Sunday, July 25, 2010

ನಗುವ ವಿಷಯ (ಸಂಗ್ರಹಗಳು )

ಸಂಗ್ರಹಗಳು
ಅನರ್ಥ ಕೊಶಗಳು
ಡಾಕ್ಟರ್ - ಯಮಧರ್ಮರಾಯನ ಏಜೆಂಟ್
ಜೈಲು - ಮಂತ್ರಿಗಳ ಬೇಸಿಕ್ ಟ್ರೈನಿಂಗ್
ಕಾಯಿಲೆ - ದೇಹವು ಆತ್ಮಕ್ಕೆ ಕಟ್ಟುವ ಕಂದಾಯ
ಸೂರ್ಯ - ಕತ್ತಲಾದಾಗ ಹೊರಬರದ ಹೇಡಿ
ರೆಪ್ಪೆ - ಕಣ್ಣಿನ ಮೇಲೆ ಇರುವ ಭೂತ
ಹಾಲು - ದ್ರವ ರೂಪದ ಹಸುವಿನ ಮಾಂಸ
ಹೋಟೆಲ್ - ಪರಸ್ಪರ ಎಂಜಲನ್ನು ಸಾರ್ವಜನಿಕರು ಹಂಚಿಕೊಳ್ಳುವ ಕ್ಷೇತ್ರ
ಫಾಲಿಡಾಲ್ - ಬೇಜಾರಾದಾಗ ಸಂತೊಷಕ್ಕೆ ತೆಗೆದುಕೊಳ್ಳುವ ಶುದ್ದ ಔಷದ
ಅನುಭವ - ಈಗ ಮಾಡುವ ತಪ್ಪುಗಳಿಗೆ ನಾಳೆಕೊಡುವ ಹೆಸರು
ಜಾಣತನ - ಮೋಸ ಮಾಡಿ ತಪ್ಪಿಸಿಕೊಳ್ಳುವ ಶಕ್ತಿ
ತಿರುಪೆ - ನಮ್ಮ ದೇಶದಲ್ಲಿ ಬಂಡವಾಳವಿಲ್ಲದ ಒಂದು ದೊಡ್ಡ ಕೈಗಾರಿಕೆ
ಕಳ್ಳ - ಅನ್ಯರ ಆಸ್ತಿಗೆ ಒಡೆಯ
ಅಗಸ - ಇತರರ ಬಟ್ಟೆಗಳನ್ನು ಚೆನ್ನಾಗಿ ಧರಿಸುವ ವ್ಯಕ್ತಿ..
ಪಕ್ಕದ್ ಮನೆ ಹುಡುಗಿ ಬಾರಮ್ಮ
ಈ ಹಾಡನ್ನು ಭೀಮ್ಸೇನ್ ಜೋಶಿ ಯವರ ಭಾಗ್ಯದ ಲಕ್ಶ್ಮಿ ಬಾರಮ್ಮಾ ಧಾಟಿಯಲ್ಲಿ ಹಾಡಿಕೊಳ್ಳಿ..................
ಪಕ್ಕದ್ ಮನೆ ಹುಡುಗಿ ಬಾರಮ್ಮ...
ನಮ್ಮಮ್ಮಾ ಇಲ್ಲಾ..
ಪಕ್ಕದ್ ಮನೆ ಹುಡುಗಿ ಬಾರಮ್ಮ... [ಪ]
ಅಕ್ಕ ಪಕ್ಕದ ಜನರನು ನೋಡುತ
ಹೆಜ್ಜೆಯ ಮೇಲೊಂದೆಜ್ಜೆಯ ನಿಕ್ಕುತಾ
ಶುಕ್ರವಾರದಿಯ ಚಿತ್ರಮಂಜರಿ
ಮರೆಯದೆ ನೀನು ನೋಡಲು ಬಾರೆ..
ಪಕ್ಕದ್ ಮನೆ ಹುಡುಗಿ ಬಾರಮ್ಮ [1]
ಇಂದಿನ ಪೇಪರ್ ಓದಲು ಬಾರೆ
ಹೆಪ್ಪಿಗೆ ಮೊಸರನು ಕೇಳಲು ಬಾರೆ
ಕರೆಂಟು ಹೋದ ಸಮಯದಿ ನೇನು                    

ನಾಚಿಕೆಯಾಗುತ್ತೆ..   

ಸುಂದರ ಹುಡುಗಿಯೊಬ್ಬಳು ಸಂತಾನ ಬಟ್ಟೆ ಅಂಗಡಿಗೆ ಬಂದಿದ್ದಳು.

ಆಕೆ: ನಂಗೊಂದು ಅಂಡರ್ವೀರ್ ತೋರಿಸಿ.

ಸಂತಾ (ನಾಚಿಕೆಯಿಂದ): ಈಗ ತುಂಬಾ ಜನ ಇದ್ದಾರೆ. ಪ್ಲೀಸ್.. ಮತ್ತೆ ಬನ್ನಿ...

ಸ್ನೇಹದ ಪರಾಕಾಷ್ಠೆ   

ಸಂತಾ ಆತ್ಮಹತ್ಯೆ ಮಾಡಿಕೊಳ್ಳುವವನಿದ್ದ. ಅವನ ಸ್ನೇಹಿತ ಕಾರಣ ಕೇಳಿದಾಗ- ನನ್ನ ಹೆಂಡತಿ ನನ್ನ ಆತ್ಮೀಯ ಮಿತ್ರನ ಜತೆ ಓಡಿ ಹೋಗಿದ್ದಾಳೆ. ಗೆಳೆಯ ಇಲ್ಲದೆ ಬದುಕೋದು ನನಗೆ ಸಾಧ್ಯವಿಲ್ಲ..
ಮದುವೆಯಾಗಿರೋದು ಗೊತ್ತು ತಾನೇ?   
ಹೆಂಡತಿ: ರೀ.. ನಿಮಗೆ ಈಗ ಮದ್ವೆಯಾಗಿರೋದು ಗೊತ್ತು ತಾನೇ.. ಮತ್ಯಾಕೆ ಹುಡುಗೀರ ಕಡೆ ನೋಡೋದು?
ಸಂತಾ: ಅಂದ್ರೆ ನಿನ್ನ ಪ್ರಕಾರ ನಾನು ಡಯಟ್ ಮಾಡೋವಾಗ ಮೆನು ಕೂಡ ನೋಡ್ಬಾರ್ದು ಅಂತಾನಾ..?
ಇದು ಸಾಮ್ಯತೆ   
ಸಂತಾ: ನಂಗೆ ಮತ್ತು ಬಿಲ್ ಗೇಟ್ಸ್ಗಿರುವ ಸಾಮ್ಯತೆ ಏನು ಗೊತ್ತಾ?
ಬಂತಾ: ಇಲ್ಲಪ್ಪ.. ಏನು?
ಸಂತಾ: ಸರಿ.. ಹೇಳ್ತೇನೆ ಕೇಳು.. ಅವನು ನನ್ನ ಮನೆಗೆ ಬಂದಿಲ್ಲ ಮತ್ತು ನಾನೂ ಅವನ ಮನೆಗೆ ಹೋಗಿಲ್ಲ..
ಸೆಕ್ಸ್ ಅಂದ್ರೆ...   
ಮಗ: ಸೆಕ್ಸ್ ಅಂದ್ರೇನಪ್ಪ?
ಪ್ರಶ್ನೆ ಕೇಳಿ ಸಂತಾ ಉದ್ವೇಗಗೊಂಡರೂ ನಂತರ ಎಲ್ಲವನ್ನೂ ಸ್ಪಷ್ಟವಾಗಿ ವಿವರಿಸಿದ.
ಮಗ: ಶಾಲೆ ಪ್ರವೇಶ ಪತ್ರದಲ್ಲಿರುವ ಅಷ್ಟು ಚಿಕ್ಕ ಜಾಗದಲ್ಲಿ ನೀನು ಹೇಳಿದ್ದನ್ನೆಲ್ಲ ಹೇಗಪ್ಪಾ ತುಂಬಿಸೋದು?
ಹಳೆಯ ಕೋಟು
ದೊಡ್ಡ ಪರೀಕ್ಷೆ ಬಂದಿತು. ಜಾಣ ವಿದ್ಯಾರ್ಥಿ ಎನಿಸಿಕೊಂಡಿದ್ದ ತಿಂಮ ಸಕಲ ಸಿದ್ಧತೆ ಮಾಡಿಕೊಂಡ.
ಬೆಳಿಗ್ಗೆ ಎಂಟಕ್ಕೆ ಸ್ನಾನ, ಊಟ ಮಾಡಿ ಶಾಲೆಗೆ ಹೊರಟ.
``ಅಮ್ಮಾ..."
``ಏನೋ ತಿಂಮಾ?"
``ನನ್ನ ಕೋಟು ಎಲ್ಲಿ?"
ದಿಗಿಲು ಬಿದ್ದು ಕೇಳಿದ ತಾಯಿಯನ್ನು.
``ಅಗಸನಿಗೆ ಹಾಕಿದೆ, ತುಂಬ ಕೊಳೆಯಾಗಿದ್ದಿತು"
ಗಳಗಳ ಅಳುತ್ತ ಕುಳಿತ ತಿಂಮ.
``ಬೇರೆ ಇನ್ನೊಂದು ಇದೆಯಲ್ಲವೊ? ಆ ಕೋಟು ಹಾಕಿಕೊಂಡು ಹೋಗು, ಅಳಬೇಕೆ? ಆ ಹೊಲಸು ಕೋಟೇ ಆಗಬೇಕೇ ನಿನಗೆ?"
ಅದರ ಒಳಗಡೆ ಉತ್ತರಗಳನ್ನು ಬರೆದಿಟ್ಟುಕೊಂಡಿದ್ದ ತಿಂಮ.
ಎರಡು ಅರ್ಧಗಳಾದರೆ ಒಂದು
ತಿಂಮನಿಗೆ ಪರೀಕ್ಷೆ ಸಮೀಪಿಸಿದಂತೆಲ್ಲ ಅವನ ತಂದೆಗೆ ಯೋಚನೆ ಹೆಚ್ಚಿತು. ದುಗುಡ, ಕಳವಳಕ್ಕೀಡಾಯಿತು ಅವರ ಮನಸ್ಸು.
ಸುಖವಾಗಿ ಮೂರು ಸಲ ಉಣ್ಣುತ್ತಿದ್ದ, ಉಳಿದ ಸಮಯವೆಲ್ಲ ನಿದ್ರೆ ಮಾಡುತ್ತಿದ್ದ ತಿಂಮ.
ಆ ಈ ಮಾಸ್ತರುಗಳನ್ನೆಲ್ಲ ಕಂಡು ಸಲಹೆ ಪಡೆದರು ತಿಂಮನ ತಂದೆ. ಪುಸ್ತಕದ ಅಂಗಡಿಗಳನ್ನೆಲ್ಲ ಹೊಕ್ಕು ಬಂದರು.
``ತಿಂಮಾ!"
``ಏನಪ್ಪಾ?"
``ತೆಗೆದುಕೋ, ಈ ಗೈಡ್ ತಂದಿದ್ದೇನೆ."
``ಒಳ್ಳೆಯದೇನಪ್ಪಾ ಇದು?"
``ನಿನ್ನ ಕ್ಲಾಸಿನ ಟೀಚರೇ ಹೇಳಿದರಯ್ಯ ಇದನ್ನು ಓದಿಬಿಡು. ಅರ್ಧ ಪಾಸಾದಂತೆಯೇ."
ಗೈಡನ್ನು ತೆಗೆದು ನೋಡುತ್ತ ಮೆಲ್ಲನೆ ಗೊಣಗಿಕೊಂಡ ತಿಂಮ.
``ಇನ್ನೊಂದು ಪ್ರತಿಯನ್ನು ತಂದುಬಿಡಬೇಕಿತ್ತು. ಪೂರ್ತಿ ಪಾಸು..."
ನನ್ನ ತಪ್ಪಿಲ್ಲ
ಅನೇಕರಿಗಿರುವಂತೆ ಲೈಬ್ರರಿಯಿಂದ ಪುಸ್ತಕಗಳನ್ನು ತೆಗೆದುಕೊಂಡು ಮನೆಗೆ ಒಯ್ಯುವ ಅಭ್ಯಾಸ ತಿಂಮನಿಗೆ. ಕೇವಲ ಕೆಲವರಿಗೆ ಮಾತ್ರವೇ ಇರುವಂತೆ ಮರಳಿ ತಂದುಕೊಡುವ ಅಭ್ಯಾಸವೂ ಇದ್ದಿತು ಇವನಲ್ಲಿ.
ಓದುವ ಅಭ್ಯಾಸ? ಆ ಮಾತು ಈಗ ಬೇಡ.
ಲೈಬ್ರರಿಯ ಮಾಸ್ತರಿಗೆ ತಿಂಮ ತಂದುಕೊಟ್ಟ, ತಾನು ಕೊಂಡೊಯ್ದಿದ್ದ ಪುಸ್ತಕವನ್ನು.
``ಓದಿದೇನಯ್ಯಾ"
``ಓದಿದೆ ಸಾರ್."
ಮಾಮೂಲು ಪ್ರಶ್ನೆ, ಮಾಮೂಲು ಉತ್ತರ.
``ಹೇಗಿದೆ?"
``ಚೆನ್ನಾಗಿದೆ ಸಾರ್."
ಎರಡೆರಡು ಬಾರಿ ಪುಸ್ತಕವನ್ನು ಹಿಂದು-ಮುಂದು ನೋಡಿ ಮಾಸ್ತರರು ನುಡಿದರು:
``ಬಹು ಕ್ಲಿಷ್ಟವಾಗಿದೆ."
``ಇಲ್ಲ ಸಾರ್, ನೀವು ಕೊಡುವಾಗಲೇ ಹೀಗಿತ್ತು ಸಾರ್."
ಅಂತೂ ಸರಿಯಾಗಿದೆ
ತಿಂಮನ ತಾಯಿ ಮಹಾ ಗಠಾಣಿ.
ಒಂದು ದಿನ ಅಂಗಡಿಯ ಸೆಟ್ಟಿಯೊಡನೆ ಜಗಳಕ್ಕೇ ಬಂದಳು.
``ಏನಪ್ಪಾ ಸೆಟ್ಟಿ? ಒಂದು ವೀಸೆ ಹುಣಸೆಹಣ್ಣು ಕೊಡೆಂದು ತಿಂಮನನ್ನು ಕಳಿಸಿದರೆ ಎಷ್ಟು ಕೊಟ್ಟೆ ನೀನು?"
``ಏಕ್ರಮ್ಮಾ, ಒಂದು ವೀಸೆ ಸರಿಯಾಗಿ ಕಳಿಸಿದೆನಲ್ಲ."
``ವೀಸೆ ಎಲ್ಲಿ ಬರಬೇಕು? ನಾನು ಮನೇಲಿ ತೂಕ ಮಾಡಿದೆ, ಮೂರು ಸೇರು ಮಾತ್ರವೇ ಇತ್ತಲ್ಲ."
ಕಕ್ಕಾಬಿಕ್ಕಿಯಾದ ಸೆಟ್ಟಿ ಕೇಳಿದ-
``ಅಹುದಾ? ತಿಂಮನನ್ನು ತೂಕ ಮಾಡಿ ನೋಡಿದಿರೇನಮ್ಮಾ?"
ಉಪಯೋಗ
(ಪ್ರಶ್ನೆಯೊಂದಕ್ಕೆ ತಿಂಮನ ಉತ್ತರ ಹೀಗಿತ್ತು-)
ಹಸುವಿನ ಚರ್ಮದ ಒಂದು ಮುಖ್ಯ ಉಪಯೋಗ-ಅದರ ದೇಹದಲ್ಲಿನ ಎಮಿಕೆ, ಮಾಂಸ ಮುಂತಾದವು ಹೊರಗೆ ಬೀಳದಂತೆ ಅದು ಭದ್ರವಾಗಿ ತಡೆದು ಹಿಡಿಯುತ್ತದೆ.
ಹೆಂಡತಿಗೆ ಕಾಯಿಲೆ
ತಿಂಮನ ಹೆಂಡತಿಯನ್ನು ಡಾಕ್ಟರು ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು.
``ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ."
``ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆಮಧ್ಯೆ ನಿಲ್ಲಿಸಿಬಿಡುತ್ತಾಳೆ."
``ಏಕೆ?"
``ಉಸಿರಾಡಲಿಕ್ಕೆ."
ತಿಳಿದರೆ ಗತಿ?
ತಿಂಮ ಊರಿಗೆ ಬಂದುದೇ ತಡ, ಮನೆಯಾಕೆ ಶುರುಮಾಡಿಬಿಟ್ಟಳು:
``ಪಕ್ಕದ ಮನೆಯ ಶಾರದಮ್ಮನಿಗೆ ಆಕೆಯ ಗಂಡ ಏನೇನು ಮಾಡಿಸಿದ್ದಾರೆ ನೋಡಿ..."
``ಏನು ಮಾಡಿಸಿದ್ದಾರಂತೆ?"
ತಿಂಮ ಕೇಳಿದ.
``ವಜ್ರದ ಓಲೆ ತಂದಿದ್ದಾರೆ. ರೇಡಿಯೋ,ಬಳೆ, ಇನ್ನೂ ಏನೇನೋ ಚಿನ್ನದ ಒಡವೇನೆಲ್ಲ ತಂದುಕೊಟ್ಟಿದ್ದಾರೆ."
``ಹೂ, ಏನು ಈಗ?"
``ನೀವೇನು ತಂದುಕೊಟ್ಟಿರಿ?"
ಗಾಬರಿಯಿಂದ ಕೇಳಿದ ತಿಂಮ-
``ಯಾರು ನಾನೇ? ನಾಳೆ ತಿಳಿದರೆ ಸುಮ್ಮನಿರುತ್ತಾನೆಯೇ ಆ ಶಾರದಮ್ಮನ ಗಂಡ?
ಜೇಬು-ತಲೆ
ಬೆಂಗಳೂರು ನಗರವನ್ನು ನೋಡಲು ಹೊಸದಾಗಿ ಬಂದ ತಿಂಮ. ಅಲ್ಲಿ-ಇಲ್ಲಿ ನೋಡುತ್ತ ಊರೆಲ್ಲ ಸುತ್ತಿದ. ಕೈಲಿದ್ದ ಕಾಸು ಒಳ್ಳೆಯ ವೇಗದಲ್ಲಿ ಓಡುತ್ತಿತ್ತು.
ಕತ್ತಲಾದ ಮೇಲೆ ಒಬ್ಬನೇ ಬರುತ್ತಿದ್ದ ತಿಂಮನನ್ನು ಮೂವರು ಗೂಂಡಾಗಳು ಹಿಡಿದರು.
``ಜೇಬಿನಲ್ಲಿರುವ ಹಣವನ್ನೆಲ್ಲಾ ಸುರಿದು ಮುಂದೆ ಹೋಗು" ಎಂದರು.
``ಕೊಡುವುದಿಲ್ಲ."
ತಕರಾರು ಹೂಡಿದ ತಿಂಮ.
``ನಿನ್ನ ತಲೆ ತೆಗೆಯುತ್ತೇವೆ."
``ಅಗತ್ಯವಾಗಿ ತೆಗೆಯಿರಿ. ತಲೆ ಇಲ್ಲದೆ ವರ್ಷಗಟ್ಟಲೆ ಇರಬಹುದು ನಿಮ್ಮ ಬೆಂಗಳೂರಿನಲ್ಲಿ. ಹಣವಿಲ್ಲದೆ ಕಾಲು ಗಂಟೆಯೂ ಸಾಧ್ಯವಿಲ್ಲ."
ಹೆಚ್ಚು ಭಾರವಾದವು
ತಿಂಮ ಸಪತ್ನೀಕನಾಗಿ ಪ್ರಯಾಣ ಹೊರಟ ಒಂದು ಸಾರಿ. ದಾರಿಯಲ್ಲಿದ್ದ ನದಿಯೊಂದನ್ನು ದಾಟಬೇಕಾಯಿತು. ಇನ್ನಿತರ ಪ್ರಯಾಣಿಕರುಗಳೊಂದಿಗೆ ತಿಂಮ ದಂಪತಿಗಳು ಹರಿಗೋಲಿನಲ್ಲಿ ಏರಿ ಕುಳಿತರು.
ಮಧ್ಯ ನದಿ, ಹರಿಗೋಲು ಹೊಯ್ದಾಡಿ ಮಗುಚಿಕೊಳ್ಳುವಂತಾಯಿತು. ದಿಗ್ಭ ಮೆಯಿಂದ ಕಿರುಚಿದರು. ಗಾಬರಿಯಿಂದ ಅಂಬಿಗ ಕೂಗಿಕೊಂಡ.
``ಹೆಚ್ಚು ಭಾರವಾದುದನ್ನು ನದಿಯಲ್ಲಿ ಬಿಸುಟಿಬಿಡಿ. ಹೂ ಬೇಗ ಬೇಗ!"
ಅವರಿವರು ಗಂಟು ಮೂಟೆಗಳನ್ನು ನದಿಗೆ ಎಸೆದರು.
ತಿಂಮ?
ನಗೆಹನಿಗಳು - ೦೧
ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಹೇಳಿದ “ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ ಜತೆಗೆ ವಿವೇಚನೆ ಮುಖ್ಯ”
ಮಗ “ಪ್ರಾಮಾಣಿಕತೆ ಎಂದರೆ?”
ಅಪ್ಪ “ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು”
ಮಗ “ಹಾಗಾದರೆ ವಿವೇಚನೆ ಎಂದರೇನು?”
ಅಪ್ಪ “ಮಾತು ಕೊಡದೇ ಇರೋದೆ”
ತಿಮ್ಮನ ಹೆಂಡತಿಯನ್ನು ಡಾಕ್ಟರ್ ಪರೀಕ್ಷೆ ಮಾಡಿ ತಲೆಯಲ್ಲಾಡಿಸಿದರು.
“ಏನೂ ಆಗಿಲ್ಲವಯ್ಯಾ, ಚೆನ್ನಾಗಿಯೇ ಇದ್ದಾರೆ”
“ಇಲ್ಲ ಡಾಕ್ಟರೇ, ನೀವು ಸರಿಯಾಗಿ ನೋಡಲಿಲ್ಲ. ಮಾತನಾಡುವಾಗ ಮಧ್ಯೆ ಮಧ್ಯೆ ನಿಲ್ಲಿಸಿಬಿಡುತ್ತಾಳೆ”
“ಏತಕ್ಕೆ?”
“ಉಸಿರಾಡಲಿಕ್ಕೆ”
ಗಂಡ ಹೆಂಡತಿ ಜಗಳವಾಡುತ್ತಿದ್ದುದನ್ನು ಅವನು ಸ್ನೇಹಿತ ಅಕಸ್ಮಾತ್ ನೋಡಿಬಿಟ್ಟ. ಮಾರನೆ ದಿನ ಆ ಮಿತ್ರ ಜಗಳವಾಡುತ್ತಿದ್ದ ಸ್ನೇಹಿತನನ್ನು ಕೇಳಿದ, “ನಿನ್ನೆ ಹೆಂಡತಿಯೊಡನೆ ಜಗಳವಾಡುತ್ತಿದ್ದೆಯಲ್ಲ, ಕೊನೆಗೆ ಏನಾಯಿತು?”
“ಅವಳು ನನ್ನೆದುರು ಮೊಣಕಾಲೂರಿದಳು”
“ಅದು ಹೇಗೆ ಸಾಧ್ಯವಾಯಿತೋ ಮಹರಾಯ?”
“ನಾನು ಮಂಚದ ಕೆಳಗೆ ನುಸುಳಿದ್ದೆ”
ಕೋರ್ಟಿನಲ್ಲಿ ಪಾಟೀಸವಾಲು ನಡೆದಿತ್ತು. “ನೀವು ಯಾರು?” ಕಟಕಟೆಯಲ್ಲಿ ನಿಂತ ಸಾಕ್ಷಿಯನ್ನು ಪ್ರಶ್ನೆಸಿದ ವಕೀಲ. ಸ್ವರ್ಣಾಭರಣಗಳ ವ್ಯಾಪರ ಮಾಡುತ್ತಿದ್ದ ವ್ಯಾಪರಿ ಒಂದು ಕ್ಷಣವೂ ತಡಮಾಡದೆ ಉತ್ತರಿಸಿದ “ನಿಮಗೆ ಗೊತ್ತೇ ಇರುವ ಹಾಗೆ ನಾನೊಬ್ಬ ಸದ್ಗೃಹಸ್ಥ”. “ಸರಿಯಗಿಯೇ ಹೇಳಿದಿರಿ. ಅದಕ್ಕಿಂತ ಮೊದಲು ಏನಾಗಿದ್ದಿರಿ?” ವಕೀಲರಿಂದ ಕೂಡಲೇ ಬಂತು ಎರಡನೆ ಪ್ರಶ್ನೆ.
ಶೀಲಾ “ರೀ ಒಂದು ಸೋಪು ಕೊಡಿ.”
ತಿಮ್ಮ “ಮೇಡಂ ಈ ಸೋಪು ತಗೊಳ್ಳಿ. ಬಟ್ಟೆ ಬೆಳ್ಳಗಾಗುತ್ತೆ.”
ಶೀಲಾ “ಹಾಗಾದ್ರೆ ಅದು ಬೇಡಾ. ನಮ್ಮವರ ಕಪ್ಪುಕೋಟು ಬೆಳ್ಳಗಾದ್ರೆ ಕೋರ್ಟಿಗೆ ಹೋಗುವುದು ಹೇಗೆ?”

ಶೀಲಾ ಪ್ಯಾರಾಚೂಟ್ ಕಂಪನಿಯೊಂದರ ಸೇಲ್ಸ್ ಗರ್ಲ್. ಒಮ್ಮೆ ಗಿರಾಕಿಯೊಬ್ಬರೊಡನೆ ನಡೆದ ಮಾತುಕತೆ.
ಶೀಲಾ “ನೋಡಿ ನಮ್ಮ ಕಂಪನಿಯ ಪ್ಯಾರಾಚೂಟ್ ಚೆನ್ನ್ನಾಗಿ ಬರುತ್ತೆ.”
ಗಿರಾಕಿ “ಹೌದಾ, ಮೇಡಂ ನಾವು ವಿಮಾನದಿಂದ ಧುಮುಕುವಾಗ ನಿಮ್ಮ ಪ್ಯಾರಚೂಟಿನ ಗುಂಡಿ ಅದುಮಿದರೂ ಬಿಚ್ಚಿಕೊಳ್ಳದಿದ್ದರೆ ಏನು ಮಾಡುವುದು?”
ಶೀಲಾ “ತತ್ಕ್ಷಣ ಬನ್ನಿ, ಬದಲಾಯಿಸಿ ಕೊಡ್ತೀವಿ.”

ರಾಜರು ಹೋದರು. ರಾಜಧಾನಿ ಎಲ್ಲಿಗೆ ಹೋಗಬೇಕು? ದಿಲ್ಲಿಗೆ ಬಂದ ತಿಂಮ ಒಂದು ಸಲ. ಕರ್ನಾಟಕ ಸಂಘದಲ್ಲಿ ತಿಂಮನ ಭಾಷಣ. ಮುಗಿಯಿತು ಕಾರ್ಯಕ್ರಮ. ತಿಂಮ ಓಡಿ ಬಂದು ಗೋಡೆ ಮುಟ್ಟಿ ಮರಳಿ ಹೋಗುವ ಆಸಾಮಿಯೇ? ಕೆಂಪುಕೋಟೆ ನೋಡಿದ. ತಾಜಮಹಲಿಗೂ ಬಂದ. ಕ್ಷೇತ್ರ ಪುರೋಹಿತರ ಜಾತಿಯ ಗೈಡ್ಗಳಿಗೆ ತಾಜಮಹಲ್ ಬಳಿ ಕೊರತೆಯಿಲ್ಲ. ಆ ಮಹೋನ್ನತ ಕಲೆಯ ಬಗ್ಗೆ ದೀರ್ಘವಾದ ಉಪನ್ಯಾಸವನ್ನೇ ಮಾಡಿದ ತಿಂಮನ ದರ್ಶಕ. ಏನೂ ತಿಳಿಯಲಿಲ್ಲ ಕಲಾತೀತನಾದ ತಿಂಮನಿಗೆ. ಪಾಪ! “ಒಂದು ಮಾತನ್ನು ಮಾತ್ರ ಗಮನಿಸಬೇಕು ಸ್ವಾಮಿ”
“ಯಾವುದಯ್ಯಾ ಅದು?” ತಿಂಮ ಕೇಳಿದ.
“ಸಹಸ್ರಾರು ವರ್ಷಗಳಾದವು ಈ ತಾಜಮಹಲನ್ನು ಕಟ್ಟಿ, ಅಲ್ಲವೇ? ಒಂದು ಚಿಕ್ಕ ರಿಪೇರಿ ಇಲ್ಲ . ಸುಣ್ಣಬಣ್ಣವಿಲ್ಲ.”
“ತಿಳಿಯಿತು ಬಿಡು” ಎಂದ ತಿಂಮ “ನಾನಿರುವ ಮನೆಯವನೇ ಇದರ ಮಾಲಿಕನಿರಬೇಕು.”

Friday, July 31, 2009

ಖಾರ ಪೊಂಗಲ್ ಅಥವಾ ಹುಗ್ಗಿ

ಬೆಂಗಳೂರಿನ ಭಾರತಿ ಚಂದ್ರಶೇಖರ್.
ಖಾರ ಪೊಂಗಲ್ ಅಥವಾ ಹುಗ್ಗಿಯನ್ನು ಸಂಕ್ರಾಂತಿ ಸುಗ್ಗಿಯ ವೇಳೆಯಲ್ಲಿಯೇ ಮಾಡಬೇಕೆಂದೇನಿಲ್ಲ. ಅಕ್ಕಿ, ಬೇಳೆ ಮಿಶ್ರಣದ ಸತ್ವಯುತ ಆಹಾರವನ್ನು ಯಾವಾಗ ಬೇಕಾದರೂ ತಯಾರಿಸಿ ಮೆಲ್ಲಬಹುದು. ಬೆಂಗಳೂರಿನ ಭಾರತಿ ಚಂದ್ರಶೇಖರ್ ಅವರು ಸರಳ ವಿಧಾನವನ್ನು ಇಲ್ಲಿ ತಿಳಿಸಿಕೊಟ್ಟಿದ್ದಾರೆ. ಇಂದೇ ತಯಾರಿಸಿ, ತಿಂದು ತೇಗಿ, ಮಸ್ತ್ ಮಜಾ ಮಾಡಿ.
ಬೇಕಾಗುವ ಸಾಮಗ್ರಿಗಳು
ಅಕ್ಕಿ 1 ಕಪ್
ಹೆಸರು ಬೇಳೆ 3/4 ಕಪ್
ಎಣ್ಣೆ 6 ಚಮಚ
ಜೀರಿಗೆ 1 ಚಮಚ
ಮೆಣಸು 1 ಚಮಚ
ಕರಿಬೇವು ಸ್ವಲ್ಪ
ಹಸಿ ಮೆಣಸಿನಕಾಯಿ 1
ಅರಿಶಿನ ಪುಡಿ ಸ್ವಲ್ಪ
ನಿಂಬೆ ರಸ 2 ಚಮಚ
ತುಪ್ಪ 4 ಚಮಚ
ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಕುಕ್ಕರ್ ಗೆ ಎಣ್ಣೆ ಹಾಕಿ, ಸಾಸಿವೆ, ಕರಿಬೇವು, ಜೀರಿಗೆ, ಮೆಣಸು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಹೆಸರುಬೇಳೆ, ತೊಳೆದುಕೊಂಡ ಅಕ್ಕಿ ಹಾಕಿ ಹುರಿಯಿರಿ. 4 ಲೋಟ ನೀರನ್ನು ಹಾಕಿ. ರುಚಿಗೆ ಉಪ್ಪು, ಅರಿಶಿನ, ನಿಂಬೆ ರಸ ಹಾಕಿ ಮುಚ್ಚಿ. ಒಂದು ವಿಷಲ್ ಬಂದ ಮೇಲೆ ಉರಿ ಸಣ್ಣ ಮಾಡಿ 5 ನಿಮಿಷದ ನಂತರ ಆಫ್ ಮಾಡಿ.
ಕುಕ್ಕರ್ ತಣ್ಣಗಾದ ಮೇಲೆ ತುಪ್ಪ, ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದು ಸರಳವಾದ ಮತ್ತು ಬೇಗ ಆಗುವ ಅಡುಗೆ. ಇದರ ಜೊತೆ ಕಾಯಿ ಚಟ್ನಿ ಅಥವಾ ಮೊಸರು ಬಜ್ಜಿಯಿದ್ದರೆ ತುಂಬಾ ಚೆನ್ನಾಗಿರುತ್ತದೆ.

ದಸರೆಗಾಗಿ ಹೋಳಿಗೆ ಸಾರು

ಹೋಳಿಗೆ ಸಾರಿಲ್ಲದೆ ಹಬ್ಬದ ಅಡುಗೆ ಪರಿಪೂರ್ಣವಾಗುವುದಿಲ್ಲ. ಹಬ್ಬ ಹರಿದಿನಗಳಲ್ಲಿ ಬಹಳಷ್ಟು ಕನ್ನಡಿಗರ ಮನೆಯಲ್ಲಿ ಹೋಳಿಗೆ ಸಾರು ಘಂ ಎನ್ನುತ್ತಿರುತ್ತದೆ. ಮನೆಯಲ್ಲಿ ಹೋಳಿಗೆ ಮಾಡ ಬೇಕಾದರೆ ಹೋಳಿಗೆ ಸಾರು ಮಾಡುವುದು ಅಷ್ಟೇನು ತ್ರಾಸವಲ್ಲ. ಹೋಳಿಗೆಗೂ ಹೋಳಿಗೆ ಸಾರಿಗೂ ಅವಿನಾಭಾವ ಸಂಬಂಧ.
ಹೂರಣಕ್ಕೆ ಇವಿಷ್ಟನ್ನು ಹೊಂದಿಸಿಕೊಳ್ಳಿ
ಬೆಲ್ಲ: 2 ಕಪ್ಪು
ತೆಂಗಿನ ಕಾಯಿ: 2 ಟೇಬಲ್ ಚಮಚ
ಏಲಕ್ಕಿ: ' ಟೀ ಚಮಚ
ನೀರು: 4 ಕಪ್ಪು
ಅರಿಶಿನ ಪುಡಿ: 1 ಚಿಟಿಕೆ
ಹೋಳಿಗೆ ಸಾರಿಗೆ
ಹೂರಣ: ಕಿತ್ತಲೆ ಗಾತ್ರದ್ದು
ಸಾಂಬಾರು ಪುಡಿ: 2 ಟೇಬಲ್ ಚಮಚ
ಬೇಳೆಯಿಂದ ಬಸಿದ ನೀರು
ಕಿವುಚಿದ ಹುಣಸೆಹಣ್ಣಿನ ರಸ: 2 ಟೇಬಲ್ ಚಮಚ
ಉಪ್ಪು: ರುಚಿಗೆ ತಕ್ಕಷ್ಟು
ಒಗ್ಗರಣೆಗೆಎಣ್ಣೆ, ಸಾಸಿವೆ, ಒಣಮೆಣಸಿನ ಕಾಯಿ, ಕರಿಬೇವು ಮತ್ತು ಇಂಗು. 1 ಟೇಬಲ್ ಚಮಚ ಎಣ್ಣೆಗೆ ಒಂದೊಂದಾಗಿ ಈ ಸಾಮಗ್ರಿಗಳನ್ನು ಹಾಕಿ ಒಗ್ಗ್ಗರಣೆ ತಯಾರಿಸಿಕೊಳ್ಳಿ.
ಹೂರಣ ಮಾಡಲು
4 ಕಪ್ಪು ನೀರನ್ನು ಒಂದು ಪಾತ್ರೆಗೆ ಹಾಕಿ ಕುದಿಸಿ. ನೀರು ಕುದಿಯುತ್ತ್ತಿದ್ದಂತೆ ಒಂದು ಚಿಟಿಕೆ ಅರಿಶಿನ ಪುಡಿ ಹಾಗೂ ತೊಗರಿ ಬೇಳೆಯನ್ನು ಹಾಕಿ. ಸಣ್ಣ ಉರಿಯಲ್ಲಿ ಬೇಳೆಯನ್ನು ಬೇಯಿಸಿಕೊಳ್ಳಿ. ನೀರು ಇಂಗದಂತೆ ನೋಡಿಕೊಳ್ಳಿ. ಬೇಕಿದ್ದರೆ ಸ್ವಲ್ಪ ನೀರನ್ನು ಆಗಾಗ ಸೇರಿಸುತ್ತಿರಿ. ಬೇಳೆ ಬೆಂದ ನಂತರ ನೀರನ್ನ್ನು ಬಸಿದುಕೊಳ್ಳಿ. ಸಾರು ಮಾಡಲು ಈ ಬಸಿದ ನೀರು ಬೇಕು.ಈಗ ಬೇಳೆಗೆ ಬೆಲ್ಲ ಹಾಕಿ ಸಣ್ಣ ಉರಿಯಲ್ಲಿ ಬೆಲ್ಲ ಕರಗುವವರೆಗೂ ಕಲಕುತ್ತಾ ಬೇಯಿಸಿ. ಒಲೆಯ ಮೇಲಿಂದ ಕೆಳಗಿಳಿಸಿ ಏಲಕ್ಕಿ ಪುಡಿಯನ್ನು ಸೇರಿಸಿ. ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಈಗ ತೆಂಗಿನಕಾಯಿಯನ್ನು ಹಾಕಿ ಮಿಕ್ಸಿ ಅಥವಾ ಗ್ರೈಂಡರ್ ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬಿಕೊಳ್ಳಲು ನೀರನ್ನು ಬಳಸ ಬೇಡಿ. ಅದರಲ್ಲಿನ ನೀರೆ ಸಾಕಾಗುತ್ತದೆ. ಬೇಳೆಯನ್ನು ಒಂದೇ ಸಲ ರುಬ್ಬದೆ 2 ಅಥವಾ 3 ಭಾಗಗಳಾಗಿ ಮಾಡಿಕೊಂಡು ರುಬ್ಬಿಕೊಳ್ಳಿ, ಆಗ ರುಬ್ಬುವ ಕೆಲಸ ಸುಲಭವಾಗುತ್ತದೆ. ಈಗ ಹೂರಣ ಸಿದ್ಧವಾಗುತ್ತದೆ. ಹೂರಣದಿಂದ ಸಣ್ಣಸಣ್ಣ ಗಾತ್ರದ ಉಂಡೆಗಳನ್ನು ಮಾಡಿಕೊಂಡು ಹೂರಣ ಹೋಳಿಗೆಗಳನ್ನು ತಯಾರಿಸಬಹುದು.
ಹೋಳಿಗೆ ಸಾರು ಮಾಡಲು
ಕಿತ್ತಳೆ ಹಣ್ಣಿನ ಗಾತ್ರದ ಹೂರಣವನ್ನು ಬಸಿದ ನೀರಿನೊಂದಿಗೆ ಬೆರಸಿ, ಹುಣಸೆ ಹಣ್ಣಿನ ರಸವನ್ನು ಹಾಕಿ, ಸಾಂಬಾರು ಪುಡಿ, ರುಚಿಗೆ ತಕ್ಕಷ್ಟು ಉಪ್ಪುನ್ನು ಹಾಕಿ ಚೆನ್ನಾಗಿ ಕಲಸಿ. ಈಗ ಮಿಶ್ರಣವನ್ನು ಒಲೆಯ ಮೇಲೆ ಕುದಿಯಲು ಬಿಡಿ.ರುಚಿಗಾಗಿ ಸಿದ್ಧವಾಗಿಟ್ಟುಕೊಂಡ ಒಗ್ಗರಣೆಯನ್ನು ಹಾಕಿ. ಸಾರು ತಣ್ಣಗಾಗಲು ಬಿಟ್ಟು ಸ್ವಲ್ಪ ಸಮಯದ ನಂತರ ಬಿಸಿ ಅನ್ನದೊಂದಿಗೆ ಬಡಿಸಿ.
ವಿಶೇಷ ಸೂಚನೆ: ತಾಜಾ ಸಾರಿಗಿಂತಲೂ ಒಂದು ದಿನ ಹಳತಾದ ಸಾರಿನ ರುಚಿ ಹೆಚ್ಚು!

ಪಲ್ಯ

ಮೆಂತ್ಯೆ ಸೊಪ್ಪು-ಹೆಸರು ಬೇಳೆ ಪಲ್ಯ "ವಿಜಯ ಸತೀಶ್‌"
ಚಪಾತಿ ಅಥವಾ ರೊಟ್ಟಿ ಮಾಡಿದಾಗ ತಪ್ಪದೇ ಈ ಪಲ್ಯ ಮಾಡೋದು ಮರೀಬೇಡಿ... ಜೊತೆಗೆ ಸ್ವಲ್ಪ ನಿಂಬೆಹಣ್ಣು ಹಿಂಡಿದ ಹಸಿ ಈರುಳ್ಳಿ...ಗೋಸಿಬೇಕಾಗುವ ಪದಾರ್ಥಗಳು :
ಮೆಂತ್ಯೆ ಸೊಪ್ಪು - 1 ಕಟ್ಟು (ಎಲೆ ಬಿಡಿಸಿ ತೊಳೆದು ಹೆಚ್ಚಿದ್ದು)
ಹೆಸರು ಬೆಳೆ - 1/2 ಬಟ್ಟಲು(ಹುರಿದಿದ್ದು)
ಈರುಳ್ಳಿ - 1
ಕೆಂಪು ಮೆಣಸಿನ ಪುಡಿ - 1/2 ಚಹಾ ಚಮಚ
ಅರಿಶಿಣ ಪುಡಿ - 1 ಚಿಟಿಕೆ
ಗರಂ ಮಸಾಲ - 1/2 ಚಹಾ ಚಮಚ
ಎಣ್ಣೆ - 3 ಚಹಾ ಚಮಚ
ಸಾಸಿವೆ, ಜೀರಿಗೆ(ಒಗ್ಗರಣೆಗೆ)
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ :

ಪಾತ್ರೆಗೆ ಎಣ್ಣೆ ಹಾಕಿಕೊಂಡು ಓಲೆಯ ಮೇಲಿಡಿ. ಎಣ್ಣೆ ಕಾದ ಬಳಿಕ ಸಾಸಿವೆ ಮತ್ತು ಜೀರಿಗೆ ಹಾಕಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ.

ಈರುಳ್ಳಿ ಬೆಂದ ನಂತರ ಕೆಂಪು ಖಾರದ ಪುಡಿ, ಅರಿಶಿಣ ಪುಡಿ, ಗರಂ ಮಸಾಲ, ಉಪ್ಪು ಹಾಕಿ, ಕೈಯಾಡಿಸಿ. ಈಗ ಹೆಚ್ಚಿದ ಮೆಂತ್ಯ ಸೊಪ್ಪು ಹಾಗೂ ಹುರಿದ ಹೆಸರು ಬೇಳೆ, 1/2 ಲೋಟ ನೀರನ್ನು ಹಾಕಿ, ಪಾತ್ರೆಯ ಮುಚ್ಚಳ ಮುಚ್ಚಿ. ಹೆಸರು ಬೇಳೆ ಬೇಯುವವರೆಗೆ ಕುದಿಸಿ.
ಈ ಪಲ್ಯವನ್ನು ಚಪಾತಿ, ಜೋಳದ ರೊಟ್ಟಿಯ ಜತೆ ತಿಂದರೆ ಚೆನ್ನಾಗಿರುತ್ತೆ.
ಕೋಸಿನ ಪಲ್ಯಸುನಂದಾ ಅರುಣ್‌ಕುಮಾರ್‌, ಯುಎಸ್‌ಎ
ಚಪಾತಿಗೆ ಪಲ್ಯ ಹಾಕಿ ರೋಲ್‌ ಮಾಡಿ ಕೊಟ್ಟರೆ ಮಕ್ಕಳು ಇಷ್ಟಪಡುತ್ತಾರೆ. ಬ್ರೆಡ್‌ಗೆ ಪಲ್ಯ ಹಾಕಿ ಟೋಸ್ಟ್‌ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ. ಬೇಕಾಗುವ ಪದಾರ್ಥಗಳು :

ಕೋಸು(ಮಧ್ಯಮ ಪ್ರಮಾಣದಲ್ಲಿ ಹೆಚ್ಚಿರುವುದು)
5 ಹಸಿಮೆಣಸಿನಕಾಯಿ(ಹೆಚ್ಚಿದ್ದು)
ಅಡುಗೆ ಎಣ್ಣೆ
ಸಾಸಿವೆ
ಕಡಲೇಬೇಳೆ
ಕರಿಬೇವು
ಅರಿಶಿನ
ಉಪ್ಪು
ಕೋತಂಬರಿ

ಮಾಡುವ ವಿಧಾನ :
ಬಾಣಲೆಗೆ ಪ್ರಮಾಣ ಬದ್ಧವಾಗಿ ಅಡುಗೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಅದರಲ್ಲಿ ಕಡಲೇಬೇಳೆ, ಹೆಚ್ಚಿದ ಹಸಿಮೆಣಸಿನಕಾಯಿ, ಕರಿಬೇವು ಹಾಗೂ ಕೋಸನ್ನು ಹಾಕಿ. ನೀರು ಹಾಕದೆ ಹಾಗೇ ಹುರಿಯುತ್ತಿರಿ. ಅದು ಬೆಂದ ಮೇಲೆ ಅರಿಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್‌ ಮಾಡಿ. ಕೊನೆಗೆ ಕೋತಂಬರಿ ಸೊಪ್ಪು ಹಾಕಿ. ಬೇಕಾದರೆ ಕಾಯಿತುರಿ ಹಾಕಿಕೊಳ್ಳಬಹುದು. ಈಗ ಕೋಸು ಪಲ್ಯ ರೆಡಿ.ಹೀಗೇ ಕ್ಯಾರೆಟ್‌, ಗೆಡ್ಡೆಕೋಸು, ಬೀಟ್‌ರೂಟ್‌, ಸೀಮೆ ಬದನೇಕಾಯಿ ತುರಿದು ಮಾಡಬಹುದು. ಬೀನ್ಸ್‌, ಹೀರೇಕಾಯಿ, ಇವುಗಳನ್ನು ಸಣ್ಣಗೆ ಹೆಚ್ಚಿ ಮಾಡಬೇಕು(ಇದಕ್ಕೆ ಸ್ವಲ್ಪ ನೀರು ಹಾಕಬೇಕು). ಈರುಳ್ಳಿ ಹಾಗೂ ಕಾಯಿತುರಿ ಹಾಕಿದರೆ ತುಂಬಾ ಚೆನ್ನಾಗಿರುತ್ತದೆ. ಚಪಾತಿಗೆ ಪಲ್ಯ ಹಾಕಿ ರೋಲ್‌ ಮಾಡಿ ಕೊಟ್ಟರೆ ಮಕ್ಕಳು ಇಷ್ಟಪಡುತ್ತಾರೆ. ಬ್ರೆಡ್‌ಗೆ ಪಲ್ಯ ಹಾಕಿ ಟೋಸ್ಟ್‌ ಮಾಡಿದರೆ ಇನ್ನೂ ಚೆನ್ನಾಗಿರುತ್ತದೆ.
ಆಹಾ, ಹಾಗಲ! ಎರಡು ಪಲ್ಯ, ಒಂದು ಚಟ್ನಿ!ಜಯಂತಿ ಎಚ್‌ ವಿ; ಬೆಂಗಳೂರು
ಹೊಸ ವರ್ಷವನ್ನು ಹಾಗಲಕಾಯಿಯ ಕಹಿರುಚಿಯಿಂದ ಆರಂಭಿಸೋಣ. ಯಾಕೆಂದರೆ ಇದರಲ್ಲಿ ಆರೋಗ್ಯ ಭಾಗ್ಯದ ಹಲವು ಸೂತ್ರಗಳು ಚಟ್ನಿ-ಪಲ್ಯದ ರೂಪದಲ್ಲಿ ಸಾಕಾರಗೊಳ್ಳುತ್ತವೆ.
ಹಾಗಲಕಾಯಿ ಒಂದು ಒಳ್ಳೆಯ ತರಕಾರಿ. ಕಹಿಯಿರುವುದರಿಂದ ಔಷಧೀಯ ಗುಣವೂ ಅದರಲ್ಲಿದೆ. ಹಾಗಲ ರುಚಿಯಲ್ಲಿ ಕಹಿಯಾದರೂ, ದೇಹಾರೋಗ್ಯಕ್ಕೆ ಸಿಹಿ. ಹಾಗಲದಂಥ ತರಕಾರಿಯಿಲ್ಲ ಎನ್ನುತ್ತಾರೆ ಅನುಭವಸ್ಥರು.
ತುಳುನಾಡಿನಲ್ಲಂತೂ ‘ಕಂಚಾಲ್‌ ಇತ್ತ್‌ಂಡಾ ಎಂಚಾಲಾ ಉಣೋಳಿ...’ (ಹಾಗಲಕಾಯಿ ಇದ್ದರೆ ಹೇಗೂ ಉಣ್ಣಬಹುದು) ಎಂಬ ನಾಣ್ಣುಡಿಯೇ ಇದೆ. ಹಾಗಲ ತಿನ್ನುವುದರಿಂದ ಹೊಟ್ಟೆಯಲ್ಲಿನ ಹುಳುಗಳು ಸಾಯುತ್ತವೆ ಎನ್ನುತ್ತಾಳೆ ಅಜ್ಜಿ . ಹಾಗಲ ಮಧುಮೇಹಕ್ಕೆ, ಅರ್ಥಾತ್‌ ಸಕ್ಕರೆ ಕಾಯಿಲೆಗೆ ರಾಮಬಾಣ ಎನ್ನುತ್ತಾರೆ ಅಳಲೇಕಾಯಿ ಪಂಡಿತಧಿರು. ಒಟ್ಟಾರೆ ಸಾರಾಂಶ ಇಷ್ಟೇ, ಹಾಗಲ ಎನ್ನುವುದು ತರಕಾರಿಯಷ್ಟೇ ಅಲ್ಲ , ಔಷಧಿಯೂ ಹೌದು. ಹಾಗಾಗಿ ರುಚಿಯಷ್ಟೇ ಅಲ್ಲ , ಆರೋಗ್ಯಭಾಗ್ಯವೂ ಹಾಗಲದಿಂದ ಲಭ್ಯ ಎಂದಾಯಿತು.
ಇಂತಿಪ್ಪ ಹಾಗಲಕಾಯಿಯಿಂದ ರುಚಿಯಾದ ಖಾದ್ಯಗಳ ಮಾಡುವುದು ಹೇಗೆ ? ಬನ್ನಿ, ಹಾಗಲಕಾಯಿಯ ಎರಡು ನಮೂನೆ ಪಲ್ಯಗಳನ್ನು ಹಾಗೂ ಚಟ್ನಿಯನ್ನು ಮಾಡೋಣ. ಮಾಡಿ ಸವಿಯೋಣ. ಸವಿದು ಆರೋಗ್ಯವಂತರಾಗೋಣ.
ಹಾಗಲಕಾಯಿ ಪಲ್ಯ (ವಿಧಾನ 1)
ಬೇಕಾಗುವ ಪದಾರ್ಥ:
ಹಾಗಲಕಾಯಿ - 1/4 ಕೆಜಿ
ಕೊತ್ತಂಬರಿ - 3 ಟೇಬಲ್‌ಸ್ಪೂನ್‌
ಕೆಂಪು ಮೆಣಸು - 8 ಅಥವಾ 10
ತುರಿದ ತೆಂಗಿನಕಾಯಿ - 3/4 ಕಪ್‌
ಹುಣಿಸೆಹಣ್ಣು - 1/2 ನಿಂಬೆಗಾತ್ರದ್ದು
ಬೆಲ್ಲ - 100 ಗ್ರಾಮ್‌ನಷ್ಟು
ಉಪ್ಪು - ರುಚಿಗೆ ತಕ್ಕಷ್ಟು

ಮಾಡುವ ವಿಧಾನ : ಹಾಗಲಕಾಯಿಯನ್ನು ಸಣ್ಣಕ್ಕೆ ಹೆಚ್ಚಿಕೊಂಡು, ಬಾಣಲೆಯಲ್ಲಿ ಎಣ್ಣೆ ಇಟ್ಟು, ಸಾಸಿವೆ ಕಡಲೆಬೇಳೆ, ಉದ್ದಿನ ಬೇಳೆ ಒಗ್ಗರಣೆ ಹಾಕಿ, ಸಾಸಿವೆ ಸಿಡಿದ ನಂತರ ಹಾಗಲಕಾಯಿಯನ್ನು ಸೇರಿಸಿ, ಉಪ್ಪು ಹಾಕಿ ಚೆನ್ನಾಗಿ ಬೇಯಿಸಬೇಕು. ಕೊತ್ತಂಬರಿ, ಮೆಣಸು, ಕಾಯಿತುರಿ, ಬೆಲ್ಲ , ಹುಣಿಸೆ - ಇಷ್ಟನ್ನು ಮಿಕ್ಸಿಯಲ್ಲಿ ಅರೆದು, ಬೆಂದ ಹಾಗಲಕಾಯಿಗೆ ಹಾಕಿ ಇನ್ನೂ ಸ್ವಲ್ಪಹೊತ್ತು ಚೆನ್ನಾಗಿ ಕುದಿಸಬೇಕು.
ಘಂ ಎನ್ನುವ ಹಾಗೂ ಆರೋಗ್ಯಕರ ಹಾಗಲ ಪಲ್ಯ ಸಿದ್ಧ .

ಹಾಗಲಕಾಯಿ ಪಲ್ಯ : ವಿಧಾನ -2
ಬೇಕಾಗುವ ಪದಾರ್ಥ:
ಹಾಗಲಕಾಯಿ - 1/4 ಕೆಜಿ
ಹಸಿರು ಮೆಣಸು (ಕಾಯಿ) - 4 ಅಥವಾ 5
ಈರುಳ್ಳಿ 1 (ಮಧ್ಯಮ ಗಾತ್ರ)
ನಿಂಬೆ - 1 ಹೋಳು
ಕಾಯಿತುರಿ - 3-4 ಚಮಚ

ಉಪ್ಪು - ರುಚಿಗೆ ತಕ್ಕಷ್ಟು .
ಮಾಡುವ ವಿಧಾನ : ಮೊದಲು ಕಡಲೆಬೇಲೆ-ಉದ್ದಿನಬೇಳೆ-ಸಾಸಿವೆ ಒಗ್ಗರಣೆ ಹಾಕಿ. ಸಾಸಿವೆ ಸಿಡಿದ ನಂತರ ಹಸಿಮೆಣಸಿನ ಹೋಳುಗಳನ್ನು ಸೇರಿಸಿ ಆಮೆಲೆ ಈರುಳ್ಳಿ (ಸಣ್ಣಗೆ ಹೆಚ್ಚಿಟ್ಟದ್ದು) ಹಾಕಿ. ಈರುಳ್ಳಿ ಸ್ವಲ್ಪ ಬಾಡಿದ ನಂತರ ಹಾಗಲಕಾಯಿ ಹಾಕಿ. ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಬೇಕು. ಬೆಂದ ನಂತರ ತೆಂಗಿನಕಾಯಿ ಉದುರಿಸಿ ನಿಂಬೆರಸ ಸೇರಿಸಿ ಕಲಸಿ. ಇದನ್ನು ಅನ್ನಕ್ಕೆ ಹಾಕಿ ಕಲಸಿಕೊಂಡು ತಿನ್ನಲಿಕ್ಕೆ ಸಕತ್ತಾಗಿರುತ್ತದೆ! ಹಾಗಲಕಾಯಿ ಚಟ್ನಿಬೇಕಾಗುವ ಪದಾರ್ಥ:

ಹಾಗಲಕಾಯಿ - 1/4 ಕೆಜಿ
ಕಡಲೆ ಬೇಳೆ - 2 ಟೇಬಲ್‌ಸ್ಪೂನ್‌
ಉದ್ದಿನಬೇಳೆ - 2 ಟೇಬಲ್‌ಸ್ಪೂನ್‌
ಕೆಂಪು ಮೆಣಸು - 8 ಅಥವಾ 10
ಮಾಡುವ ವಿಧಾನ : ಕಡಲೆ ಬೇಳೆ, ಉದ್ದಿನಬೇಳೆ, ಕೆಂಪುಮೆಣಸನ್ನು ಜತೆಯಾಗಿ ಹುರಿದುಕೊಂಡು, ಹುಣಸೆಹಣ್ಣು , ಬೆಲ್ಲ , ಉಪ್ಪು, ಮತ್ತು ಹಾಗಲಕಾಯಿ (ಪ್ರತ್ಯೇಕವಾಗಿ ಹುರಿದದ್ದು) ಹಾಕಿ ಮಿಕ್ಸಿಯಲ್ಲಿ ಅರೆದರೆ ಚಟ್ನಿ ರೆಡಿ! ಅನ್ನಕ್ಕಾದರೂ ಸೈ, ಚಪಾತಿ-ರೊಟ್ಟಿಗಾದರೂ ಸರಿ.
ಹಾಗಲದ ಪದಾರ್ಥಗಳನ್ನು ತಿನ್ನಿ ; ಆರೋಗ್ಯವಂತರಾಗಿರಿ.
ಕೋಸಿನ ಪಲ್ಯ’ ಹೀಗೆ ಮಾಡಿದ್ರೆ ಹೇಗೆ?ಸಾಮಾನ್ಯವಾಗಿ ಎಲ್ಲರೂ ಕೋಸು ಪಲ್ಯ ಮಾಡ್ತಾರೆ. ಆದರೆ ಪ್ರಿಯಂವದಾ ಥರ ಮಾಡಕ್ಕೆ ನಿಮಗೆ ಬರತ್ತಾ? ಕಲಿತುಕೊಳ್ಳಿ.ಪ್ರಿಯಂವದಾ ಅಗತ್ಯ ಪದಾರ್ಥಗಳು :

2 ಕಪ್‌ ಸಣ್ಣಗೆ ಹಚ್ಚಿದ ಕೋಸು
1 ಟೊಮಾಟೊ
1/2 ಕಪ್‌ ಬಟಾಣಿ
2 ದೊಡ್ಡ ಮೆಣಸಿನಕಾಯಿ
1/2 ಚಮಚ ಜೀರಿಗೆ ಪುಡಿ
1/2 ಚಮಚ ಕಾರದ ಪುಡಿ
1/4 ಚಮಚ ಧನಿಯ ಪುಡಿ
1/2 ಚಮಚ ಗರಂ ಮಸಾಲ
1/4 ಚಮಚ ಅರಿಶಿನದ ಪುಡಿ
1/2 ಚಮಚ ಸಕ್ಕರೆ (ಬೇಕಿದ್ದರೆ)
ಕಾಯಿತುರಿ (ಬೇಕಿದ್ದರೆ)
ಸ್ವಲ್ಪ ಕರಿಬೇವು,
ಕೊತ್ತಂಬರಿ ಸೊಪ್ಪು ,
ಚಿಟಿಕೆ ಹಿಂಗು,
ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ಕ್ರಮ : ಬಾಣಲೆಯಲ್ಲಿ ಎರಡು ಚಮಚ ಎಣ್ಣೆ ಹಾಕಿ. ಅದು ಕಾದನಂತರ ಸಾಸಿವೆ, ಜೀರಿಗೆಯ ಒಗ್ಗರಣೆ ಹಾಕಿ. ಅದಕ್ಕೆ ಹಿಂಗು, ಕರಿಬೇವು, ಅರಿಶಿನ ಬೆರೆಸಿ. ನಂತರ ದೊಡ್ಡ ಮೆಣಸಿನಕಾಯಿ, ಬಟಾಣಿ ಹಾಕಿ ಸ್ವಲ್ಪ ಕಲಕಿ. ಆಮೇಲೆ ಹಚ್ಚಿದ ಕೋಸನ್ನು ಹಾಕಿ ನೀರು ಚಿಮುಕಿಸಿ ಚೆನ್ನಾಗಿ ಬಾಡಿಸಿ. ಎರಡು ನಿಮಿಷ ಮುಚ್ಚಳ ಮುಚ್ಚಿಡಿ.ಕೋಸು ಅರ್ಧ ಬೆಂದ ಮೇಲೆ ಮಸಾಲೆ, ಉಪ್ಪು, ಟೊಮಾಟೋ ಬೆರೆಸಬೇಕು. ನಂತರ ಕಡಿಮೆ ಉರಿಯಲ್ಲಿ ಬೇಯಿಸಿ. ಬಡಿಸುವ ಮೊದಲು ಕೊತ್ತಂಬರಿ ಸೊಪ್ಪು, ಒಂದು ಚಮಚ ತೆಂಗಿನತುರಿ, ಸಕ್ಕರೆ (ಬೇಕಿದ್ದಲ್ಲಿ) ಬೆರೆಸಿ. ಸಿದ್ಧವಾದ ಕೋಸಿನ ಬಲ್ಯವನ್ನು ತಟ್ಟೆಗೆ ಬಡಿಸಿಕೊಂಡು ರುಚಿ ನೋಡಿ.
ನಮ್ಮ ಟಿಪ್ಸ್‌ : ತೊಗರಿಬೇಳೆಯ ಡಬ್ಬಿಯಲ್ಲಿ 15 ಇಪ್ಪತ್ತು ಲವಂಗಗಳನ್ನು ಒಂದು ಸಣ್ಣ ಬಟ್ಟೆಯಲ್ಲಿ ಕಟ್ಟಿಡಿ. ಹೀಗೆ ಮಾಡಿದರೆ ಲವಂಗದ ವಾಸನೆಗೆ ಹುಳಗಳು ಪರಾರಿಯಾಗುತ್ತವೆ.

ಆಡುಗೆ ಅರಮನೆಯಲ್ಲಿ ಅರಳಿದ ಅನಾನಸ್ ರೈಸ್

ಆರ್.ಸವಿತಾ, ಬೆಳಗಾವಿ
ಪುದೀನಾ ರೈಸ್, ಟೊಮೆಟೊ ರೈಸ್, ವೆಜಿಟಬಲ್ ರೈಸ್ ಎಲ್ಲಾ ಹಳೆಯದಾದವು. ಹೊಸರುಚಿ ಯಾವುದೂ ಇಲ್ವಾ? ಅಂಥ ಕೇಳುವವರಿಗೆ ಇಲ್ಲಿದೆ ಅನಾನಸ್ ರೈಸ್. ಬೆಳಗಿನ, ಸಂಜೆಯ ಉಪಾಹಾರವಾಗಿ ಸವಿಯಬಹುದು. ಅನಾನಸ್ ಜೂಸ್ ಮಾಡುವುದಕ್ಕಿಂತಲೂ ಸುಲಭವಾಗಿ ಇದನ್ನು ತಯಾರಿಸಿಕೊಳ್ಳಬಹುದು. ಹಾಗಿದ್ದರೆ ತಡವೇಕೆ?

ಬೇಕಾದ ಸಾಮಾಗ್ರಿಗಳು:

ಅಕ್ಕಿ : 1 ಬಟ್ಟಲು
ಅನಾನಸ್ ಹಣ್ಣಿನ ಚೂರು ; 1 ಬಟ್ಟಲು
ಸಕ್ಕರೆ: ಮುಕ್ಕಾಲು ಬಟ್ಟಲು
ದ್ರಾಕ್ಷಿ , ಗೋಡಂಬಿ: ರುಚಿಗೆ ತಕ್ಕಷ್ಟು
ತುಪ್ಪ : 3 ಚಮಚ
ಚೆರ್ರಿ ಹಣ್ಣು : 5-6
ಕೇಸರಿ ಎಸಳು : 4
ಏಲಕ್ಕಿ : 2

ಮಾಡುವ ವಿಧಾನ:
ಮೊದಲು ಉದುರಾಗಿ ಅನ್ನ ಮಾಡಿಕೊಳ್ಳಿ. ಅನಾನಸ್ ಚೂರುಗಳಿಗೆ ಒಂದು ಚಮಚ ತುಪ್ಪ ಹಾಕಿ ಹುರಿದುಕೊಂಡು, ಸ್ವಲ್ಪ ನೀರು ಚಿಮುಕಿಸಿ ಮೆತ್ತಗಾಗಲು ಬಿಡಿ. ಅನಂತರ ಸಕ್ಕರೆ ಹಾಕಿ ಕರಗುವವರೆಗೂ ಬಿಸಿ ಮಾಡಿ ಅನ್ನ ಸೇರಿಸಿ.ಅದಕ್ಕೆ ತುಪ್ಪ ಹಾಕಿ, ನೀರಿನಲ್ಲಿ ನೆನೆಸಿದ ಕೇಸರಿ ಎಸಳನ್ನು ಸೇರಿಸಿ ಬಿಸಿ ಮಾಡಿ ಇಳಿಸಿ. ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ ಬೆರಸಿ. ಚೆರ್ರಿ ಹಣ್ಣಿನಿಂದ ಅಲಂಕರಿಸಿ. ಸುವಾಸನೆಯ ಅನಾನಸ್ ರೈಸ್ ಸವಿಯಲು ಸಿದ್ಧ.

ಏನೇನೊ ಅನ್ನಕ್ಕಿಂತ ತೆಂಗಿನಕಾಯಿ ಅನ್ನವೇ ಲೇಸುಲಾವಣ್ಯ ಶಿವರಾಂ, ದಾವಣಗೆರೆ
ಇದನ್ನು ಮಾಡುವುದು ತುಂಬಾ ಸುಲಭ. ಬೇಕಾಗುವ ಪದಾರ್ಥಗಳಿಗೆ ತಿಣುಕಾಡಬೇಕಾಗಿಲ್ಲ. ಸಂಜೆ ಇಲ್ಲ ಬೆಳಗಿನ ಉಪಹಾರಕ್ಕೆ ಕ್ಷಣ ಮಾತ್ರದಲ್ಲಿ ತಯಾರಿಸಿಕೊಳ್ಳಬಹುದು. ಚಿತ್ರಾನ್ನ, ಆ ಅನ್ನ, ಈ ಅನ್ನ ತಿಂದು ಬೇಸರವಾಗಿದ್ದರೆ ಇದನ್ನೊಮ್ಮೆ ಪ್ರಯತ್ನಿಸಿ ನಿಮ್ಮ ಪಾಕ ಪ್ರಾವೀಣ್ಯವನ್ನು ಪ್ರದರ್ಶಿಸಿ.
ಅನ್ನ ಮಾಡುವ ಕೆಳಗಿನ ಪದಾರ್ಥಗಳ ಹೊಂದಿಸಿಕೊಳ್ಳಿ :ಹಸಿ ತೆಂಗಿನ ತುರಿ : 1 ಲೋಟ ಅಕ್ಕಿ : 1 ಲೋಟ ತುಪ್ಪ : 2 ಚಮಚ ಸಣ್ಣಗೆ ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪು : 1 ಚಮಚ ಕರಿಬೇವು : ಒಗ್ಗರಣೆಗೆ ಆಗುವಷ್ಟು ಉಪ್ಪು : ರುಚಿಗೆ ತಕ್ಕಷ್ಟು ಸಾಸಿವೆ : ಅರ್ಧ ಚಮಚ ಉದ್ದಿನ ಬೇಳೆ : 1 ಚಮಚ ಕಡಲೆ ಬೇಳೆ : 1 ಚಮಚ ಒಣ ಮೆಣಸಿನ ಕಾಯಿ : 4 ಸಣ್ಣಗೆ ಹೆಚ್ಚಿಕೊಂಡ ಹಸಿ ಮೆಣಸಿನ ಕಾಯಿ : 2 ಮುರಿದ ಗೋಡಂಬಿ : 1 ಚಮಚ
ಮಾಡುವ ವಿಧಾನ :
ಮೊದಲು ಹುಡಿಹುಡಿಯಾದ ಅನ್ನಕ್ಕೆ ತುಪ್ಪ ಹಾಗೂ ಉಪ್ಪನ್ನು ಬೆರಸಿ ಸ್ವಲ್ಪ ತಣ್ಣಗಾಗಲು ಬಿಡಿ. ಈಗ ಅಗಲವಾದ ಪಾತ್ರೆಯಲ್ಲಿ ಎಣ್ಣೆಯನ್ನು ಹಾಕಿ. ಎಣ್ಣೆ ಕಾಯುತ್ತದ್ದಂತೆ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಒಣ ಮೆಣಸಿನ ಕಾಯಿ, ಹಸಿ ಮೆಣಸಿನ ಕಾಯಿ, ಗೋಡಂಬಿಯನ್ನು ಹಾಕಿ ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯ ಹಾಗೆ ಬಿಡಿ.
ಆಮೇಲೆ ತೆಂಗಿನಕಾಯಿ ತುರಿಯನ್ನು ಬೆರೆಸಿ ಒಂದೆರಡು ನಿಮಿಷ ಹುರಿಯಿರಿ. ಈ ಮಿಶ್ರಣವನ್ನು ಅನ್ನಕ್ಕೆ ಬೆರೆಸಿ ಚೆನ್ನಾಗಿ ತಿರುವಿ. ಇದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಮತ್ತು ಕರಿಬೇವಿನ ಸೊಪ್ಪನ್ನು ಹಾಕಿ. ಅಷ್ಟೆ ನಿಮ್ಮಿಷ್ಟದ ತೆಂಗಿನ ಕಾಯಿ ಅನ್ನ ಕ್ಷಣದಲ್ಲಿ ತಯಾರಾಗುತ್ತದೆ.

ಹೂಕೋಸು ಮತ್ತು ಹಸಿ ಬಟಾಣಿ ಬಾತ್

ಸುಲೋಚನಾ, ಬೆಂಗಳೂರು
ಅದೇ ಉಪ್ಪಿಟ್ಟು, ಚಿತ್ರಾನ್ನ, ರೈಸ್‌ಬಾತ್ ತಪ್ಪಿದರೆ ಇಡ್ಲಿ, ವಡೆ ಸಾಂಬಾರ್, ದೋಸೆ. ಸಾಕಪ್ಪ ಸಾಕು ಎನ್ನುವ ಮಂದಿಗೆ ಇಲ್ಲಿದೆ ಹೊಸ ಬಾತ್ ಐಟಂ. ನಿಮ್ಮ ನಾಲಗೆ ರುಚಿ ತಣಿಸಲು ಹಾಗೂ ನಿಮ್ಮ ವಾರದ ಉಪಹಾರ ಪಟ್ಟಿಗೆ ಇದನ್ನು ಹೊಸದಾಗಿ ಸೇರ್ಪಡಿಸಿಕೊಳ್ಳಬಹುದು. ಪಾಕಶಾಸ್ತ್ರದಲ್ಲಿ ಆಆಇಈ ಕಲಿಯುತ್ತಿರುವವರು ಸುಲಭವಾಗಿ ಮಾಡಬಹುದಾದ ಅಡುಗೆ. ಒಮ್ಮೆ ಪ್ರಯತ್ನಿಸಿ.

ಬೇಕಾಗುವ ಪದಾರ್ಥಗಳು:
ಅಕ್ಕಿ : 1ಲೋಟ
ದೊಡ್ಡ ಗಾತ್ರದ ಈರುಳ್ಳಿ :2
ದೊಡ್ಡ ಗಾತ್ರದಟೊಮಾಟೋ: 3
ಹೂಕೋಸು:1
ಕೆಂಪು ಮೆಣಸಿನಕಾಯಿ ಪುಡಿ: ಅರ್ಧ ಚಮಚ
ಗರಂ ಮಸಾಲ ಪುಡಿ: ಅರ್ಧ ಚಮಚ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು: ಸ್ವಲ್ಪ
ಎಣ್ಣೆ : 2 ಚಮಚ
ನಿಂಬೆಹಣ್ಣು: 1
ಉಪ್ಪು:ರುಚಿಗೆ ತಕ್ಕಷ್ಟು
ಮಸಾಲೆ ತಯಾರಿಕೆ: ಸಣ್ಣ ಈರುಳ್ಳಿ- 7 ;ಹಸಿರು ಮೆಣಸಿನ ಕಾಯಿ- 4; ಹಸಿ ಶುಂಠಿಯ ಸಣ್ಣ ತುಂಡು. ಮೊದಲು ಈರುಳ್ಳಿ ಮತ್ತು ಮೆಣಸಿನಕಾಯಿಯನ್ನು ಅರ್ಧ ಚಮಚ ಎಣ್ಣೆಯಲ್ಲಿ ಹುರಿಯಿರಿ. ನಂತರ ಹಸಿ ಶುಂಠಿಯೊಂದಿಗೆ ಅದನ್ನು ರುಬ್ಬಿಕೊಳ್ಳಿರಿ.
ಮಾಡುವ ವಿಧಾನ:
ಈರುಳ್ಳಿಯನ್ನು ಮೊದಲು ಸಣ್ಣಗೆ ಹೆಚ್ಚಿಕೊಳ್ಳಿ. ಟೊಮಾಟೊವನ್ನು 10 ನಿಮಿಷ ಬಿಸಿನೀರಿನಲ್ಲಿ ನೆನೆಸಿ. ಅದರ ಸಿಪ್ಪೆ ತೆಗೆದು ರುಬ್ಬಿಟ್ಟುಕೊಳ್ಳಿ. ಈಗ ಶೋಧಿಸಿ, ತಿರುಳನ್ನು ಬೇರ್ಪಡಿಸಿರಿ. ಹೂಕೋಸನ್ನು ಸಣ್ಣ ತುಂಡುಗಳಾಗಿ ಹೆಚ್ಚಿ. ಅದನ್ನು ಉಪ್ಪು ಮತ್ತು ಅರಿಶಿನಪುಡಿ ಸೇರಿಸಿದ ನೀರಿನಲ್ಲಿ ನೆನೆಸಿ. ಕೆಲ ನಿಮಿಷಗಳ ನಂತರ ಹೂಕೋಸನ್ನು ಹೊರತೆಗೆದು ಗರಿಗರಿಯಾಗಿ ಎಣ್ಣೆಯಲ್ಲಿ ಹುರಿದಿಟ್ಟುಕೊಳ್ಳಿ.
ಹಸಿ ಬಟಾಣಿಯನ್ನು ಪ್ರತ್ಯೇಕವಾಗಿ ಬೇಯಿಸಿಕೊಳ್ಳಿ. ಎರಡು ಲೋಟ ನೀರಿನಲ್ಲಿ ಅಕ್ಕಿಯನ್ನು ನೆನೆಸಿ. ಕುಕ್ಕರಿನಲ್ಲಿ ಬೇಯಿಸಿರಿ. ಅದು ತಣ್ಣಗಾಗಲು ಮತ್ತು ಹುಡಿ ಹುಡಿಯಾಗಲು ಸ್ವಲ್ಪ ಕಾಲ ಅಗಲವಾದ ಪಾತ್ರೆಯಲ್ಲಿ ಹರಡಿ.
ಪಾತ್ರೆಯೊಂದರಲ್ಲಿ ಎಣ್ಣೆ ಬಿಸಿ ಮಾಡಿ. ಈರುಳ್ಳಿಯನ್ನು ಹೊಂಬಣ್ಣಕ್ಕೆ ಹುರಿದುಕೊಳ್ಳಿ. ಇದಕ್ಕೆ ರುಬ್ಬಿಟ್ಟುಕೊಂಡ ಟೊಮಾಟೊ ಹಾಗೂ ಈರುಳ್ಳಿ , ಹಸಿ ಶುಂಠಿಯ ಮಸಾಲೆ ಸೇರಿಸಿ. ನೀರಿನ ಅಂಶ ಇಂಗುವವರೆಗೆ ಹುರಿಯಿರಿ. ಈಗ ಉಪ್ಪು, ಕೆಂಪು ಮೆಣಸಿನಪುಡಿ, ಗರಂ ಮಸಾಲೆ ಮತ್ತು ಬೇಯಿಸಿದ ಬಟಾಣಿ ಸೇರಿಸಿ ಚೆನ್ನಾಗಿ ಕಲಸಿರಿ. ನಂತರ ಈ ಪಾತ್ರೆಗೆ ಮೊದಲೇ ತಯಾರಿಸಿಕೊಂಡ ಅನ್ನ ಮತ್ತು ಅರ್ಧದಷ್ಟು ಹುರಿದಿಟ್ಟ ಹೂಕೋಸನ್ನು ಸೇರಿಸಿ. ಕೆಲ ನಿಮಿಷಗಳಕಾಲ, ಅನ್ನ ಬಿಸಿಯಾಗುವವರೆಗೆ ಹುರಿಯಿರಿ. ನಂತರ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ. ಅದಕ್ಕೆ ಹುರಿದ ಗೋಡಂಬಿ, ನಿಂಬೆ ಹಣ್ಣಿನ ರಸವನ್ನು ಸೇರಿಸಿ, ಚೆನ್ನಾಗಿ ಕಲಸಿ.
ಉಳಿದ ಹುರಿದ ಹೂಕೋಸು, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ತಾಜಾ ತೆಂಗಿನಕಾಯಿ ತುರಿಯಿಂದ ಬಾತ್ ಅನ್ನು ಅಲಂಕರಿಸಿ ಸವಿಯಬಹುದು.

ಬಲ್ಲವನೇ ಬಲ್ಲ ಕಿತ್ತಳೆ ಪಲಾವ್ ರುಚಿಯ

*ಪುಷ್ಪಮಾಲಾ, ಮೈಸೂರು
ಈಗಾಗಲೇ ಬಗೆಬಗೆಯ ಪಲಾವ್‌ಗಳನ್ನು ಸವಿದಿರಬಹುದು. ಆದರೆ ಪಂಚೇಂದ್ರಿಯಗಳನ್ನು ಪ್ರೇರಿಪಿಸುವ ಕಿತ್ತಳೆ ಪಲಾವನ್ನುಸವಿದಿರುವವರು ಬಹಳ ಅಪರೂಪ. ಎಲ್ಲ ಪಲಾವ್‌ಗಳಂತೆ ಇದನ್ನು ತಯಾರಿಸುವುದು ತುಂಬಾ ಸುಲಭ.ಈ ಪಲಾವ್‌ಗೆ ಬಳಸುವ ಪದಾರ್ಥಗಳಲ್ಲಿ ಕಿತ್ತಳೆ ಹಣ್ಣು ಬಹಳ ಪ್ರಮುಖ. ಸ್ವಲ್ಪ ಸಿಹಿ, ಒಂಚೂರು ಹುಳಿ,ಖಾರ ಎಲ್ಲವೂ ಬೆರೆತ ಪಲಾವ್‌ನಾಲಿಗೆ ಮೇಲೆ ಹೊರಳುತ್ತಿದ್ದರೆ...ಬಲ್ಲವನೇ ಬಲ್ಲ ಪಲಾವ್‌ರುಚಿಯ!
ಬೇಕಾಗುವ ಪದಾರ್ಥಗಳು
ಬಾಸ್ಮತಿ ಅಕ್ಕಿ: 1 ಲೋಟ
ಹಣ್ಣಾದ ಕಿತ್ತಳೆ: 3
ಬೀಜ ರಹಿತ ದ್ರಾಕ್ಷಿ: ¼ ಕಪ್
ಗೋಡಂಬಿ: 1 ಚಮಚ
ತಾಜಾ ತೆಂಗಿನಕಾಯಿ ತುರಿ: ¼ ಕಪ್
ಏಲಕ್ಕಿ:2
ದಾಲ್ಚಿನ್ನಿ: 1 ಇಂಚಿನ ತುಂಡು
ಪಲಾವ್ ಎಲೆ: 1
ಕಿತ್ತಳೆ ಕೆಂಪು ಬಣ್ಣ: 1 ಚುಟುಕೆ
ಈರುಳ್ಳಿ: 2
ಹಸಿರು ಮೆಣಸಿನಕಾಯಿ: 4 ಅಥವಾ 5
ಬೆಳ್ಳ್ಳುಳ್ಳಿ: 5 ತೊಳೆ
ತುಪ್ಪ; 3 ಚಮಚ
ಶುಂಠಿ: ¼ ಇಂಚಿನ ಒಂದು ತುಂಡು
ಕೊತ್ತಂಬರಿ ಸೊಪ್ಪು: ' ಕಟ್ಟು
ಉಪ್ಪು: ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ
ಮೊದಲು ಬಾಸ್ಮತಿ ಅಕ್ಕಿಯನ್ನು ಶುದ್ಧವಾದ ನೀರಿನಲ್ಲಿ ತೊಳೆದುಕೊಂಡು 10 ನಿಮಿಷ ನೀರಿನಲ್ಲಿ ನೆನೆಸಿ. ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ತೆಳ್ಳಗೆ ಉದ್ದುದ್ದವಾಗಿ ಸೀಳಿರಿ. ತೆಂಗಿನಕಾಯಿ ತುರಿಯಿಂದ, ತೆಂಗಿನ ಹಾಲನ್ನು ಹಿಂಡಿ ತೆಗೆಯಿರಿ. 1 ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದು ಪಕ್ಕಕ್ಕಿಡಿ. ಇನ್ನೆರಡು ಕಿತ್ತಳೆ ಹಣ್ಣಿನಿಂದ ಬೀಜಗಳನ್ನು ಬೇರ್ಪಡಿಸಿ, ರಸ ಕಿವುಚಿಕೊಳ್ಳಿ. ಶುಂಠಿ ಮತ್ತು ಬೆಳ್ಳುಳ್ಳಿಯನ್ನು ನುಣ್ಣಗೆ ರುಬ್ಬಿಟ್ಟುಕೊಳ್ಳಿ.
ನಂತರ ಪ್ರೆಜರ್ ಪ್ಯಾನಿನಲ್ಲಿ ತುಪ್ಪವನ್ನು ಬಿಸಿ ಮಾಡಿ. ಇದರಲ್ಲಿ ಮಸಾಲೆ ಪದಾರ್ಥಗಳು,ಹೆಚ್ಚಿಕೊಂಡ ಹಸಿರು ಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ರುಬ್ಬಿಟ್ಟುಕೊಂಡ ಶುಂಠಿ ಮತ್ತು ಬೆಳ್ಳುಳ್ಳಿ ಹಾಗೂ ಅಕ್ಕಿಯನ್ನು ಸೇರಿಸಿ. 2 ನಿಮಿಷ ಹುರಿಯಿರಿ. ನಂತರ ಕಿತ್ತಳೆ ರಸ, ತೆಂಗಿನಕಾಯಿ ಹಾಲನ್ನು ನೀರಿನೊಂದಿಗೆ ಬೆರೆಸಿ 2 ಲೋಟ ಆಗುವಂತೆ ಮಾಡಿ ಇದನ್ನ್ನು ಪ್ರತ್ಯೇಕವಾಗಿ ಬಿಸಿ ಮಾಡಿ, ಅನ್ನದ ಮೇಲೆ ಸಾಕಷ್ಟು ಉಪ್ಪು ಮತ್ತು ಬಣ್ಣದೊಂದಿಗೆ ಸುರಿಯಿರಿ. ಸಣ್ಣ ಉರಿಯಲ್ಲಿ ಕಲಕಿ 10 ನಿಮಿಷ ಪ್ರೆಜರ್ ಪ್ಯಾನಿನಲ್ಲಿ ಬೇಯಿಸಿರಿ. ಒಲೆಯಿಂದ ಇಳಿಸಿದ ನಂತರ ಹುರಿದ ಗೋಡಂಬಿ, ಕಿತ್ತಳೆ ತೊಳೆಗಳು,ದ್ರಾಕ್ಷಿ ಮತ್ತು ಹೆಚ್ಚಿಕೊಂಡ ಕೊತ್ತಂಬರಿ ಸೊಪ್ಪನ್ನು ಬೆರೆಸಿ.
ಹೀಗೆ ತಯಾರಾದ ಪಲಾವನ್ನು ಮಸಾಲೆ ಮೊಸರು ಬಜ್ಜಿ ಅಥವಾ ತರಕಾರಿ ಮೊಸರು ಬಜ್ಜಿಯೊಂದಿಗೆ ಬಡಿಸಿಕೊಂಡು ಸವಿಯಬಹುದು.