಬೇಕು..."

"ಉಪದೇಸ ... ಮಾಡಿದಂಗೆ ಅಲ್ಲ ಮರ್ವಾದಿ ಕಳ್ಕೊಳ್ಳದು..
ಮರ್ವಾದಿ ಕಳೊಂಡವ್ನಿಗೆ ಗೊತ್ತು..ಅದು ಏನು ಅಂತ...
ನಿಮಗೇನು ಗೊತ್ತು ನನ್ ಕಷ್ಟ...?
ಈ... ಡಾಕ್ಟ್ರು ಸ್ವಲ್ಪ ಮಳ್ಳು..ಮಾರಾಯ್ರೆ....

ನೆಗಿ ಆಡ್ತಾರ್ರೇ ಮಾರಾಯ್ರೆ..
ನನ್ನ ನೋಡಿ ಕಿಸಿ ಕಿಸಿ ನಗ್ತಾರೆ..."

"ನೋಡು... ಕುಷ್ಟ ..
ಕಡಿಮೆ ಆಗದೇ ಇದ್ರೆ ನೀನೇ... ಹೋಗಬೇಕು..
ಕೆಲವೊಂದು ನಿನಗೆ ಗೊತ್ತಾಗುದಿಲ್ಲ..
ನಾನು ಹೇಳಿದ್ದು ಕೇಳು..
ನಿನ್ನ ಪಕ್ಕದ ಮನೆ ಯಂಕನಿಗೆ ಏನಾಯ್ತು...?

ಅದೇ ನೋವಲ್ಲಿ ಕೊನೆಗೆ..ಸತ್ತು ಹೋದ..
ನಾಚ್ಕೆ ಮಾಡ್ಕೊಂಡು..!

ಬದುಕಿ ಉಳಿದರೆ ನಾಚ್ಕೆ, ಮರ್ಯಾದಿ...ಎಲ್ಲಾ ..!

ಇದಕ್ಕೆಲ್ಲ ಇದಕ್ಕೆಲ್ಲ ನಾಚಿಕೆ ಇಟ್ಗೋಬೇಡ....."

"ಆಯ್‍ತ್ರ.. ಹಾಂಗೇ ಮಾಡ್ತೆ.."
ಕಾನಸೂರು ಹೆಗಡೇರ ಅಂಗಡಿಗೆ ಬಂದೆವು...

ಅದು ಸುತ್ತ ಮುತ್ತಲಿನ ಹಳ್ಳಿಗರ ಅಡ್ಡ...

ಅಲ್ಲಿ ಕಲ್ಕಟ್ಟೆ ಗೋವಿಂದಣ್ಣ ಸಿಕ್ಕಿದ...
ಅವ ಹಳೆ ದೋಸ್ತ...

"ಅರೇ... ಪ್ರಕಾಶಾ... ಆರಾಮಾ..?
ಸಿರ್ಸಿಗೆ ಬಂದಿದ್ದಾ?"

" ಹೌದು ಮಾರಾಯಾ... ಏನು ವಿಶೇಷ..?"

"ಏನೂ ಇಲ್ಲ ಮಾರಾಯಾ..!
ನಿನ್ನೆ ಸಿರ್ಸಿಯಲ್ಲಿ ಒಂದು ಭಾನಗಡಿ ಘಟನೆ.. ಆಯ್ತು.."

"ಏನಾಯ್ತು...!!.?"

" ಬಸ್ಟಾಂಡಲ್ಲಿ ಎಲ್ಲಕಡೆ ಬರೆಸಿ ಇಟ್ಟಿದ್ದಾರೆ...

" ನಿಮ್ಮ ನಿಮ್ಮ ಸಾಮಾನುಗಳಿಗೆ ನೀವೇ ಜವಾಬ್ದಾರರು.."

" ಸಾಮಾನು ಕಳ್ಳರಿಂದ ಎಚ್ಚರಿಕೆಯಿಂದ ಇರಬೇಕು ಅಂತ..."

"ಅದು.. ನಿಜ ಏನಾಯ್ತು.!!.?"

" ಅಮ್ಮಚ್ಚಿ ಮಂಜಣ್ಣ ತನ್ನ ಸಾಮಾನು ...
ಅಲ್ಲೇ ಕಲ್ಲು ಬೇಂಚಿನ ಮೇಲಿಟ್ಟು ಒಳಗಡೆ ಹೋಟ್ಲಿಗೆ ಹೋಗಿದ್ನಂತೆ..

ಚಹ ಕುಡಿದು ಬರುವಷ್ಟರಲ್ಲಿ ಮಂಜಣ್ಣನ ಸಾಮಾನು ಮಾಯಾ..!!

ಕಳ್ಳರು ಅವನ ಸಾಮಾನು ಎತ್ತಿಕೊಂಡು ಹೋಗಿ ಬಿಟ್ಟಿದ್ರು..!!!."

ಗೋವಿಂದಣ್ಣ ಬಹಳ ಬೇಸರ ಪಟ್ಟುಕೊಂಡ...

" ಕಾಲ ಕೆಟ್ಟು ಹೋಯ್ತು ಪ್ರಕಾಶ...!!

ಈ ಕಳ್ಳ ಜನ ಎಂತಹ ಸಾಮಾನ್ನೂ ಬಿಡೋದಿಲ್ಲ.. ಮಾರಾಯಾ..."

ಅಷ್ಟರಲ್ಲಿ ಕುಷ್ಟ ಬಾಯಿ ಹಾಕಿದ...

" ಸಾಮಾನು ಕಳ್ರು ಎಲ್ಲ ಕಡೆ ಇರ್ತಾರ್ರ...
ನಮ್ಮ ಸಾಮಾನು ಬಗ್ಗೆ ನಾವು ಎಚ್ಚರಿಕೆಯಲ್ಲಿ ಇರಬೇಕ್ರ...

ನಂಗೆ ....ಇದು ಮಾತ್ರ ಅರ್ಥ ಆಗೂದಿಲ್ರಾ...!

ಅಲ್ಲಾ.. ಈ.. ಮಂಜಣ್ಣ...!!
ತಮ್ಮ ಸಾಮಾನು...ಯಾಕೆ.. ...ಹೊರಗೆ ಇಟ್ಟು ಹೋದ್ರು..?? !!...?"
(ಕುಷ್ಟನ ಕಥೆಯನ್ನು ಕಿರು ಚಿತ್ರ ಮಾಡಿದರೆ ಹೇಗೆ..?
ನಮ್ಮ ಪ್ರತಿಭಾನ್ವಿತ ಸ್ನೇಹಿತರಾದ ಹೇಮಂತ್ ಕೇಳುತ್ತಿದ್ದಾರೆ..
ಖುಷಿಯಾಗುತ್ತಿದೆ....

No comments: